
ಕೊಲ್ಕತ್ತಾ, ಜುಲೈ 9: ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ (TMC) ಮಾಜಿ ನಾಯಕರಾದ ಸುಷ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದ್ದಾರೆ. ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋತ ನಂತರ ಪಕ್ಷದಲ್ಲಿ ಭುಗಿಲೆದ್ದ ಬಂಡಾಯದ ಹಿನ್ನೆಲೆಯಲ್ಲಿ ಈ ಮೂವರು ನಾಯಕರು ರಾಜ್ಯಸಭೆ ಸದಸ್ಯತ್ವಕ್ಕೆ ಹಾಗೂ ಟಿಎಂಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಕೊಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಸಮೀಕ್ ಭಟ್ಟಾಚಾರ್ಯ ಆ ಮೂವರಿಗೂ ಪಕ್ಷದ ಧ್ವಜವನ್ನು ನೀಡಿ ಬಿಜೆಪಿಗೆ ಆತ್ಮೀಯವಾಗಿ ಬರಮಾಡಿಕೊಂಡರು.
VIDEO | Kolkata, West Bengal: Former TMC Rajya Sabha MPs Sushmita Dev, Sukhendu Sekhar Ray and Prakash Chik Baraik join BJP in the presence of West Bengal BJP president Shamik Bhattacharya.
(Full video available on PTI Videos – https://t.co/n147TvrpG7) pic.twitter.com/FrOzOqfE43
— Press Trust of India (@PTI_News) July 9, 2026
ಇದನ್ನೂ ಓದಿ: ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ; ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ, “ಈ ಮೂವರು ಮಾಜಿ ರಾಜ್ಯಸಭಾ ಸದಸ್ಯರ ಸೇರ್ಪಡೆಯು ಪಶ್ಚಿಮ ಬಂಗಾಳದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಇಡೀ ಬಿಜೆಪಿ ತಂಡವು ಇವರ ಸೇರ್ಪಡೆಯಿಂದ ಸಂತಸಗೊಂಡಿದ್ದು, ಪಕ್ಷವು ಅವರನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತದೆ” ಎಂದು ತಿಳಿಸಿದರು.
ಇದನ್ನೂ ಓದಿ: ಬಂಡಾಯ ಸಂಸದರ ವಿರುದ್ಧ ಕಾನೂನು ಸಮರಕ್ಕಿಳಿದ ಟಿಎಂಸಿ; 20 ರೆಬೆಲ್ಗಳ ಅನರ್ಹತೆಗೆ ಸ್ಪೀಕರ್ಗೆ ಮನವಿ
ಇದೇ ವೇಳೆ ಟಿಎಂಸಿ ಮತ್ತು ಎಡರಂಗದ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು ಇವರು ಕುಂಠಿತಗೊಳಿಸಿದ್ದಾರೆ ಎಂದು ಆರೋಪಿಸಿದರು. “ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಮೂವರು ಸಂಸದರು ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಇಂದು ಈ ಮೂವರು ಬಿಜೆಪಿಗೆ ಸೇರಿದ್ದಾರೆ. ಈ ಮೂವರು ಸಂಸದರು ದಿಗ್ಗಜರಾಗಿದ್ದು, ರಾಜ್ಯಸಭೆಯಲ್ಲಿ ಇವರ ಕಾರ್ಯಕ್ಷಮತೆ ಎಲ್ಲರಿಗೂ ತಿಳಿದಿದೆ” ಎಂದು ಭಟ್ಟಾಚಾರ್ಯ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ