ಎಸ್‌ಐಆರ್ ವಿವಾದದ ನಡುವೆ ಚುನಾವಣಾ ಆಯೋಗದ ಮಹತ್ವದ ಸಭೆ; ಫಾರ್ಮ್ 6 ಕುರಿತು ಸ್ಪಷ್ಟನೆ

ಎಸ್​ಐಆರ್​ ಕುರಿತು ಚುನಾವಣಾ ಆಯೋಗದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವರದಿಯ ವಿವಾದದ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ಇಂದು ನಡೆದ ಮೊದಲ ಸಭೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಎಸ್‌ಐಆರ್ ಅಭಿಯಾನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದೆ. ಆಯೋಗವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮ್ಯಾಪಿಂಗ್ ಆಗದಿರುವ ಮತ್ತು ತಾರ್ಕಿಕ ವ್ಯತ್ಯಾಸಗಳ ಕಾರಣಕ್ಕಾಗಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ನೋಂದಣಿ ಅಧಿಕಾರಿ (ಇಆರ್​ಒ) ಮುಂದೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಸ್‌ಐಆರ್ ವಿವಾದದ ನಡುವೆ ಚುನಾವಣಾ ಆಯೋಗದ ಮಹತ್ವದ ಸಭೆ; ಫಾರ್ಮ್ 6 ಕುರಿತು ಸ್ಪಷ್ಟನೆ
ಚುನಾವಣಾ ಆಯೋಗದ ಸಭೆ

Updated on: Sep 26, 2026 | 7:19 PM

ನವದೆಹಲಿ, ಸೆಪ್ಟೆಂಬರ್ 26: ಮತದಾರರ ಪಟ್ಟಿಯ ಎಸ್​ಐಆರ್​ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಬಗೆಗಿನ ವರದಿಗಳು ಹಾಗೂ ಸರಣಿ ವಿವಾದಗಳ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಇಂದು ತನ್ನ ಮಹತ್ವದ ಸಭೆಯನ್ನು ನಡೆಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಉಪಸ್ಥಿತಿಯಲ್ಲಿ ದೆಹಲಿಯಲ್ಲಿ ಈ ಸಭೆ ನಡೆಯಿತು. ಈ ಸಭೆಯ ನಂತರ ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆ, ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಯವರ ಪತ್ರ ಹಾಗೂ ಹೊಸ ಮತದಾರರ ನೋಂದಣಿಯ ಫಾರ್ಮ್ 6 ಕುರಿತು ಸ್ಪಷ್ಟನೆಗಳನ್ನು ನೀಡಿದೆ.

ಎಸ್‌ಐಆರ್ ಅಭಿಯಾನಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸುವ ಕುರಿತು ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಯವರಿಗೆ ಬರೆದಿದ್ದ ಪತ್ರದ ವಿಚಾರದಲ್ಲಿ ಎದ್ದಿದ್ದ ವದಂತಿಗಳಿಗೆ ಆಯೋಗ ತೆರೆ ಎಳೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ (ಎಸ್​ಐಆರ್​) ಹಾಗೂ ಚುನಾವಣಾ ಕಾರ್ಯಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸುವುದು ಸಂವಿಧಾನದ ವಿಧಿ 324(6)ರ ಅಡಿಯಲ್ಲಿ ಚುನಾವಣಾ ಆಯೋಗಕ್ಕಿರುವ ಹಕ್ಕಾಗಿದೆ. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಿಬ್ಬಂದಿಗಳ ನಿಯೋಜನೆ, ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್​ಒ) ಅಗತ್ಯ ಮೂಲಸೌಕರ್ಯ ಹಾಗೂ ತಾಂತ್ರಿಕ ಬೆಂಬಲವನ್ನು ಸುಲಭವಾಗಿ ಒದಗಿಸಲು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಕೋರಿಕೆ ಸಲ್ಲಿಸಲಾಗಿತ್ತೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಹಸ್ತಕ್ಷೇಪವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.


ಫಾರ್ಮ್ 6 ಕುರಿತು ಸ್ಪಷ್ಟನೆ:

ಹೊಸ ಮತದಾರರ ಸೇರ್ಪಡೆ ಮತ್ತು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಗೊಂದಲಗಳನ್ನು ನಿವಾರಿಸಲು ಫಾರ್ಮ್ 6 ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ತಾಂತ್ರಿಕ ವ್ಯತ್ಯಾಸ ಅಥವಾ ಅನ್‌ಮ್ಯಾಪ್ ಆಗಿರುವ ನಾಗರಿಕರು ಹೊಸದಾಗಿ ‘ಫಾರ್ಮ್ 6’ ಭರ್ತಿ ಮಾಡುವ ಅಗತ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಸೇರಲು ಅರ್ಹತೆಯನ್ನು ಹೊಂದಿರುವ, ಇದೇ ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಹೊಸ ಮತದಾರರು ಮಾತ್ರ ಫಾರ್ಮ್ 6 ಅನ್ನು ಬಳಸಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ನೋಟಿಸ್ ಪಡೆದವರು ಏನು ಮಾಡಬೇಕು?:

ಈಗಾಗಲೇ ನೋಟಿಸ್ ಪಡೆದ ಮತದಾರರು ಅಧಿಕಾರಿಗಳ (ಇಆರ್​ಒ) ಮುಂದೆ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ. ಬೂತ್ ಮಟ್ಟದ ಅಧಿಕಾರಿಗಳೇ (ಬಿಎಲ್​ಒ) ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ‘ECINet’ ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇಆರ್‌ಒ ನಿರ್ಧರಿಸುವ ವಿನಾಯಿತಿ ಪ್ರಕರಣಗಳಲ್ಲಿ ಮಾತ್ರ ವಿಚಾರಣೆ ನಡೆಯಲಿದ್ದು, ಅದನ್ನು ಆದಷ್ಟು ಆನ್‌ಲೈನ್‌ನಲ್ಲೇ ನಡೆಸಲಾಗುವುದು. ಅಗತ್ಯವಿದ್ದರೆ ಮತದಾರರು ತಮ್ಮ ಪರವಾಗಿ ಹಾಜರಾಗಲು ಕುಟುಂಬದ ಯಾವುದೇ ವಯಸ್ಕ ಸದಸ್ಯರಿಗೆ ಅಧಿಕಾರ ನೀಡಬಹುದು.

ಇದನ್ನೂ ಓದಿ: ಎಸ್​ಐಆರ್ ವಿವಾದ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಎಸ್‌ಐಟಿ ತನಿಖೆಗೆ ಆಗ್ರಹ

ಬಡವರು, ಕಾರ್ಮಿಕರು, ರಾತ್ರಿ ತಂಗುದಾಣಗಳಲ್ಲಿ ವಾಸಿಸುವವರು ಮತ್ತು ನಿರಾಶ್ರಿತರಿಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು (DEO) ಅಗತ್ಯ ಸಂಖ್ಯೆಯ ಸಹಾಯವಾಣಿ ಕೇಂದ್ರಗಳನ್ನು ಹಾಗೂ ವಿಶೇಷ ಶಿಬಿರಗಳನ್ನು ಆಯೋಜಿಸಲಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಹಾಗೂ ಗಡುವು ವಿಸ್ತರಣೆ:

ಗೋವಾದ ಮುಖ್ಯ ಚುನಾವಣಾಧಿಕಾರಿ ಅವರು ಬಿಟ್ಟುಹೋದ ಮತದಾರರಿಂದ ಅರ್ಜಿಗಳನ್ನು ಸಂಗ್ರಹಿಸಲು ಬಿಎಲ್​ಒಗಳಿಗೆ ಮನೆ ಮನೆಗೆ ಭೇಟಿ ನೀಡಲು ಸೂಚಿಸಿದ್ದಾರೆ. ಒಟ್ಟು 97 ಮತದಾರರಲ್ಲಿ ಈಗಾಗಲೇ 81 ಜನರು ಹೆಸರು ಸೇರ್ಪಡೆಗಾಗಿ ‘ಫಾರ್ಮ್ 6’ ಭರ್ತಿ ಮಾಡಿದ್ದಾರೆ. ದೆಹಲಿಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವನ್ನು ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಈ ಗಡುವನ್ನು ಅಕ್ಟೋಬರ್ 12ರವರೆಗೆ ವಿಸ್ತರಿಸಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ, ಆಯೋಗವು ದೇಶಾದ್ಯಂತ ‘ಎಸ್‌ಐಆರ್’ ಸೇರಿದಂತೆ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಿಹಾರದಿಂದ ಪ್ರಾರಂಭಿಸಿ, ನಂತರ ಪಶ್ಚಿಮ ಬಂಗಾಳ ಮತ್ತು ಇತರ 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲು 2025ರ ಜೂನ್ 24ರಂದು ನೀಡಲಾದ ಎಸ್‌ಐಆರ್ ಆದೇಶವನ್ನು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ 2026ರ ಮೇ 27ರ ಆದೇಶದ ಮೂಲಕ ಎತ್ತಿಹಿಡಿದಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಸ್‌ಐಆರ್ ವೇಳಾಪಟ್ಟಿಯನ್ನು 2025ರ ಅಕ್ಟೋಬರ್ 27ರಂದು ಹಾಗೂ 19 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವೇಳಾಪಟ್ಟಿಯನ್ನು 2026ರ ಮೇ 14ರಂದು ಆಯೋಗದ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಯಿತು ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ವಿದೇಶದಲ್ಲಿರುವ ಮತದಾರರಿಗೆ ಎಸ್‌ಐಆರ್‌ ಸಂಕಷ್ಟ: ಖುದ್ದು ವಿಚಾರಣೆಗೆ ಹಾಜರಾಗದಿದ್ದರೆ ಬೇರೇನು ಆಯ್ಕೆಗಳಿವೆ? ಇಲ್ಲಿದೆ ವಿವರ

20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣ:

ಭಾರತೀಯ ಚುನಾವಣಾ ಆಯೋಗವು ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್​ಐಆರ್​ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ತಿಳಿಸಿದೆ. ಮತದಾರರ ಪಟ್ಟಿಯಿಂದ ಹೊರಗುಳಿದಿರುವವರು, ಸೇರಿದಂತೆ ಯುವಕರು ಮತ್ತು ಹೊಸದಾಗಿ ಸೇರ್ಪಡೆಗೊಂಡ ಮತದಾರರು, ನಿರಂತರ ಅಪ್‌ಡೇಟ್ ಪ್ರಕ್ರಿಯೆಯ ಮೂಲಕ ತಮ್ಮ ಹೆಸರುಗಳನ್ನು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಆಯೋಗದ ಮತದಾರರ ಪೋರ್ಟಲ್‌ನಲ್ಲಿ ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಹುಡುಕಲು ಹಾಗೂ ತಮಗೆ ಬಂದಿರುವ ನೋಟಿಸ್‌ಗಳಿಗೆ ಪ್ರತಿಯಾಗಿ ದಾಖಲೆಗಳನ್ನು ಸಲ್ಲಿಸಲು ಸೌಲಭ್ಯಗಳನ್ನು ಒದಗಿಸಲಾಗಿದೆ.


ಚುನಾವಣಾ ಆಯೋಗದ ಸಮರ್ಥನೆ:

ಎಸ್‌ಐಆರ್ ಅಭಿಯಾನದ ಕುರಿತು ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ವರದಿಗಳ ನಡುವೆಯೂ, ಎಸ್‌ಐಆರ್ ಆದೇಶ ಹಾಗೂ ತದನಂತರದ ವೇಳಾಪಟ್ಟಿಗಳನ್ನು ಪೂರ್ಣ ಆಯೋಗವು ಸರ್ವಾನುಮತದಿಂದ ಅನುಮೋದಿಸಿದೆ ಎಂದು ಆಯೋಗವು ಪುನರುಚ್ಚರಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಎಸ್‌ಐಆರ್ ಆದೇಶವನ್ನು 2025ರ ಜೂನ್ 24ರಂದು ಹೊರಡಿಸಲಾಗಿತ್ತು ಎಂದು ಆಯೋಗ ಹೇಳಿದೆ. ಈ ಪ್ರಕ್ರಿಯೆಯು ಬಿಹಾರದಿಂದ ಪ್ರಾರಂಭವಾಗಿ, ನಂತರ ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟಿತ್ತು. ಎಸ್‌ಐಆರ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಆಯೋಗವು ಉಲ್ಲೇಖಿಸಿದೆ. ವಿಭಿನ್ನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗುಂಪುಗಳ ವೇಳಾಪಟ್ಟಿಗಳನ್ನು ಪೂರ್ಣ ಆಯೋಗದ ಅನುಮೋದನೆಯೊಂದಿಗೆ ನಂತರ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Sat, 26 September 26

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us