Farmers Protest: ಮುಂದುವರಿದ ರೈತ ಪ್ರತಿಭಟನೆ; ಸಿಂಘು, ಟಿಕ್ರಿ ಗಡಿಯಲ್ಲಿ ಸಂಚಾರ ವ್ಯತ್ಯಯ
ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ದೆಹಲಿ ಹಾಗೂ ಉತ್ತರ ಪ್ರದೇಶ ನಡುವಿನ ಗಾಜಿಪುರ್ ಗಡಿಭಾಗ ಭಾಗಶಃ ಬಂದ್ ಆಗಿದ್ದು ವಾಹನಗಳ ಸಂಚಾರಕ್ಕೆ ಅವಕಾಶ ಸಿಕ್ಕಿದೆ.
ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯು ರಾಷ್ಟ್ರ ರಾಜಧಾನಿಯ ಗಡಿಭಾಗಗಳಲ್ಲಿ ಇನ್ನೂ ಮುಂದುವರಿದಿದೆ. ದೆಹಲಿಯ ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ರೈತ ಚಳುವಳಿಗಾರರು ಹೋರಾಟ ನಡೆಸುತ್ತಿದ್ದಾರೆ. ಇಂದೂ ಕೂಡ (ಏಪ್ರಿಲ್ 5) ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ದೆಹಲಿ ಹಾಗೂ ಉತ್ತರ ಪ್ರದೇಶ ನಡುವಿನ ಗಾಜಿಪುರ್ ಗಡಿಭಾಗ ಭಾಗಶಃ ಬಂದ್ ಆಗಿದ್ದು ವಾಹನಗಳ ಸಂಚಾರಕ್ಕೆ ಅವಕಾಶ ಸಿಕ್ಕಿದೆ.
ಗಾಜಿಪುರ್ನ ರಾಷ್ಟ್ರೀಯ ಹೆದ್ದಾರಿ 24 ಗಾಜಿಯಾಬಾದ್ ಕಡೆಗೆ ತೆರೆದುಕೊಂಡಿದೆ. ನೋಯ್ಡಾ ಮತ್ತು ದೆಹಲಿ ನಡುವಿನ ಚಿಲ್ಲಾ ಗಡಿಭಾಗ ಕೂಡ ವಾಹನಗಳ ಸಂಚಾರಕ್ಕೆ ತೆರೆದುಕೊಂಡಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂಚಾರ ದಟ್ಟಣೆ ಇರುವ ಸಂದರ್ಭಗಳಲ್ಲಿ ಟ್ರಾಫಿಕ್ ಸಮಸ್ಯೆ ತಂದೊಡ್ಡುವ ಮಾರ್ಗಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದೂ ಸಂಚಾರಿ ಪೊಲೀಸರು ಹೇಳಿದ್ದಾರೆ.
ಗಾಜಿಯಾಬಾದ್ ಮೂಲಕ ದೆಹಲಿಗೆ ಬರುತ್ತಿರುವ ವಾಹನಗಳಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆನಂದ್ ವಿಹಾರ್, ಸೂರ್ಯ ನಗರ್, ಅಪ್ಸರ್, ಭೊಪ್ರ, ಲೋನಿ, ಕೊಂಡ್ಲಿ, ಚಿಲ್ಲಾ, ನ್ಯೂ ಅಶೋಕ್ ನಗರ್, ಡಿಎನ್ಡಿ ಮತ್ತು ಕಾಳಿಂದಿ ಕುಂಜ್ ಮೂಲಕ ವಾಹನಗಳು ಸಂಚರಿಸುತ್ತಿವೆ.
ಘಾಜಿಪುರ್ ಅಲ್ಲದೆ, ಸಿಂಘು ಮತ್ತು ಟಿಕ್ರಿ ಗಡಿ ಕೂಡ ಮುಚ್ಚಿದೆ. ಪಿಯಾವು ಮನಿಯಾರಿ, ಸಿಂಘು ಗಡಿ, ಹರೆವಾಲಿ, ಮಂಗೇಶ್ಪುರ್ ಮತ್ತು ಟಿಕ್ರಿ ಬಾರ್ಡರ್ ಕೂಡ ಮುಚ್ಚಿಕೊಂಡಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಸಂಚಾರ ದಟ್ಟಣೆ ಹೆಚ್ಚಾಗಿರುವ ಬೆಳಗ್ಗಿನ ಮತ್ತು ಸಂಜೆಯ ಅವಧಿಯಲ್ಲಿ ಔಚಂಡಿ ಬಾರ್ಡರ್ ತೆರೆದಿರುತ್ತದೆ. ಲಂಪುರ್ ಹಾಗೂ ಸಫಿಯಾಬಾದ್ ಬಾರ್ಡರ್ಗಳು ಸಂಚಾರಕ್ಕೆ ತೆರೆದುಕೊಂಡಿವೆ.
ಜಿಟಿ ಕರ್ನಲ್ ರಸ್ತೆ, ರೊಹ್ಟಕ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 44 ಮತ್ತು ಔಟರ್ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಇರಲಿದ್ದು ಬದಲಿ ಮಾರ್ಗಗಳನ್ನು ಅನುಸರಿಸುವಂತೆ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ಸೆಲೆಬ್ರಿಟಿಗಳ ಬರ್ತ್ ಡೇ ವಿಶ್ ಮಾಡಲು ಸಮಯವಿದೆ, ರೈತರಿಗಾಗಿ ಸಮಯವಿಲ್ಲ: ಸತೀಶ್ ಜಾರಕಿಹೊಳಿ
ಇದನ್ನೂ ಓದಿ: ಸರ್ಕಾರ ನಮ್ಮ ಬೇಡಿಕೆಗಳನ್ನು ಐದಾರು ತಿಂಗಳಲ್ಲಿ ಈಡೇರಿಸಬಹುದು: ರೈತ ನಾಯಕ ರಾಕೇಶ್ ಟಿಕಾಯತ್
Published On - 5:44 pm, Mon, 5 April 21