2 ರಾಜ್ಯಗಳಲ್ಲಿ ಮತದಾರರಾಗಿ ನೋಂದಣಿ; ಪ್ರಶಾಂತ್ ಕಿಶೋರ್ಗೆ ಚುನಾವಣಾ ಆಯೋಗದಿಂದ ನೋಟಿಸ್
ಬಿಹಾರ ಮತ್ತು ಪಶ್ಚಿಮ ಬಂಗಾಳ ಎರಡರಲ್ಲೂ ಮತದಾರರಾಗಿ ಸೇರ್ಪಡೆಗೊಂಡಿದ್ದಕ್ಕಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಎರಡು ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಪ್ರಶಾಂತ್ ಕಿಶೋರ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, 3 ದಿನಗಳಲ್ಲಿ ಕಾರಣಗಳನ್ನು ವಿವರಿಸಲು ಸೂಚಿಸಲಾಗಿದೆ.

ನವದೆಹಲಿ, ಅಕ್ಟೋಬರ್ 28: ಬಿಹಾರ (Bihar) ಮತ್ತು ಪಶ್ಚಿಮ ಬಂಗಾಳ (West Bengal) ಎರಡು ರಾಜ್ಯಗಳಲ್ಲೂ ಮತದಾರರ ಪಟ್ಟಿಯಲ್ಲಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಹೆಸರು ಕಾಣಿಸಿಕೊಂಡಿತ್ತು. ಈ ವಿಷಯ ಬೆಳಕಿಗೆ ಬಂದ ನಂತರ ಚುನಾವಣಾ ತಂತ್ರಜ್ಞ ಮತ್ತು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ (Prashant Kishor) ಅವರಿಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ.
ಬಿಹಾರದ ರೋಹ್ಟಾಸ್ ಜಿಲ್ಲೆಯ ಸಸಾರಾಮ್‌ನಲ್ಲಿ ಕಾರ್ಗಹರ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೊರಡಿಸಿದ ನೋಟಿಸ್ ಪ್ರಕಾರ, ಪ್ರಶಾಂತ್ ಕಿಶೋರ್ ಅವರ ಹೆಸರು ಕಾರ್ಗಹರ್‌ನ ಪಾರ್ಟ್ 367 (ಮಿಡಲ್ ಸ್ಕೂಲ್, ಕೋನಾರ್, ಉತ್ತರ ವಿಭಾಗ) ಮತಗಟ್ಟೆ ಸಂಖ್ಯೆ 621ರಲ್ಲಿ EPIC (ಮತದಾರರ ಗುರುತಿನ ಚೀಟಿ) ಸಂಖ್ಯೆ 1013123718ನೊಂದಿಗೆ ಮತದಾರರ ಪಟ್ಟಿಯಲ್ಲಿತ್ತು.
ಇದರ ಜೊತೆಗೆ ಅವರ ಹೆಸರು ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಸೇಂಟ್ ಹೆಲೆನ್ ಶಾಲೆ, ಬಿ ರಾಣಿಶಂಕರಿ ಲೇನ್‌ನಲ್ಲಿ ಮತದಾನ ಕೇಂದ್ರವಿದೆ.
Bihar | Returning Officer, Kargahar Assembly Constituency writes to Jan Suraaj Founder Prashant Kishor
“According to a news item published on 28.10.2025, your name is registered in the electoral rolls of Bihar and West Bengal…. Therefore, you should present your side within… pic.twitter.com/BysJbbY62m
— ANI (@ANI) October 28, 2025
ಅಧಿಕಾರಿಗಳ ಪ್ರಕಾರ, ಕಾರ್ಗಹರ್ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಪ್ರಶಾಂತ್ ಕಿಶೋರ್ ಅವರಿಗೆ ಮೂರು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ. ಅವರ ಹೆಸರು ಏಕಕಾಲದಲ್ಲಿ ಎರಡು ವಿಭಿನ್ನ ರಾಜ್ಯಗಳಲ್ಲಿ ಹೇಗೆ ನೋಂದಾಯಿಸಲ್ಪಟ್ಟಿದೆ ಎಂಬುದನ್ನು ಪ್ರಶಾಂತ್ ಕಿಶೋರ್ ವಿವರಿಸಬೇಕಾಗಿದೆ.
ಇದನ್ನೂ ಓದಿ: Prashant Kishor Detained: ಬಿಪಿಎಸ್ಸಿ ಅಭ್ಯರ್ಥಿಗಳಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಶಾಂತ್ ಕಿಶೋರ್ ಟಿಎಂಸಿಗೆ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಇದೀಗ ಬಿಹಾರ ಮತ್ತು ಬಂಗಾಳ ಎರಡೂ ಕಡೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
“ಪ್ರಶಾಂತ್ ಕಿಶೋರ್ ಒಬ್ಬ ವಿದ್ಯಾವಂತ ವ್ಯಕ್ತಿ. ಅವರು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರು ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಮ್ಮ ಕಡೆಯಿಂದ ತಪ್ಪು ನಡೆದಿದೆ ಎಂದು ಚುನಾವಣಾ ಆಯೋಗ ಭಾವಿಸಿದರೆ ನಮ್ಮನ್ನು ಸಂಪರ್ಕಿಸಲಿ. ನಮ್ಮ ಕಾನೂನು ತಂಡ ಪ್ರತಿಕ್ರಿಯಿಸುತ್ತದೆ” ಎಂದು ಪ್ರಶಾಂತ್ ಕಿಶೋರ್ ಅವರ ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Tue, 28 October 25




