
ನವದೆಹಲಿ, ಆಗಸ್ಟ್ 28: ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ (MBBS) ಮುಗಿಸಿ ಭಾರತದಲ್ಲಿ ವೈದ್ಯಕೀಯ ನೋಂದಣಿಗಾಗಿ ಕಾಯುತ್ತಿರುವ ಸಾವಿರಾರು ವಿದೇಶಿ ವೈದ್ಯಕೀಯ ಪದವೀಧರರಿಗೆ (FMGs) ರಾಷ್ಟ್ರೀಯ ಪರೀಕ್ಷಾ ಮಂಡಳಿ (NBEMS) ಬಹುದೊಡ್ಡ ಸಮಾಧಾನಕರ ನಿರ್ಧಾರಗಳನ್ನು ಪ್ರಕಟಿಸಿದೆ.
ಜೂನ್ 2026ರ ಎಫ್‌ಎಂಜಿಇ ಪರೀಕ್ಷೆಯಲ್ಲಾದ ಗೊಂದಲಗಳು, ಅತಿಯಾದ ಕಾಠಿಣ್ಯತೆ ಮತ್ತು ಪಾರದರ್ಶಕತೆಯ ಕೊರತೆಯ ವಿರುದ್ಧ ದನಿ ಎತ್ತಿದ್ದ ‘ಆಲ್ ಇಂಡಿಯಾ ಮೆಡಿಕಲ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ನಿಯೋಗದೊಂದಿಗೆ ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಂಧಾನ ಸಭೆಯಲ್ಲಿ ಮಂಡಳಿಯು ವಿದ್ಯಾರ್ಥಿ ಪರ ಹಲವು ಮಹತ್ವದ ಸುಧಾರಣೆಗಳಿಗೆ ಒಪ್ಪಿಗೆ ನೀಡಿದೆ.
ಅಕ್ಟೋಬರ್‌ನಲ್ಲಿ ವಿಶೇಷ ಪರೀಕ್ಷೆ ಹಾಗೂ ವರ್ಷಕ್ಕೆ 3 ಬಾರಿ ಎಕ್ಸಾಂ: ನಷ್ಟವಾಗುತ್ತಿರುವ ಶೈಕ್ಷಣಿಕ ವರ್ಷವನ್ನು ಉಳಿಸಲು 2026 ರ ಅಕ್ಟೋಬರ್ ಅಂತ್ಯದೊಳಗೆ ಹೆಚ್ಚುವರಿ ಪರೀಕ್ಷೆ ನಡೆಸಲು ಒಪ್ಪಿಕೊಳ್ಳಲಾಗಿದೆ. ಮುಂದಿನ ವರ್ಷದಿಂದ ನಿಯಮಿತವಾಗಿ ವರ್ಷಕ್ಕೆ ಮೂರು ಬಾರಿ (ಡಿಸೆಂಬರ್/ಜನವರಿ, ಏಪ್ರಿಲ್/ಮೇ ಮತ್ತು ಆಗಸ್ಟ್/ಸೆಪ್ಟೆಂಬರ್) ಪರೀಕ್ಷೆ ನಡೆಯಲಿದೆ.
ಮತ್ತಷ್ಟು ಓದಿ:
NEET-UG Exam: ಜೆಇಇ ಮಾದರಿಯಲ್ಲಿ ನೀಟ್-ಯುಜಿ ಪರೀಕ್ಷಾ ಕ್ರಾಂತಿ:ಆನ್‌ಲೈನ್ ಕಂಪ್ಯೂಟರ್ ಪರೀಕ್ಷೆ
ಪ್ರಶ್ನೆಪತ್ರಿಕೆಯ ಕ್ಲಿಷ್ಟತೆಯ ಅನುಪಾತ ಸರಳೀಕರಣ (30:50:20): ಪ್ರಶ್ನೆಪತ್ರಿಕೆಯ ಕಠಿಣತೆಯಿಂದಾಗಿ ಉತ್ತೀರ್ಣ ಪ್ರಮಾಣ ಕುಸಿಯುತ್ತಿರುವುದನ್ನು ತಡೆಯಲು, ಸುಲಭ, ಮಧ್ಯಮ ಹಾಗೂ ಕಠಿಣ ಪ್ರಶ್ನೆಗಳ ಪ್ರಮಾಣವನ್ನು 30 : 50 : 20 ಅನುಪಾತದಲ್ಲಿ ನಿಗದಿಪಡಿಸಲಾಗಿದೆ (ಅಂದರೆ ಶೇ. 80ರಷ್ಟು ಪ್ರಶ್ನೆಗಳು ಸುಲಭ ಮತ್ತು ಮಧ್ಯಮ ಮಟ್ಟದ್ದಾಗಿರುತ್ತವೆ).
ಪರೀಕ್ಷಾ ನೋಂದಣಿ ಶುಲ್ಕ ಕಡಿತ: ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಮುಂದಿನ ಪರೀಕ್ಷೆಯಿಂದಲೇ ಜಾರಿಗೆ ಬರುವಂತೆ ಶುಲ್ಕವನ್ನು ಗಣನೀಯವಾಗಿ ಕಡಿತಗೊಳಿಸಲಾಗುವುದು.
ಅಭ್ಯರ್ಥಿ ಪೋರ್ಟಲ್‌ನಲ್ಲಿ ಸಂಪೂರ್ಣ ಪಾರದರ್ಶಕತೆ: ಅಭ್ಯರ್ಥಿಗಳ ಲಾಗಿನ್ ಪೋರ್ಟಲ್‌ನಲ್ಲಿ ಪ್ರಶ್ನೆ ಐಡಿ (Question ID), ಸರಿ ಉತ್ತರ, ವಿದ್ಯಾರ್ಥಿ ಗುರುತು ಹಾಕಿದ ಉತ್ತರ (Response ID) ಹಾಗೂ ಪ್ರತಿ ಪ್ರಶ್ನೆಗೆ ದೊರೆತ ಅಂಕಗಳ ಸಂಪೂರ್ಣ ಪಾರದರ್ಶಕ ವಿವರವನ್ನು ಪ್ರಕಟಿಸಲು ಎನ್‌ಬಿಇಎಂಎಸ್ ಒಪ್ಪಿದೆ.
ದೆಹಲಿ ಹೈಕೋರ್ಟ್‌ನಲ್ಲಿ ವಿಡಿಯೋ ಪ್ರಶ್ನೆಗಳ ಸ್ಪಷ್ಟನೆ: ಜೂನ್ 2026 ರ ಪರೀಕ್ಷೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ, ಪರೀಕ್ಷೆಯಲ್ಲಿ ಕೇಳಲಾದ ವಿಡಿಯೋ ಆಧಾರಿತ ಪ್ರಶ್ನೆಗಳ ಸಂಖ್ಯೆ ಕೇವಲ 14 ಎಂಬುದನ್ನು ನ್ಯಾಯಾಲಯಕ್ಕೆ ಅಧಿಕೃತವಾಗಿ ಸಲ್ಲಿಸಲು ಮಂಡಳಿ ನಿರ್ಧರಿಸಿದೆ.
ವಿದೇಶಗಳಲ್ಲಿ (ರಷ್ಯಾ, ಜಾರ್ಜಿಯಾ, ಫಿಲಿಪೈನ್ಸ್, ಕಜಕಿಸ್ತಾನ್ ಮುಂತಾದೆಡೆ) ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭಾರತಕ್ಕೆ ಮರಳುವ ವಿದ್ಯಾರ್ಥಿಗಳಿಗೆ ಎಫ್‌ಎಂಜಿಇ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ತೇರ್ಗಡೆ ಪ್ರಮಾಣ ದೊಡ್ಡ ತಲೆನೋವಾಗಿತ್ತು.
ಪೋಸ್ಟ್
A meeting of representative of the AIMSA-FMSW was held with the Officials of National Board of Examinations in Medical Sciences, New Delhi to discuss the issues faced by foreign medical graduate in FMGE June 2026. Some points agreed to in the meeting are:
1. NBEMS has agreed to… pic.twitter.com/ExaL1r5b1o
— ANI (@ANI) August 27, 2026
ಉತ್ತರ ಪತ್ರಿಕೆಗಳು ಮತ್ತು ಪ್ರಶ್ನೆ ಐಡಿಗಳನ್ನು ಬಹಿರಂಗಪಡಿಸದ ಕಾರಣ ಮೌಲ್ಯಮಾಪನದ ಬಗ್ಗೆ ವ್ಯಾಪಕ ಅನುಮಾನಗಳಿದ್ದವು. ಇದೀಗ ಪಾರದರ್ಶಕತೆ ಜಾರಿಯಾಗುತ್ತಿರುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಲಿದೆ.
ವೈದ್ಯರ ಕೊರತೆಗೆ ಪರಿಹಾರ: ಭಾರತದ ಗ್ರಾಮೀಣ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವ ಸಂದರ್ಭದಲ್ಲಿ, ಈ ವಿದ್ಯಾರ್ಥಿಗಳು ಶೀಘ್ರವಾಗಿ ಪರೀಕ್ಷೆ ತೇರ್ಗಡೆಯಾಗಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದರೆ ಆರೋಗ್ಯ ಕ್ಷೇತ್ರಕ್ಕೆ ಸಾವಿರಾರು ಯುವ ವೈದ್ಯರ ಸೇರ್ಪಡೆಯಾಗಲಿದೆ.
ದೇಶೀಯ ಮತ್ತು ವಿದೇಶಿ ವೈದ್ಯರಿಗೆ ಏಕರೂಪದ ‘ನೆಕ್ಸ್ಟ್’ (NExT) ಪರೀಕ್ಷೆ ಜಾರಿಯಾಗುವವರೆಗೂ ಎಫ್‌ಎಂಜಿಇ ವ್ಯವಸ್ಥೆಯಲ್ಲೇ ಸುಧಾರಣೆ ತಂದಿರುವುದು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ