AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಅಸ್ಸಾಂನಲ್ಲಿ ಗೌರವ್ ಗೊಗೊಯ್ ಬಂಧನ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮೂವರು ಸದಸ್ಯರ ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯದ ವರದಿ ಬಹಿರಂಗಗೊಂಡ ಬೆನ್ನಲ್ಲೇ, ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ವಜಾಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದೆ. ಅಸ್ಸಾಂನ ಗುವಾಹಟಿಯಲ್ಲಿ ಬೃಹತ್ ರ‍್ಯಾಲಿ ನಡೆಸುತ್ತಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ; ಅಸ್ಸಾಂನಲ್ಲಿ ಗೌರವ್ ಗೊಗೊಯ್ ಬಂಧನ
ಗೌರವ್ ಗೊಗೊಯ್ ಬಂಧನImage Credit source: PTI
ಸುಷ್ಮಾ ಚಕ್ರೆ
|

Updated on:Sep 25, 2026 | 4:38 PM

Share

ನವದೆಹಲಿ, ಸೆಪ್ಟೆಂಬರ್ 25: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯದ ವರದಿಗಳು ಬಹಿರಂಗಗೊಂಡ ಬೆನ್ನಲ್ಲೇ, ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ಇಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದೆ. ಈ ವೇಳೆ ಅನೇಕ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರೆಯ ಮೇರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಪ್ರತಿಭಟನೆ ವೇಳೆ ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಸೇರಿದಂತೆ ಹಲವು ಹಿರಿಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಸ್ಸಾಂನಲ್ಲಿ ನಡೆದ ಬೃಹತ್ ರ‍್ಯಾಲಿ ವೇಳೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರನ್ನು ಪೊಲೀಸರು ಬಂಧಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಗೌರವ್ ಗೊಗೊಯ್, “ಜ್ಞಾನೇಶ್ ಕುಮಾರ್ ಪ್ರಜಾಪ್ರಭುತ್ವದ ವಿರುದ್ಧ ಅಪರಾಧ ಎಸಗಿದ್ದು, ದೇಶದ್ರೋಹದ ಕೆಲಸ ಮಾಡಿದ್ದಾರೆ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು” ಎಂದು ಆಗ್ರಹಿಸಿದರು.

ಮಣಿಪುರದ ಇಂಫಾಲದ ಲ್ಯಾಂಫೆಲ್‌ಪ್ಯಾಟ್‌ನಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ನಡೆಯಿತು. ಪರಿಸ್ಥಿತಿ ಕೈಮೀರಿದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಕಾರ್ಯಕರ್ತರು ಸಿಇಸಿ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹಿಸಿದರು.

ಇದನ್ನೂ ಓದಿ: ಎಸ್​ಐಆರ್ ವಿವಾದ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಎಸ್‌ಐಟಿ ತನಿಖೆಗೆ ಆಗ್ರಹ

ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶುಭಂಕರ್ ಸರ್ಕಾರ್ ನೇತೃತ್ವದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಸಿಇಒ ಕಚೇರಿಯತ್ತ ಹೊರಟ ಬೃಹತ್ ರ‍್ಯಾಲಿಯನ್ನು ಬಿ.ಬಿ. ಗಂಗೂಲಿ ರಸ್ತೆಯಲ್ಲಿ ಪೊಲೀಸರು ತಡೆದರು. ಕಾರ್ಯಕರ್ತರು ರಸ್ತೆಯಲ್ಲೇ ಚುನಾವಣಾ ಆಯುಕ್ತರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಮತದಾರರ ಹಕ್ಕುಗಳ ಉಲ್ಲಂಘನೆ ಮತ್ತು ಮತದಾರರ ಪಟ್ಟಿ ಮ್ಯಾನಿಪುಲೇಷನ್ ಆರೋಪದ ಮೇಲೆ ಸಿಇಸಿ ಜ್ಞಾನೇಶ್ ಕುಮಾರ್ ಹಾಗೂ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.

ಚಂಡೀಗಢದಲ್ಲಿ ರಾಜಭವನ ಹಾಗೂ ಚುನಾವಣಾ ಆಯೋಗದ ಕಚೇರಿಯತ್ತ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದರು. ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರದಲ್ಲೂ ಪ್ರತಿಭಟನೆ ನಡೆಸಲಾಯಿತು. ಡೆಹ್ರಾಡೂನ್‌ನಲ್ಲಿ ಕುಮಾರಿ ಸೆಲ್ಜಾ ಮತ್ತು ಗಣೇಶ್ ಗೊಡಿಯಾಲ್ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಶ್ರೀನಗರದಲ್ಲಿ ಕಾಂಗ್ರೆಸ್ ಶಾಸಕರು ಶಾಸನಸಭೆಯ ಒಳಗಡೆಯೇ ಬ್ಯಾನರ್ ಹಿಡಿದು ಸಿಇಸಿ ರಾಜೀನಾಮೆಗೆ ಆಗ್ರಹಿಸಿದರು.

ಇದನ್ನೂ ಓದಿ: ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಆಗ್ರಹ, ಅಕ್ಟೋಬರ್ 2ರಿಂದ ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ

ದೆಹಲಿಯ ರೈಸಿನಾ ರಸ್ತೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಅಧ್ಯಕ್ಷ ಉದಯ ಭಾನು ಚಿಬ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಕಾರ್ಯಕರ್ತರು ಜ್ಞಾನೇಶ್ ಕುಮಾರ್ ಅವರ ಮಾಸ್ಕ್ ಧರಿಸಿ ಹಾಗೂ ಕೈಗಳಿಗೆ ಚೈನ್ ಕಟ್ಟಿಕೊಂಡು ಚುನಾವಣಾ ಆಯೋಗದ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸಿದರು.

ಚುನಾವಣಾ ಆಯೋಗದ ಸ್ಪಷ್ಟನೆ:

ಮೂವರು ಸದಸ್ಯರ ಆಯೋಗದಲ್ಲಿ ಇಬ್ಬರು ಆಯುಕ್ತರು 14 ಬಾರಿ ಆಕ್ಷೇಪಣೆ ಎತ್ತಿದ್ದಾರೆ ಎಂಬ ಆರೋಪವನ್ನು ಚುನಾವಣಾ ಆಯೋಗ ಸಂಪೂರ್ಣವಾಗಿ ತಳ್ಳಿಹಾಕಿದೆ. “ಬಹು-ಸದಸ್ಯ ಉನ್ನತ ಸಾಂವಿಧಾನಿಕ ಸಂಸ್ಥೆಯಲ್ಲಿ ಆಡಳಿತಾತ್ಮಕ ಸಲಹೆಗಳು, ಆಂತರಿಕ ಅಭಿಪ್ರಾಯಗಳು ಮತ್ತು ಚರ್ಚೆಗಳು ಸಹಜ ಪ್ರಕ್ರಿಯೆಯಾಗಿದೆ. ಸಿಇಸಿ ಹಾಗೂ ಇಬ್ಬರೂ ಆಯುಕ್ತರು ಸರ್ವಸಮ್ಮತಿಯಿಂದಲೇ ಎಸ್‌ಐಆರ್ ಸೇರಿದಂತೆ ಎಲ್ಲ ಅಂತಿಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ” ಎಂದು ಆಯೋಗ ಸ್ಪಷ್ಟಪಡಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದ ಏಕಪಕ್ಷೀಯ ನಿರ್ಧಾರಗಳನ್ನು ಪ್ರಶ್ನಿಸಿ ಹಾಗೂ ಹೆಸರುಗಳ ಅಕ್ರಮ ತೆಗೆದುಹಾಕುವಿಕೆ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್​ಐಟಿ) ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Fri, 25 September 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More