
ಮುಂಬೈ, ಆಗಸ್ಟ್ 19: ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ‘ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಸಹ-ಪ್ರಯಾಣಿಕರ ಜೊತೆ ಜಗಳವಾಡಿ, ಅವರ ಮೇಲೆ ಅಗ್ನಿಶಾಮಕ ಸಿಲಿಂಡರ್(Cylinder)ನಿಂದ ರಾಸಾಯನಿಕ ಅನಿಲ ಸಿಂಪಡಿಸಿದ್ದ ವಿದೇಶಿ ಪ್ರಜೆಯೊಬ್ಬ ರೈಲ್ವೆ ಪೊಲೀಸರ ವಶದಲ್ಲಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯು ಸೂರತ್ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು, ಆತನ ಸಾವಿನ ನಿಖರ ಕಾರಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಮುಂಬೈನ ಬಾಂದ್ರಾ ಟರ್ಮಿನಸ್‌ನಿಂದ ಹೊರಟ ರೈಲಿನ ಸಾಮಾನ್ಯ ಬೋಗಿಯಲ್ಲಿ (General Coach) ಸುಮಾರು 45 ವರ್ಷದ ವಿದೇಶಿ ಪ್ರಜೆ ಇತರ ಪ್ರಯಾಣಿಕರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ. ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ ಆತ ಇನ್ನಷ್ಟು ಆಕ್ರಮಣಕಾರಿಯಾಗಿ, ರೈಲಿನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್ ತೆಗೆದುಕೊಂಡು ಪ್ರಯಾಣಿಕರ ಮೇಲೆ ಸಿಂಪಡಿಸಿದ್ದಾನೆ. ಇದರಿಂದ ಕೆರಳಿದ ಕೆಲ ಪ್ರಯಾಣಿಕರು ಆತನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ರೈಲು ಸೂರತ್ ನಿಲ್ದಾಣ ತಲುಪುತ್ತಿದ್ದಂತೆ ಆರ್‌ಪಿಎಫ್ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ವಿಚಾರಣೆಯ ಸಂದರ್ಭದಲ್ಲಿ ಆತ ಏಕಾಏಕಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತ ವ್ಯಕ್ತಿಯ ಬಳಿ ಯಾವುದೇ ಪಾಸ್‌ಪೋರ್ಟ್, ವೀಸಾ ಅಥವಾ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ.
ಮತ್ತಷ್ಟು ಓದಿ: ಎಲ್‌ಪಿಜಿ ಸಿಲಿಂಡರ್ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ
ಸೂರತ್ ರೈಲ್ವೆ ಪೊಲೀಸರು ಪ್ರಸ್ತುತ ‘ಆಕಸ್ಮಿಕ ಸಾವು’ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯ ಸಾವಿಗೆ ಹೃದಯಾಘಾತ ಕಾರಣವೇ ಅಥವಾ ರೈಲಿನಲ್ಲಿ ಪ್ರಯಾಣಿಕರು ನಡೆಸಿದ ಹಲ್ಲೆಯಿಂದ ಉಂಟಾದ ಆಂತರಿಕ ಗಾಯಗಳೇ ಕಾರಣವೇ ಎಂಬ ಸತ್ಯಾಸತ್ಯತೆ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಬೆರಳಚ್ಚು ಹಾಗೂ ಮುಖಚಹರೆಯ ವಿವರಗಳನ್ನು ವಿದೇಶಾಂಗ ಸಚಿವಾಲಯ ಹಾಗೂ ಸಂಬಂಧಿತ ವಿದೇಶಿ ರಾಯಭಾರ ಕಚೇರಿಗಳಿಗೆ ರವಾನಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 am, Wed, 19 August 26