AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್‌ನಲ್ಲಿ ಎಬೋಲಾ ಭೀತಿ; ಕಾಂಗೋದಿಂದ ಬಂದ ವ್ಯಕ್ತಿ ಅಹಮದಾಬಾದ್‌ನಲ್ಲಿ ಕ್ವಾರಂಟೈನ್

Ebola Outbreak: ಆಫ್ರಿಕಾದ ಕಾಂಗೋ ದೇಶದಿಂದ ಗುಜರಾತ್‌ಗೆ ಬಂದಿದ್ದ 37 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರಲ್ಲಿ ಎಬೋಲಾ ವೈರಸ್ ರೀತಿಯ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸದ್ಯಕ್ಕೆ ಅವರ ಮೊದಲ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಉಗಾಂಡಾ ಮಹಿಳೆಯ ಎಬೋಲಾ ಪರೀಕ್ಷಾ ವರದಿ ನೆಗೆಟಿವ್ ಬಂದ ಬೆನ್ನಲ್ಲೇ ಗುಜರಾತ್‌ನಲ್ಲಿ ಈ ಮೊದಲ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ.

ಗುಜರಾತ್‌ನಲ್ಲಿ ಎಬೋಲಾ ಭೀತಿ; ಕಾಂಗೋದಿಂದ ಬಂದ ವ್ಯಕ್ತಿ ಅಹಮದಾಬಾದ್‌ನಲ್ಲಿ ಕ್ವಾರಂಟೈನ್
Ebola TestImage Credit source: x
ಸುಷ್ಮಾ ಚಕ್ರೆ
|

Updated on:May 27, 2026 | 8:38 PM

Share

ಅಹಮದಾಬಾದ್, ಮೇ 27: ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ ಎಬೋಲಾ (Ebola)  ವೈರಸ್ ಭಾರತಕ್ಕೂ ಎಂಟ್ರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ ಗುಜರಾತ್‌ಗೆ ಮರಳಿದ್ದ 37 ವರ್ಷದ ಬ್ಯಾಂಕರ್ ಒಬ್ಬರಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿವೆ. ಇದು ಗುಜರಾತ್ ರಾಜ್ಯದಲ್ಲೇ ವರದಿಯಾಗಿರುವ ಮೊದಲ ಶಂಕಿತ ಪ್ರಕರಣವಾಗಿದೆ.

ಈ ವ್ಯಕ್ತಿ ಕಾಂಗೋದಿಂದ ಮುಂಬೈ ಮಾರ್ಗವಾಗಿ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ವಡೋದರಾದಲ್ಲಿದ್ದಾಗ ಅವರಿಗೆ ತೀವ್ರ ಜ್ವರ ಸೇರಿದಂತೆ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ವಿಶೇಷವಾಗಿ ಸಿದ್ಧಪಡಿಸಲಾದ ಎಬೋಲಾ ಐಸೊಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ. ವೈದ್ಯಕೀಯ ತಂಡಗಳು ಅವರ ಮೇಲೆ ನಿರಂತರ ನಿಗಾ ಇಟ್ಟಿವೆ. ಪ್ರಾಥಮಿಕ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಮುಂದಿನ ಎಲ್ಲಾ ಪರೀಕ್ಷಾ ವರದಿಗಳು ನೆಗೆಟಿವ್ ಬರುವವರೆಗೂ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಎಬೋಲಾ ಆತಂಕ; ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್‌ ಪ್ರಯಾಣಿಕರಿಗೆ ಭಾರತದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನ ಶಂಕಿತ ಪ್ರಕರಣ ನೆಗೆಟಿವ್:

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಇತ್ತೀಚೆಗೆ ಆತಂಕ ಮೂಡಿಸಿದ್ದ ಉಗಾಂಡಾದ 28 ವರ್ಷದ ಮಹಿಳೆಯ ಎಬೋಲಾ ಪರೀಕ್ಷಾ ವರದಿ ‘ನೆಗೆಟಿವ್’ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಆಕೆಗೆ ಮೈಕೈ ನೋವು ಸೇರಿದಂತೆ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಂಡಾಗ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಿ, ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಂಸ್ಥೆಗೆ ಕಳುಹಿಸಲಾಗಿತ್ತು. ಸದ್ಯ ಆಕೆ ಸುರಕ್ಷಿತವಾಗಿದ್ದಾರೆ.

ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ಹರಡುತ್ತಿರುವುದರಿಂದ ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ. ಆಫ್ರಿಕಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಕನಿಷ್ಠ 21 ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಎಬೋಲಾ ಎಂದರೇನು?:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಬೋಲಾ ಪ್ರಾಣಿಗಳಿಂದ (ಮುಖ್ಯವಾಗಿ ಬಾವಲಿ, ಮುಳ್ಳುಹಂದಿ ಇತ್ಯಾದಿ) ಮನುಷ್ಯರಿಗೆ ಮತ್ತು ನಂತರ ಮನುಷ್ಯರಿಂದ ಮನುಷ್ಯರ ದೈಹಿಕ ದ್ರವಗಳ (ಬೆವರು, ರಕ್ತ) ಸಂಪರ್ಕದ ಮೂಲಕ ಹರಡುವ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಇದುವರೆಗೆ ಯಾವುದೇ ಅಧಿಕೃತ ಎಬೋಲಾ ಪ್ರಕರಣಗಳು ದೃಢಪಟ್ಟಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Wed, 27 May 26

Follow Us