ರಸಗೊಬ್ಬರ ಖರೀದಿಗೆ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ; ರೈತರ ಸಮಸ್ಯೆಗೆ ಸಿಗಲಿದೆ ಪರಿಹಾರ!

ರಸಗೊಬ್ಬರ ಖರೀದಿಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ ಪರಿಚಯಿಸಿದೆ. ಇನ್ನು ಮುಂದೆ ರೈತರು ಮೊಬೈಲ್ ಆ್ಯಪ್ ಮೂಲಕ ಹತ್ತಿರದ ಅಂಗಡಿಗಳಲ್ಲಿರುವ ಗೊಬ್ಬರದ ದಾಸ್ತಾನು ಪರಿಶೀಲಿಸಿ ಬುಕ್ ಮಾಡಬಹುದು. ಎಫ್‌ಐಡಿ ಮೂಲಕ ತಿಂಗಳಿಗೆ ಒಂದು ಬಾರಿ ಮಾತ್ರ ಬುಕ್ಕಿಂಗ್‌ಗೆ ಅವಕಾಶವಿದ್ದು, ಮೂರು ದಿನಗಳೊಳಗೆ ಖರೀದಿಸಬೇಕು. ಕರ್ನಾಟಕದಲ್ಲಿ ಡಿಸೆಂಬರ್‌ನಿಂದ ಈ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆಯಿದೆ.

ರಸಗೊಬ್ಬರ ಖರೀದಿಗೆ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ; ರೈತರ ಸಮಸ್ಯೆಗೆ ಸಿಗಲಿದೆ ಪರಿಹಾರ!
ಸಾಂದರ್ಭಿಕ ಚಿತ್ರ
Edited By:

Updated on: Nov 21, 2026 | 2:36 PM

ಮುಖ್ಯಾಂಶಗಳು

  • ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಹೊಸ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ ಜಾರಿ.
  • ಆ್ಯಪ್‌ನಲ್ಲೇ ಅಂಗಡಿಗಳ ದಾಸ್ತಾನು ಪರಿಶೀಲಿಸಿ ರೈತರು ಗೊಬ್ಬರ ಕಾಯ್ದಿರಿಸಬಹುದು.
  • ಎಫ್‌ಐಡಿ ಮೂಲಕ ತಿಂಗಳಿಗೆ ಒಮ್ಮೆ ಬುಕ್ಕಿಂಗ್, ಮೂರು ದಿನದಲ್ಲಿ ಖರೀದಿ ಕಡ್ಡಾಯ.

ಬೆಂಗಳೂರು, ನವೆಂಬರ್ 21: ಕೃಷಿ ಹಂಗಾಮು ಆರಂಭವಾಯಿತೆಂದರೆ ಸಾಕು, ರೈತರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ರಸಗೊಬ್ಬರದ ಕೊರತೆಯೂ ಒಂದು. ಅಗತ್ಯವಿರುವ ಸಮಯದಲ್ಲಿ ಗೊಬ್ಬರ ಸಿಗದೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದು, ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಅಲೆದಾಡುವುದು ರೈತರಿಗೆ ಸಾಮಾನ್ಯವಾಗಿದೆ. ಇನ್ನು ಕೆಲವೆಡೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದೂರುಗಳೂ ಕೇಳಿಬರುತ್ತವೆ. ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಸಗೊಬ್ಬರ ಖರೀದಿಗಾಗಿ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಇನ್ನು ಮುಂದೆ ರೈತರು ಮೊಬೈಲ್ ಆ್ಯಪ್ ಮೂಲಕವೇ ತಮಗೆ ಬೇಕಾದ ಗೊಬ್ಬರವನ್ನು ಕಾಯ್ದಿರಿಸಿಕೊಳ್ಳಬಹುದು.

ಆ್ಯಪ್‌ನಲ್ಲೇ ತಿಳಿಯಲಿದೆ ಅಂಗಡಿಗಳಲ್ಲಿರುವ ಗೊಬ್ಬರದ ದಾಸ್ತಾನು

ರಾಷ್ಟ್ರೀಯ ರಸಗೊಬ್ಬರ ಮಾರಾಟ ಚೌಕಟ್ಟು (National Fertilizer Sales Framework – NFSF) ಅಡಿಯಲ್ಲಿ ಈ ಡಿಜಿಟಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ರೈತರು ಆ್ಯಪ್ ಮೂಲಕ ತಮ್ಮ ಹತ್ತಿರದ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿರುವ ದಾಸ್ತಾನು ವಿವರಗಳನ್ನು ಪರಿಶೀಲಿಸಬಹುದು. ಯಾವ ಅಂಗಡಿಯಲ್ಲಿ ಯಾವ ರಸಗೊಬ್ಬರ ಲಭ್ಯವಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡು, ಅಗತ್ಯವಿರುವ ಗೊಬ್ಬರವನ್ನು ಮೊಬೈಲ್ ಮೂಲಕವೇ ಬುಕ್ ಮಾಡಬಹುದು. ಇದರಿಂದ ಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಕಾಯುವ ಹಾಗೂ ಅನಗತ್ಯವಾಗಿ ಅಲೆದಾಡುವ ಸಮಸ್ಯೆ ತಪ್ಪಲಿದೆ. ಅಲ್ಲದೆ, ದಾಸ್ತಾನು ಮತ್ತು ಮಾರಾಟದ ಮೇಲೆ ನಿಗಾ ಇಡುವ ಮೂಲಕ ಕಾಳಸಂತೆ ಮಾರಾಟಕ್ಕೂ ಕಡಿವಾಣ ಹಾಕುವ ನಿರೀಕ್ಷೆಯಿದೆ.

Loading...

ಬುಕ್ಕಿಂಗ್‌ಗೆ ರೈತರು ಪಾಲಿಸಬೇಕಾದ ಷರತ್ತುಗಳೇನು?

ಈ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ರಸಗೊಬ್ಬರ ಪಡೆಯಲು ರೈತರು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ರೈತರ ಎಫ್‌ಐಡಿ (FID) ಆಧಾರದ ಮೇಲೆ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶವಿರುತ್ತದೆ. ಒಂದು ಎಫ್‌ಐಡಿ ಮೂಲಕ ತಿಂಗಳಿಗೆ ಒಂದು ಬಾರಿ ಮಾತ್ರ ರಸಗೊಬ್ಬರ ಕಾಯ್ದಿರಿಸಬಹುದು. ಅಷ್ಟೇ ಅಲ್ಲ, ಎಫ್‌ಐಡಿಯಲ್ಲಿ ನೋಂದಣಿಯಾಗಿರುವ ಕೃಷಿ ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾತ್ರ ರಸಗೊಬ್ಬರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆ್ಯಪ್‌ನಲ್ಲಿ ಬುಕ್ ಮಾಡಿದ ರಸಗೊಬ್ಬರವನ್ನು ಮೂರು ದಿನಗಳೊಳಗೆ ಸಂಬಂಧಪಟ್ಟ ಅಂಗಡಿಗೆ ತೆರಳಿ ಖರೀದಿಸಬೇಕು. ನಿಗದಿತ ಅವಧಿಯಲ್ಲಿ ಖರೀದಿ ಮಾಡದಿದ್ದರೆ ಬುಕ್ಕಿಂಗ್ ಸ್ವಯಂಚಾಲಿತವಾಗಿ ರದ್ದಾಗಲಿದೆ.

ಡಿಸೆಂಬರ್‌ನಿಂದ ರಾಜ್ಯಾದ್ಯಂತ ಜಾರಿ

ರಸಗೊಬ್ಬರ ಮಾರಾಟದಲ್ಲಿ ಪಾರದರ್ಶಕತೆ ತರುವುದು, ನೈಜ ಬೇಡಿಕೆಯನ್ನು ಗುರುತಿಸುವುದು ಹಾಗೂ ರೈತರಿಗೆ ಸಕಾಲದಲ್ಲಿ ಗೊಬ್ಬರ ಲಭ್ಯವಾಗುವಂತೆ ಮಾಡುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಲ್ಲಿ ರೂಪಿಸಿರುವ ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಡಿಸೆಂಬರ್‌ನಿಂದ ರಾಜ್ಯಾದ್ಯಂತ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಒಟ್ಟಿನಲ್ಲಿ, ಹೊಸ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ಕೃಷಿ ಹಂಗಾಮಿನಲ್ಲಿ ರೈತರು ಎದುರಿಸುವ ರಸಗೊಬ್ಬರದ ಅಭಾವ, ಸರತಿ ಸಾಲು ಹಾಗೂ ಕಾಳಸಂತೆ ಮಾರಾಟದ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us