ಉಪ್ಪಿನಲ್ಲಿ ಪುನೀತ್ ಚಿತ್ರ ಬಿಡಿಸಿ ಅಭಿಮಾನ ಮೆರೆದ ಚಿತ್ತೂರಿನ ಅಭಿಮಾನಿ

ಆಂಧ್ರ ಪ್ರದೇಶದ ಪುನೀತ್ ರಾಜ್​ಕುಮಾರ್ ಅಭಿಮಾನಿಯೊಬ್ಬರು ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದಾರೆ.

ಉಪ್ಪಿನಲ್ಲಿ ಪುನೀತ್ ಚಿತ್ರ ಬಿಡಿಸಿ ಅಭಿಮಾನ ಮೆರೆದ ಚಿತ್ತೂರಿನ ಅಭಿಮಾನಿ
ಆಂಧ್ರ ಪ್ರದೇಶದ ಕುಪ್ಪಂನ ಅಭಿಮಾನಿಯೊಬ್ಬರು ಉಪ್ಪಿನಲ್ಲಿ ಪುನೀತ್ ರಾಜ್​ಕುಮಾರ್ ಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದಾರೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 31, 2021 | 5:34 PM

ಕೋಲಾರ: ನಟ ಪುನೀತ್ ರಾಜ್​ಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ನೆರೆಯ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಪುನೀತ್ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರು. ಅವರೆಲ್ಲರೂ ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದೇಶದ ಇಡೀ ಚಿತ್ರರಂಗ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದೆ. ಈ ಮಧ್ಯೆ ಆಂಧ್ರ ಪ್ರದೇಶದ ಪುನೀತ್ ರಾಜ್​ಕುಮಾರ್ ಅಭಿಮಾನಿಯೊಬ್ಬರು ಉಪ್ಪಿನಲ್ಲಿ ಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಪೂರಿ ಆರ್ಟ್ಸ್​ನ ಪುರುಷೋತ್ತಮ್ ಕನ್ನಡ ಧ್ವಜದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಚಿತ್ರ ಬಿಡಿಸಿ, ವಿ ಮಿಸ್ ಯೂ ಅಪ್ಪು ಎಂದು ಬರೆದಿದ್ದಾರೆ. ಕುಪ್ಪಂ ಪಟ್ಟಣದ ನೂರಾರು ಮಂದಿ ಈ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಸಿನಿಮಾಗಳನ್ನು ಮಾತ್ರವೇ ಮಾಡಿದ್ದರೂ ತೆಲುಗು, ತಮಿಳಿನಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎನ್ನುವುದಕ್ಕೆ ಈ ಚಿತ್ರಕಲೆ ಸಾಕ್ಷಿಯಾಗಿದೆ.

ಪುನೀತ್​ ಬಗ್ಗೆ ಅಲ್ಲು ಅರ್ಜುನ್​ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ ಅಜಾತಶತ್ರು ರೀತಿಯಲ್ಲಿ ಬದುಕಿದ್ದವರು ಪುನೀತ್​ ರಾಜ್​ಕುಮಾರ್​. ಅಂಥವರನ್ನು ದೇವರು ಇಷ್ಟು ಬೇಗ ಕರೆದುಕೊಂಡಿದ್ದನ್ನು ಯಾರಿಂದಲೂ ಸಹಿಸಲಾಗುತ್ತಿಲ್ಲ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಪುನೀತ್​ಗೆ ಅಪಾರ ಅಭಿಮಾನಿಗಳಿದ್ದರು. ಪರಭಾಷೆಯ ಸಿನಿಮಾರಂಗದಲ್ಲಿ ಅವರು ಬಹಳಷ್ಟು ಸ್ನೇಹಿತರನ್ನು ಸಂಪಾದಿಸಿದ್ದರು. ಅಪ್ಪು ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ಮರುಗಿದೆ. ಚಿರಂಜೀವಿ, ಜ್ಯೂ. ಎನ್​ಟಿಆರ್​, ವಿಕ್ಟರಿ ವೆಂಕಟೇಶ್​ ಮುಂತಾದ ಘಟಾನುಘಟಿ ಸ್ಟಾರ್​ ಕಲಾವಿದರೆಲ್ಲ ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ನಟ ಅಲ್ಲು ಅರ್ಜುನ್​ ಅವರು ಪುನೀತ್​ ಬಗ್ಗೆ ತೆಲುಗಿನ ಸಿನಿಮಾ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ನನಗೆ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡ್ಯಾನ್ಸ್​ ಕಾರ್ಯಕ್ರಮದಲ್ಲಿ ನಾವು ಜಡ್ಜ್​ ಆಗಿದ್ದೆವು. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಇಂದು ಸಡನ್​ ಆಗಿ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

‘ಮೊದಲ ಬಾರಿಗೆ ಈ ಸುದ್ದಿ ಕೇಳಿದಾಗ ತುಂಬ ಶಾಕ್​ ಆಯಿತು. ಬದುಕು ತೀರಾ ಅನಿಶ್ಚಿತ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಬದುಕಿನಲ್ಲಿ ಯಾವಾಗಲೂ ಖುಷಿಯಾಗಿರಿ. ಎಂಥ ದೊಡ್ಡ ಸೂಪರ್​ ಸ್ಟಾರ್​ ಆಗಿದ್ದರು ಪುನೀತ್​ ರಾಜ್​ಕುಮಾರ್​. ತುಂಬ ಒಳ್ಳೆಯ ವ್ಯಕ್ತಿ. ಕನ್ನಡ ಚಿತ್ರರಂಗಕ್ಕಾಗಿ ಅವರು ತುಂಬ ಕೊಡುಗೆ ನೀಡಿದ್ದರು. ನಮ್ಮ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಆಗಿದ್ದರು’ ಎಂದು ಅಲ್ಲು ಅರ್ಜುನ್​ ಭಾವುಕರಾದರು.

ವಿಜಯ್​ ದೇವಕೊಂಡ ಸಹೋದರ ಆನಂದ್​ ದೇವರಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಲ್ಲು ಅರ್ಜುನ್​ ಭಾಗವಹಿಸಿದ್ದರು. ಆಗ ವೇದಿಕೆಯಲ್ಲಿ ಅಪ್ಪು ಬಗ್ಗೆ ಅವರು ಮಾತನಾಡಿದರು. ‘ಎಲ್ಲರೂ ಎರಡು ನಿಮಿಷ ಎದ್ದು ನಿಂತು ಪುನೀತ್​ ರಾಜ್​ಕುಮಾರ್​ ಅವರಿಗಾಗಿ ಮೌನಾಚರಣೆ ಮಾಡೋಣ’ ಎನ್ನುವ ಮೂಲಕ ಅಪ್ಪು ಆತ್ಮಕ್ಕೆ ಅವರು ಶಾಂತಿ ಕೋರಿದರು.

Fan of Puneeth Rajkumar in Kuppam of Andhra Pradesh Pictures Kannada Actor in Rangoli

ಇದನ್ನೂ ಓದಿ: ಕುಟುಂಬಕ್ಕೆ ಆಸರೆ ಒದಗಿಸಿದ್ದ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಕಣ್ಣೀರಿಟ್ಟ ರೈತ ಮಹಿಳೆ ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​ ಒಡೆತನದ ಪಿಆರ್​ಕೆ ಪ್ರೊಡಕ್ಷನ್​ ಏನಾಗಲಿದೆ?

Published On - 5:33 pm, Sun, 31 October 21