
ಪೋರ್ಟ್ ಬ್ಲೇರ್, ಅಕ್ಟೋಬರ್ 29: ಭಾರತದ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಇಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲಾಗಿದೆ. ಅಮೆರಿಕದ ಭೌಗೋಳಿಕ ಸಮೀಕ್ಷೆ (USGS) ನೀಡಿದ ಮಾಹಿತಿಯ ಪ್ರಕಾರ, ಅಂಡಮಾನ್‌ನ ಬ್ಯಾಂಬೂ ಫ್ಲಾಟ್ ಭಾಗದಿಂದ ಉತ್ತರ-ವಾಯುವ್ಯಕ್ಕೆ ಸುಮಾರು 218 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.
ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಭೂಕಂಪನದಿಂದ ಯಾವುದೇ ಆಸ್ತಿಪಾಸ್ತಿ ಹಾನಿ ಅಥವಾ ಪ್ರಾಣಹಾನಿ ಸಂಭವಿಸಿದ ವರದಿಯಾಗಿಲ್ಲ. ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಸರಣಿ ಭೂಕಂಪನಗಳು ವರದಿಯಾಗುತ್ತಿವೆ.
ಇದನ್ನೂ ಓದಿ: ವಿಡಿಯೋ: ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ: 18 ಸಾವು, 46 ಮಂದಿಗೆ ಗಾಯ, 300ಕ್ಕೂ ಹೆಚ್ಚು ಮನೆಗಳು ನೆಲಸಮ
ಭೂಕಂಪನದ ತೀವ್ರತೆಯು ಮಧ್ಯಮ ಪ್ರಮಾಣದ್ದಾಗಿದ್ದರಿಂದ ಯಾವುದೇ ಸುನಾಮಿಯ ಮುನ್ನೆಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ ಮತ್ತು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಕರಾವಳಿ ತೀರದ ಜನರಿಗೆ ಜಾಗರೂಕರಾಗಿರಲು ಸೂಚಿಸಲಾಗಿದ್ದು, ವಿಪತ್ತು ನಿರ್ವಹಣಾ ಪಡೆಗಳು ಹಾಗೂ ಸ್ಥಳೀಯ ಆಡಳಿತ ಮಂಡಳಿ ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಿವೆ.
ಚೀನಾದ ಟಿಬೆಟ್ ವಲಯದಲ್ಲಿ 7.0 ತೀವ್ರತೆಯ ಭೀಕರ ಭೂಕಂಪ:
ಕಳೆದ ವಾರ ಚೀನಾದ ಆಡಳಿತಕ್ಕೊಳಪಟ್ಟ ಟಿಬೆಟ್ ಸ್ವಾಯತ್ತ ಪ್ರದೇಶದ ನಾಗ್ಚು ನಗರದ ಬಖೆನ್ ಕೌಂಟಿಯಲ್ಲಿ ರಾತ್ರಿ 10.33ರ ಸುಮಾರಿಗೆ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಬರೋಬ್ಬರಿ 7.0 ತೀವ್ರತೆ ದಾಖಲಾಗಿದ್ದು, ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ಕೇಂದ್ರಬಿಂದು ದಾಖಲಾಗಿತ್ತು.
ಇತ್ತೀಚೆಗಷ್ಟೇ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ರಾತ್ರಿ 8ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಭೂಕಂಪನದ ಆಘಾತಕ್ಕೆ ಜಲಪ್ರಳಯದ ಭೀತಿಕೊಂಡ ಜನರು ಭಯದಿಂದ ಮನೆಗಳಿಂದ ಹೊರಗೆ ಓಡಿಬಂದಿದ್ದರು. ಉತ್ತರಕಾಶಿಯಿಂದ ವಾಯುವ್ಯಕ್ಕೆ 2 ಕಿ.ಮೀ ದೂರದಲ್ಲಿ, 11 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದುವಿತ್ತು. ಅಕ್ಟೋಬರ್ 6ರಂದು ಚಮೋಲಿ ಜಿಲ್ಲೆಯಲ್ಲೂ 4.9 ತೀವ್ರತೆಯ ಕಂಪನ ದಾಖಲಾಗಿತ್ತು.
ಇದನ್ನೂ ಓದಿ: ಪೆಸಿಫಿಕ್ ಸಾಗರದಲ್ಲಿ ನಡುಗಿದ ಭೂಮಿ: ವನವಾಟು ದ್ವೀಪಗಳಲ್ಲಿ 3 ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ
ನೇಪಾಳದ ಸುದೂರ್ ಪಶ್ಚಿಮ ಪ್ರಾಂತ್ಯದ, ಭಾರತ-ನೇಪಾಳ ಗಡಿಗೆ ಸಮೀಪವಿರುವ ಬೆಟಾಡಿ ಜಿಲ್ಲೆಯ ದಿಲಸೈನಿ ಪ್ರದೇಶದಲ್ಲಿ 4.2 ತೀವ್ರತೆಯ ಭೂಕಂಪನ ದಾಖಲಾಗಿದೆ. ಬೆಟಾಡಿ ಹಾಗೂ ದಾರ್ಚುಲಾ ಜಿಲ್ಲೆಗಳಲ್ಲಿ ಪ್ರಕಂಪನದ ಅನುಭವವಾಗಿದೆ. ಅತ್ಯಂತ ಜಾಗೃತ ಭೂಕಂಪನ ವಲಯಗಳಾದ ಸಿಸ್ಮಿಕ್ ಝೋನ್ 4 ಮತ್ತು 5 ರ ವ್ಯಾಪ್ತಿಯಲ್ಲಿ ಹಿಮಾಲಯನ್ ರಾಷ್ಟ್ರ ನೇಪಾಳ ಇರುವುದರಿಂದ ಇಲ್ಲಿ ಆಗಾಗ ಭೂಕಂಪನಗಳು ಸಂಭವಿಸುತ್ತಿರುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ