ಎರಡು ವರ್ಷದ ಮಗುವಿಗೆ ಚಿತ್ರಹಿಂಸೆ ಕೊಟ್ಟು, ಹೊಡೆದು ಚರಂಡಿಗೆ ಎಸೆದ ತಂದೆ
ಲಕ್ನೋದಲ್ಲಿ, ಎರಡೂವರೆ ವರ್ಷದ ಪುಟ್ಟ ಹೆಣ್ಣುಮಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಚರಂಡಿಗೆ ಎಸೆದ ತಂದೆ ಯೋಗೇಂದ್ರ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿತ್ತು. ಸ್ಥಳೀಯರ ಸಮಯಪ್ರಜ್ಞೆ ಮತ್ತು ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ ಮಗು ಸುರಕ್ಷಿತವಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಲಕ್ನೋ, ಜೂನ್ 1: ಎರಡೂವರೆ ವರ್ಷದ ತನ್ನ ಪುಟ್ಟ ಹೆಣ್ಣುಮಗಳ ಮೇಲೆ ಅತಿಮಾನುಷವಾಗಿ ಹಲ್ಲೆ ನಡೆಸಿ, ರಸ್ತೆ ಬದಿಯ ಚರಂಡಿ(Drain)ಗೆ ತಳ್ಳಿ ಕೊಲ್ಲಲು ಯತ್ನಿಸಿದ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೋನು ಅಲಿಯಾಸ್ ಯೋಗೇಂದ್ರ ಸಿಂಗ್ (50) ಎಂದು ಗುರುತಿಸಲಾಗಿದೆ. ಶನಿವಾರ ನಡೆದ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.
ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ವಿಡಿಯೋ ಮೇ 30 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಈ ಅತಿಮಾನುಷ ಘಟನೆ ಸಂಭವಿಸಿದೆ. ವೈರಲ್ ಆಗಿರುವ ದೃಶ್ಯಗಳಲ್ಲಿ, ಪಾಪಿ ತಂದೆ ಸಿಂಗ್ ಮಗುವನ್ನು ಕಾಲಿನಿಂದ ಒದ್ದು, ಕೈಯಿಂದ ಗುದ್ದುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಪ್ರಾಣಭಯದಿಂದ ಕಿರುಚುತ್ತಿದ್ದ ಮಗುವನ್ನು ಪದೇ ಪದೇ ರಸ್ತೆ ಬದಿಯ ಚರಂಡಿಗೆ ಎಸೆದು, ಮುಳುಗಿಸಿ ಕೊಲ್ಲಲು ಯತ್ನಿಸುತ್ತಿರುವುದು ಸೆರೆಯಾಗಿತ್ತು.
ಸ್ಥಳೀಯರ ಸಮಯಪ್ರಜ್ಞೆ: ಮಗುವಿನ ಕಿರುಚಾಟ ಕೇಳಿ ಓಡಿಬಂದ ಕೆಲವು ಸ್ಥಳೀಯ ನಿವಾಸಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಆತನ ಕೈಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿ ಆಕ್ರಮಣಕಾರಿಯಾಗಿ ವರ್ತಿಸಿ ಹತ್ತಿರದ ಮನೆಯ ಬಾಗಿಲನ್ನು ಬಲವಂತವಾಗಿ ಮುರಿಯಲು ಯತ್ನಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ.
ಮತ್ತಷ್ಟು ಓದಿ: ದೇಹ ಸೇರುತ್ತಿದೆ ವಿಷ; ಬಾಗಲಕೋಟೆಯಲ್ಲಿ ಚರಂಡಿ ನೀರಲ್ಲಿ ತರಕಾರಿ ಬೆಳೆಯುತ್ತಿರುವ ಬೆಳೆಗಾರರ ವಿರುದ್ಧ ಸ್ಥಳೀಯರ ಆಕ್ರೋಶ
ಪೊಲೀಸರ ತಕ್ಷಣದ ಕ್ರಮ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಸುಲ್ತಾನಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ವಿಡಿಯೋ ಸಾಕ್ಷ್ಯ ಹಾಗೂ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಆರೋಪಿ ಯೋಗೇಂದ್ರ ಸಿಂಗ್ ವಿರುದ್ಧ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಜೈಲಿಗಟ್ಟಿದ್ದಾರೆ.
ನ್ಯಾಯಾಂಗ ಬಂಧನ: ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡು ಹಂತಕ ತಂದೆಯನ್ನು ಸಲಾಕೆಯ ಹಿಂದೆ ತಳ್ಳಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 am, Mon, 1 June 26





