Fact Check: ಪ್ರತಿ ಹಳ್ಳಿಯಲ್ಲಿ BSNL ನೆಟ್‌ವರ್ಕ್-ಟವರ್‌ಗಳನ್ನು ಅಳವಡಿಸಬೇಕೆಂದು ವಿರಾಟ್ ಕೊಹ್ಲಿ ಹೇಳಿದ್ದು ನಿಜವೇ?
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವಿರಾಟ್ ಕೊಹ್ಲಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ವೈರಲ್ ಹೇಳಿಕೆ ನಕಲಿಯಾಗಿದ್ದು, ಅದನ್ನು ನಿಜವೆಂದು ನಂಬಿ ಹಂಚಿಕೊಳ್ಳಲಾಗುತ್ತಿದೆ.
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿ ಹೇಳಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿ ಹಳ್ಳಿಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮತ್ತು ಟವರ್‌ಗಳನ್ನು ಅಳವಡಿಸಬೇಕು ಎಂದು ಬಿಎಸ್‌ಎನ್‌ಎಲ್ ಕಂಪನಿಯ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ ಎಂದು ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಬಳಕೆದಾರರು ಈ ಪೋಸ್ಟ್ ಅನ್ನು ನಿಜವೆಂದು ಪರಿಗಣಿಸಿ ಶೇರ್ ಕೂಡ ಮಾಡುತ್ತಿದ್ದಾರೆ. ನಿಜಕ್ಕೂ ವಿರಾಟ್ ಕೊಹ್ಲಿ ಈ ರೀತಿ ಹೇಳಿದ್ದಾರೆಯೇ?.
ವೈರಲ್ ಪೋಸ್ಟ್‌ನಲ್ಲಿ ಏನಿದೆ?:
ಸಾಮಾಜಿಕ ಮಾಧ್ಯಮ ಬಳಕೆದಾರ _llsunil_bhuriyall_100k ಅವರು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ‘‘ಪ್ರತಿ ಹಳ್ಳಿಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮತ್ತು ಕೇಬಲ್ ಅಳವಡಿಸಬೇಕು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ,’’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಜೊತೆಗೆ ಈ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಹ್ಲಿ ಶೇಕ್ಹ್ಯಾಂಡ್ ನೀಡಿದ್ದಾರೆ.
View this post on Instagram
ಇದೇ ರೀತಿಯ ಪೋಸ್ಟ್ ಅನ್ನು ರೋಹಿತ್ ಶರ್ಮಾ ಹೆಸರಿನಲ್ಲಿ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
View this post on Instagram
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವಿರಾಟ್ ಕೊಹ್ಲಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ವೈರಲ್ ಹೇಳಿಕೆ ನಕಲಿಯಾಗಿದ್ದು, ಅದನ್ನು ನಿಜವೆಂದು ನಂಬಿ ಹಂಚಿಕೊಳ್ಳಲಾಗುತ್ತಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದೆವು. ಆಗ ಈ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿ ನಮಗೆ ಕಂಡುಬಂದಿಲ್ಲ. ಬಿಎಸ್‌ಎನ್‌ಎಲ್‌ಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಅಂತಹ ಯಾವುದೇ ಹೇಳಿಕೆ ನೀಡಿದ್ದರೆ, ಖಂಡಿತವಾಗಿಯೂ ಅದಕ್ಕೆ ಸಂಬಂಧಿಸಿದ ವರದಿ ಇರುತ್ತಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ವಿರಾಟ್ ಕೊಹ್ಲಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಅನ್ನು ಪರಿಶೀಲಿಸಿದ್ದೇವೆ. ಇಲ್ಲಿಯೂ ಸಹ ನಮಗೆ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಅತ್ತ ವೈರಲ್ ಪೋಸ್ಟ್ ಅನ್ನು ರೋಹಿತ್ ಶರ್ಮಾ ಹೆಸರಿನಲ್ಲಿಯೂ ಹಂಚಿಕೊಳ್ಳಲಾಗಿದೆ. ಆದ್ದರಿಂದ ನಾವು ರೋಹಿತ್ ಶರ್ಮಾ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಸಹ ಪರಿಶೀಲಿಸಿದ್ದೇವೆ, ಅಲ್ಲಿಯೂ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇದನ್ನೂ ಓದಿ: ಯುಎಸ್ ಅಧ್ಯಕ್ಷೀಯ ಚುನಾವಣೆ: ಟ್ರಂಪ್-ಮಸ್ಕ್ ಕೇಸರಿ ಬಟ್ಟೆಯಲ್ಲಿ ಪ್ರಚಾರ ಮಾಡಿದ್ದು ನಿಜವೇ?
ಈ ಹುಡುಕಾಟದ ಮಧ್ಯೆ ಈ ಹಿಂದೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಇಂತಹ ಹಲವು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂಬುದು ಕಂಡುಬಂತು. ಇಲ್ಲಿ ವಿರಾಟ್ ಕೊಹ್ಲಿ ಅವರು ನರೇಂದ್ರ ಮೋದಿ ಅವರಿಗೆ ಶೇಕ್ ಹ್ಯಾಂಡ್ ನೀಡುತ್ತಿರುವ ಫೋಟೋ 2017 ರದ್ದಾಗಿದೆ. ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯಿಂದ 2017 ರಲ್ಲಿ ಈ ಫೋಟೋವನ್ನು ‘‘ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಭೇಟಿಯಾಗಿ ಅವರ ಮದುವೆಗೆ ಶುಭಹಾರೈಸಲಾಯಿತು’’ ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಲಾಗಿದೆ.
ನಮ್ಮ ತನಿಖೆಯಿಂದ ವಿರಾಟ್ ಕೊಹ್ಲಿ ಹೆಸರಿನಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ನಕಲಿ ಎಂಬುದು ಕಂಡುಬಂದಿದೆ. ಬಿಎಸ್‌ಎನ್‌ಎಲ್ ಬಗ್ಗೆ ವಿರಾಟ್ ಕೊಹ್ಲಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ