West Bengal Elections 2021: ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ; ಚುನಾವಣಾ ಅಧಿಕಾರಿ ಅಮಾನತು

|

Updated on: Apr 06, 2021 | 12:02 PM

ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು ಉಲುಬೆರಿಯಾ ಉತ್ತರ ವಿಧಾನಸಭಾ ಕ್ಷೇತ್ರದ ತುಲಸಿಬೆರಿಯಾ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಚುನಾವಣಾ ಆಯೋಗದ ಸ್ಟಿಕ್ಕರ್ ಇರುವ ವಾಹನವೊಂದು ಟಿಎಂಸಿ ನಾಯಕನ ಮನೆ ಮುಂದೆ ನಿಂತಿರುವುದನ್ನು ಗಮನಿಸಿದ ಜನರು ಪ್ರತಿಭಟನೆ ಕೂಗಿದ್ದರು.

West Bengal Elections 2021: ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ; ಚುನಾವಣಾ ಅಧಿಕಾರಿ ಅಮಾನತು
ಟಿಎಂಸಿ ನಾಯಕನ ಮನೆಯಲ್ಲಿ ಪತ್ತೆಯಾದ ಇವಿಎಂ ವಿವಿಪ್ಯಾಟ್
Follow us on

ಹೌರಾ : ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ನಾಲ್ಕು ಇವಿಎಂ ಮತ್ತು ವಿವಿಪ್ಯಾಟ್​ಗಳು ಪತ್ತೆಯಾಗಿದ್ದು, ಅದನ್ನು ತಂದಿರಿಸಿದ ಚುನಾವಣಾ ಅಧಿಕಾರಿಯನ್ನು ಮಂಗಳವಾರ ಅಮಾನತು ಮಾಡಲಾಗಿದೆ. ಉಲುಬೆರಿಯಾ ಉತ್ತರ ವಿಧಾನಸಭಾ ಕ್ಷೇತ್ರದ ತುಲಸಿಬೆರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು ಮಂಗಳವಾರ ಮುಂಜಾನೆ ಚುನಾವಣಾ ಆಯೋಗದ ಸ್ಟಿಕ್ಕರ್ ಇರುವ ವಾಹನವೊಂದು ಟಿಎಂಸಿ ನಾಯಕನ ಮನೆ ಮುಂದೆ ನಿಂತಿರುವುದನ್ನು ಗಮನಿಸಿದ ಜನರು ಪ್ರತಿಭಟನೆ ಕೂಗಿದ್ದರು. ಆಮೇಲೆ ವಿಚಾರಿಸಿದಾಗ ಸೆಕ್ಟರ್ 17ರ ಚುನಾವಣಾ ಅಧಿಕಾರಿ ತಪನ್ ಸರ್ಕಾರ್ ಅವರು ಟಿಎಂಸಿ ನಾಯಕನ ಮನೆಗೆ ಇವಿಎಂ ತೆಗೆದುಕೊಂಡು ಬಂದಿದ್ದು, ರಾತ್ರಿ ಅಲ್ಲಿಯೇ ಉಳಿದುಕೊಂಡಿದ್ದರು ಎಂಬುದು ತಿಳಿದು ಬಂದಿದೆ.

ಇವಿಎಂ ಮತ್ತು ವಿವಿಪ್ಯಾಟ್​ಗಳನ್ನು ವಶಪಡಿಸಲಾಗಿದ್ದು, ಚುನಾವಣಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಇವಿಎಂಗಳನ್ನು ಇಂದು ಮತದಾನಕ್ಕೆ ಬಳಸಲಾಗುವುದಿಲ್ಲ. ಈ ಪ್ರಕರಣ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಯಿಂದ ವರದಿ ಕೇಳಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾನು ಮತಗಟ್ಟೆಗೆ ತಲುಪುವ ಹೊತ್ತಿಗೆ ರಾತ್ರಿಯಾಗಿತ್ತು. ಅಷ್ಟೊತ್ತಿಗೆ ಮತಗಟ್ಟೆ ಮುಚ್ಚಿದ್ದರಿಂದ ನಾನು ನನ್ನ ಸಂಬಂಧಿಯ ಮನೆಗೆ ಹೋದೆ. ಬೇರೆ ಯಾವುದೇ ಸುರಕ್ಷಿತ ಸ್ಥಳ ಇಲ್ಲದ ಕಾರಣ ನಾನು ಅಲ್ಲಿ ಉಳಿದುಕೊಂಡೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ.


ಟಿಎಂಸಿ ನಾಯಕನ ಮನೆ ಬಳಿ ಸ್ಥಳೀಯರು ಗುಂಪು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ವಿಚಾರಿಸಲು ಬಂದ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ (BDO) ಪ್ರತಿಭಟನೆಕಾರರು ಮುತ್ತಿಗೆ ಹಾಕಿದ ಘಟನೆಯೂ ಇಲ್ಲಿ ನಡೆದಿದೆ.

ಇದೆಲ್ಲವೂ ಟಿಎಂಸಿ ಕಾರ್ಯತಂತ್ರ ಎಂದು ಬಿಜೆಪಿ ಅಭ್ಯರ್ಥಿ ಚಿರನ್ ಬೆರಾ ಆರೋಪಿಸಿದ್ದು, ಆರೋಪವನ್ನು ಟಿಎಂಸಿ ನಿರಾಕರಿಸಿದೆ. ಇದು ಟಿಎಂಸಿಯ ಹಳೇ ಚಾಳಿ, ಇದನ್ನು ಬಿಡಲು ಅವರಿಗೆ ಸಮಯ ಹಿಡಿಯುತ್ತದೆ. ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಅವರು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಭಾ ಚುನಾವಣೆಯ ಮೂರನೇ ಹಂತದ ಮತದಾನ ಪ್ರಗತಿಯಲ್ಲಿದೆ.

ಇದನ್ನೂ ಓದಿ: West Bengal Election 2021: ‘ದೀದಿ.. ಜನರ ನಂಬಿಕೆಗೆ ದ್ರೋಹ ಮಾಡಿದ ನೀವು ಸೋಲನ್ನು ಒಪ್ಪಿಕೊಳ್ಳಲೇಬೇಕು’-ಹೂಗ್ಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

(Four EVMs VVPATs found at Trinamool Congress leaders house in West Bengal poll official suspended)

Published On - 11:58 am, Tue, 6 April 21