ಆಂಬುಲೆನ್ಸ್ನಲ್ಲಿ ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್ ಇದ್ದ ಕಾರಣ ಕೇರಳದ ದಂಪತಿಗಳು ಆಂಬುಲನ್ಸ್ ಹತ್ತಲು ನಿರಾಕರಿಸಿದ್ದು, ಆ ದಂಪತಿ ಮೃತಪಟ್ಟಿದ್ದಾರೆ ಎಂಬ ಇನ್ಶಾರ್ಟ್ಸ್ ಸುದ್ದಿಯ ಸ್ಕ್ರೀನ್ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಪಕ್ಷಗಳಲ್ಲೊಂದಾದ ಇಂದು ಮಕ್ಕಳ್ ಕಟ್ಚಿ ಈ ಸ್ಕ್ರೀನ್ಶಾಟ್ನ್ನು ಶೇರ್ ಮಾಡಿದ್ದು, ಇದು ನಿಜವೇ? ಯಾರಾದರೂ ದೃಢೀಕರಿಸಿ ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕಟ್ಟಾ ಬೆಂಬಲಿಗ ಎಂದು ಟ್ವಿಟರ್ ನಲ್ಲಿ ಬರೆದಿರುವ ಟ್ವೀಟಿಗ ಎಂ.ಶ್ರೀನಿವಾಸುಲು ರೆಡ್ಡಿ ಇದನ್ನು ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಈ ಗ್ರಾಫಿಕ್ಸ್ ವ್ಯಾಪಕವಾಗಿ ಶೇರ್ ಆಗಿದೆ.
Unbelievable… If true….
Some one plz verify…. pic.twitter.com/CuxGR4eLqF
— Indu Makkal Katchi (Offl) (@Indumakalktchi) May 13, 2021
ಫ್ಯಾಕ್ಟ್ ಚೆಕ್
ವೈರಲ್ ಆಗಿರುವ ಈ ಸ್ಕ್ರೀನ್ಶಾಟ್ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ಚೆಕ್ ಮಾಡಿದ್ದು ಈ ಚಿತ್ರ ಫೇಕ್ ಎಂದಿದೆ.
ವೈರಲ್ ಆಗಿರುವ ಸ್ಕ್ರೀನ್ಶಾಟ್ನಲ್ಲಿ ಸುದ್ದಿಮೂಲ ಹಿಂದೂಸ್ತಾನ್ ಟೈಮ್ಸ್ ಎಂದು ಇದೆ. ಆದರೆ ಹಿಂದೂಸ್ತಾನ್ ಟೈಮ್ಸ್ನಲ್ಲಿ ಈ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಫೋಟೊ ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾಗಿದ್ದು, ಕೇರಳದ ದಂಪತಿ ಬಗ್ಗೆ ಇರುವ ಸುದ್ದಿಯಲ್ಲಿ ಅಲ್ಲ. ಕೊವಿಡ್ ಹೈಲೈಟ್ಸ್ ಸುದ್ದಿಗಾಗಿ ಈ ಫೋಟೊ ಬಳಸಲಾಗಿದೆ. ಇತರ ಯಾವುದೇ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿ ಪ್ರಕಟ ಆಗಿಲ್ಲ.
ಫೋಟೊ ಬೆಂಗಳೂರಿನದ್ದು
2021 ರ ಮೇ 8 ರಂದು ಬೆಂಗಳೂರಿನ ಹೊರವಲಯದಲ್ಲಿರುವ ಗ್ರಾನೈಟ್ ಕಲ್ಲುಗಣಿಯೊಳಗೆ ಕೊರೊನಾವೈರಸ್ ಸಂತ್ರಸ್ತರಿಗಾಗಿ ಸ್ಥಾಪಿಸಲಾದ ತೆರೆದ ಸ್ಮಶಾನದಲ್ಲಿ ಕೊರೊನಾವೈರಸ್‌ನಿಂದ ಮೃತಪಟ್ಟ ಸಂತ್ರಸ್ತೆಯ ಶವವನ್ನು ಕುಟುಂಬ ಸದಸ್ಯರು ಮತ್ತು ಕೆಲಸಗಾರರು ಒಯ್ಯುತ್ತಿರುವುದು ಎಂದು ಹಿಂದುಸ್ತಾನ್ ಟೈಮ್ಸ್ ಚಿತ್ರದ ಅಡಿಬರಹ ನೀಡಿದೆ. ಎಎಫ್ಪಿ ಸುದ್ದಿಸಂಸ್ಥೆಯ ಮಂಜುನಾಥ್ ಕಿರಣ್ ಕ್ಲಿಕ್ಕಿಸಿದ ಚಿತ್ರ ಇದಾಗಿದ್ದು, ಆಂಬುಲೆನ್ಸ್ ಮೇಲೆ ಪ್ರಸನ್ನ ಆಂಬುಲೆನ್ಸ್ ಎಂದು ಇದೆ. ಈ ಆಂಬುಲೆನ್ಸ್ ಸೇವೆ ಬೆಂಗಳೂರಿನಲ್ಲಿರುವುದರಿಂದ ಇದು ಬೆಂಗಳೂರಲ್ಲಿ ಸೆರೆ ಹಿಡಿದ ಚಿತ್ರ ಎಂಬುದು ಸ್ಪಷ್ಟ.
ಇನ್ಶಾರ್ಟ್ಸ್ನಲ್ಲಿ ಅಂತಹ ಯಾವುದೇ ಸುದ್ದಿ ಕಂಡುಬಂದಿಲ್ಲ. ಇದಲ್ಲದೆ, ವೈರಲ್ ಗ್ರಾಫಿಕ್ಸ್ನ ಸ್ವರೂಪವು ಇನ್ಶಾರ್ಟ್ಸ್ ಗ್ರಾಫಿಕ್ಸ್ ಗೆ ಹೊಂದಿಕೆಯಾಗುವುದಿಲ್ಲ. ಆಲ್ಟ್ ನ್ಯೂಸ್ ವೈರಲ್ ಗ್ರಾಫಿಕ್ಸ್ ಅನ್ನು ನಿಜವಾದ ಇನ್ಶಾರ್ಟ್ಸ್ ಗ್ರಾಫಿಕ್ಸ್ ನೊಂದಿಗೆ ಹೋಲಿಸಿದೆ. ಸಾರಾಂಶದ ಪಠ್ಯವು ನಿಜವಾದ ಗ್ರಾಫಿಕ್ಸ್ನಲ್ಲಿರುವುದಕ್ಕಿಂತ ಹೆಚ್ಚು ಗಾಢವಾಗಿದೆ. ವೈರಲ್ ಗ್ರಾಫಿಕ್ಸ್ನಲ್ಲಿ ಘಟನೆ ಎಲ್ಲಿ ಮತ್ತು ಯಾವಾಗ ನಡೆಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ಶಾರ್ಟ್ಸ್ ಪ್ರತಿನಿಧಿಯೊಬ್ಬರು ಆಲ್ಟ್ ನ್ಯೂಸ್ ಜತೆ ಮಾತನಾಡಿದ್ದು ಈ ಸುದ್ದಿಯನ್ನು ನಾವು ಇನ್ಶಾರ್ಟ್ಸ್ನಲ್ಲಿ ಪ್ರಕಟಿಸಿಲ್ಲ. ಇದು ನಕಲಿ ಚಿತ್ರ ಎಂದಿದ್ದಾರೆ.
ಇದನ್ನೂ ಓದಿ: Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ
Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ