ಪಶ್ಚಿಮ ಬಂಗಾಳ ಚುನಾವಣೆ: 3ನೇ ಹಂತದ ಬಹುತೇಕ ಕ್ಷೇತ್ರಗಳಲ್ಲಿ ಟಿಎಂಸಿ ಉಕ್ಕಿನ ಹಿಡಿತ, ಮುಸ್ಲಿಂ ಮತದಾರರೇ ನಿರ್ಣಾಯಕ
West Bengal Assembly Elections 2021: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಈ ಪ್ರದೇಶಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಬಿಜೆಪಿ ಒಂದೇಒಂದು ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ಮೊದಲ ಮತ್ತು 2ನೇ ಹಂತದ ಮತದಾನಗಳು ಈಗಾಗಲೇ ಮುಕ್ತಾಯಗೊಂಡಿವೆ. ಟಿಎಂಸಿ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಪಾಳಯ ಬಲವಾಗಿ ನೆಚ್ಚಿಕೊಂಡಿರುವ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರಕ್ಕೂ 2ನೇ ಹಂತದಲ್ಲಿ ಅಂದರೆ ಏಪ್ರಿಲ್ 1ರಂದು ಚುನಾವಣೆ ಮುಕ್ತಾಯವಾಗಿದೆ. ನಾಳೆ (ಏಪ್ರಿಲ್ 6) 3ನೇ ಹಂತದ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದ 3 ಜಿಲ್ಲೆಗಳ 31 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಪೈಕಿ 16 ಕ್ಷೇತ್ರಗಳು ದಕ್ಷಿಣ 24 ಪರಗಣ, 7 ಕ್ಷೇತ್ರಗಳು ಹೌರಾ ಮತ್ತು 8 ಕ್ಷೇತ್ರಗಳು ಹೂಗ್ಲಿ ಜಿಲ್ಲೆಯಲ್ಲಿವೆ.
ಮತದಾನ ನಡೆಯುವ ಕ್ಷೇತ್ರಗಳು ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಅನುಕೂಲಕರ ಪರಿಸ್ಥಿತಿ ಒದಗಿಸಿವೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಈ ಪ್ರದೇಶದ ಕ್ಷೇತ್ರಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದರು. 31 ಕ್ಷೇತ್ರಗಳ ಪೈಕಿ 29ರಲ್ಲಿ ಟಿಎಂಸಿ ಅಭ್ಯರ್ಥಿಗಳು ಜಯಗಳಿಸಿದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒಂದೇ ಒಂದು ಕ್ಷೇತ್ರದಲ್ಲಿಯೂ ಗೆಲುವು ದಕ್ಕಿರಲಿಲ್ಲ.
2019ರ ಲೋಕಸಭಾ ಚುನಾವಣೆಗಳಲ್ಲಿಯೂ ಈ ಕ್ಷೇತ್ರಗಳಲ್ಲಿ ಟಿಎಂಸಿ ತನ್ನ ಪ್ರಭಾವವನ್ನು ತುಸುವೂ ಕಳೆದುಕೊಂಡಿರಲಿಲ್ಲ. ಮತದಾನದ ದತ್ತಾಂಶಗಳನ್ನು ಪರಿಶೀಲಿಸಿದರೆ, 30 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳಿಕೆಯಲ್ಲಿ ಟಿಎಂಸಿ ಅಭ್ಯರ್ಥಿಗಳು ಬಹುದೊಡ್ಡ ಮುನ್ನಡೆ ಗಳಿಸಿದ್ದನ್ನು ನೆನಪಿಸಿಕೊಳ್ಳಬಹುದು. ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಮುನ್ನಡೆ ದಾಖಲಿಸಿದ್ದರೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಅಭ್ಯರ್ಥಿಗಳು ದೊಡ್ಡಮಟ್ಟದ ಅಂತರದಿಂದ ಹಿಂದೆ ಬಿದ್ದಿದ್ದರು.
2016ರ ವಿಧಾನಸಭಾ ಚುನಾವಣೆಯಲ್ಲಿ ಮಾತ್ರವಲ್ಲ 2019ರ ಲೋಕಸಭಾ ಚುನಾವಣೆಯಲ್ಲಿಯೂ ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿಚ್ಚಳ ಮೇಲುಗೈ ಸಾಧಿಸಿದ್ದರೂ 31 ಕ್ಷೇತ್ರಗಳಲ್ಲಿ 15 ಹೊಸಮುಖಗಳಿಗೆ ಟಿಎಂಸಿ ಅವಕಾಶ ನೀಡಿವೆ. ಆಡಳಿತವಿರೋಧಿ ಅಲೆಗೆ ತಡೆಯೊಡ್ಡುವ ದೃಷ್ಟಿಯಿಂದ ಟಿಎಂಸಿ ಈ ನಿರ್ಧಾರ ಕೈಗೊಂಡಿದೆ. ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳ ಪೈಕಿ ಬರೌರಿಪುರ್ ಪಶ್ಚಿಮ ಮತ್ತು ಸೌಕತ್ ಮಹೊಲ್ಲಾ ಕ್ಷೇತ್ರಗಳಲ್ಲಿ ವಿಧಾನಸಭೆಯ ಸ್ಪೀಕರ್ ಆಗಿದ್ದ ಬಿಮನ್ ಬ್ಯಾನರ್ಜಿ ಸ್ಪರ್ಧಿಸಿದ್ದಾರೆ. ಪೂರ್ವ ಕ್ಯಾನಿಂಗ್ನ ಬಿಮನ್ ಬ್ಯಾನರ್ಜಿ ಈ ಜಿಲ್ಲೆಗಳಲ್ಲಿ ವ್ಯಾಪಕ ಪ್ರಭಾವ ಹೊಂದಿದ್ದಾರೆ.
ಇದನ್ನೂ ಓದಿ: ಟಿವಿ9 ವಿಶೇಷ: ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ 2021 – ಬಂಗಾಳ ಗದ್ದುಗೆ ಯಾರಿಗೆ?
ಸಾಮಾನ್ಯರಲ್ಲ ಇವರು ಆಡಳಿತಾರೂಢ ಪಕ್ಷದಲ್ಲಿರುವ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಟಿಎಂಸಿಯ ಹೂಗ್ಲಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ದಿಲೀಪ್ ಯಾದವ್ ಪ್ರಮುಖರು. ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರಿಂದ ಬೇರ್ಪಟ್ಟಿರುವ ಪತ್ನಿ ಸುಜಾತಾ ಮೊಂಡಲ್ ಖಾನ್ ಸಹ ಇಲ್ಲಿಯವರೇ. ಸುಜಾತಾ ಕಳೆದ ಡಿಸೆಂಬರ್ನಲ್ಲಿ ಟಿಎಂಸಿ ಪರ ಒಲವು ತೋರಿಸಿದ ನಂತರ ಖಾನ್ ದಂಪತಿಗಳ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.
ಹೂಗ್ಲಿ ಜಿಲ್ಲೆಯ ಹರಿಪಾಲ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಟಿಎಂಸಿ ಅಭ್ಯರ್ಥಿ ಕರಬಿ ಮನ್ನಾ ಸಹ ಸಾಮಾನ್ಯರಲ್ಲ. ಇವರ ಪತಿ ಬೆಚರಮ್ ಮನ್ನಾ ಸಿಂಗುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸಿಂಗುರ್ ಬಗ್ಗೆ ನಿಮಗೆ ತಿಳಿದೇ ಇದೆ ಅಲ್ವಾ? 2006ರಲ್ಲಿ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಆಡಳಿತವನ್ನು ಕಿತ್ತೊಗೆಯಲು ಮಮತಾ ಬ್ಯಾನರ್ಜಿ ರಣಕಹಳೆ ಮೊಳಗಿಸಿದ್ದು ಇದೇ ಸಿಂಗುರ್ನಿಂದ. 2019ರಲ್ಲಿ ಬಿಜೆಪಿಯು ಸಿಂಗುರ್ ಸುತ್ತಮುತ್ತಲೂ ಗಣನೀಯ ಪ್ರಮಾಣದಲ್ಲಿ ಮತಗಳಿಸಿತ್ತು. ಈ ಬಾರಿಯ ಕರಾಬಿ ಮನ್ನಾ ಪಡೆಯುವ ಮತಗಳು ಹರಿಪಾಲ್ ಕ್ಷೇತ್ರದ ಮತದಾರರು ಇನ್ನೂ ಟಿಎಂಸಿ ಜೊತೆಗೆ ಇದ್ದಾರೆಯೋ ಅಥವಾ ನಿಷ್ಠೆ ಬದಲಿಸಿದ್ದಾರೆಯೋ ಎಂಬುದನ್ನು ತಿಳಿಸಿಕೊಡುತ್ತವೆ. ಹರಿಪಾಲ್ ಕ್ಷೇತ್ರದಲ್ಲಿ ಕರಬಿ ಪತಿ ಬೆಚರಮ್ 2011 ಮತ್ತು 2016ರ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿದ್ದರು.
ಕಣದಲ್ಲಿ ಘನಾನುಘಟಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರಮುಖ ಬಿಜೆಪಿ ಅಭ್ಯರ್ಥಿಗಳಲ್ಲಿ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ಗುಪ್ತ, ನಟಿ ತನುಶ್ರೀ ಚಕ್ರವರ್ತಿ, ಪಾಪಿಯಾ ಅಧಿಕಾರಿ ಅವರ ಹೆಸರುಗಳನ್ನು ಉಲ್ಲೇಖಿಸಲೇಬೇಕು. ಈ ಹಿಂದೆ ಟಿಎಂಸಿಯಿಂದ ಸ್ಪರ್ಧಿಸಿ ಜಯಗಳಿಸಿದ್ದ ದೀಪಕ್ ಹಾಲ್ದೆರ್ ಸಹ ಈ ಬಾರಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೂಗ್ಲಿ ಜಿಲ್ಲೆಯ ಆಲೂಗಡ್ಡೆ ವಲಯ ಎನಿಸಿಕೊಂಡಿರುವ ತಾರಕೇಶ್ವರದಿಂದ ಸ್ಪರ್ಧಿಸಿರುವ ದಾಸ್ಗುಪ್ತ ಪ್ರಬಲ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಬಿಜೆಪಿಯು ಈ ಪ್ರದೇಶದಲ್ಲಿ ತನ್ನ ಬಲವನ್ನು ನಿಯಮಿತವಾಗಿ ಹೆಚ್ಚಿಸಿಕೊಳ್ಳುತ್ತಿದೆ. ತಾರಕೇಶ್ವರವು ಆರಂಭಗಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇಲ್ಲಿ ಟಿಎಂಸಿ ಅಭ್ಯರ್ಥಿ ಅಪರೂಪ ಪೊದ್ದಾರ್ 2019ರಲ್ಲಿ ಕೇವಲ 1,142 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.
ಫೆಬ್ರುವರಿ 2ರಂದು ಬಿಜೆಪಿಗೆ ಸೇರಿದ ಹಾಲ್ದೇರ್ ಈ ಬಾರಿ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 2011 ಮತ್ತು 2016ರಲ್ಲಿ ಅವರು ಇದೇ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು. ಶ್ಯಾಂಪುರ ಕ್ಷೇತ್ರದಿಂದ ತನುಶ್ರೀ ಚಕ್ರವರ್ತಿ ಮತ್ತು ಹೌರಾ ಜಿಲ್ಲೆ ಉಲುಬೆರಿಯಾ ದಕ್ಷಿಣ ಕ್ಷೇತ್ರದಿಂದ ಪಾಪಿಯಾ ಅಧಿಕಾರಿ ಸ್ಪರ್ಧಿಸಿದ್ದಾರೆ. ಎಡಪಕ್ಷಗಳು, ಕಾಂಗ್ರೆಸ್ ಮತ್ತು ಭಾರತೀಯ ಜಾತ್ಯತೀತ ಒಕ್ಕೂಟದ ಮೈತ್ರಿಕೂಟ ಈ ಪ್ರದೇಶದಲ್ಲಿ ಕೆಲವೇ ಕೆಲವು ಜನಪ್ರಿಯ ಮುಖಗಳನ್ನು ಕಣಕ್ಕಿಳಿಸಿದೆ. ಅವರ ಪೈಕಿ ಸುಂದರ್ಬನ್ ಅಭಿವೃದ್ಧಿ ಇಲಾಖೆಯ ಸಚಿವ ಕಾಂತಿ ಗಂಗೂಲಿ ರಾಯ್ದಿಘಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 2001 ಮತ್ತು 2016ರಲ್ಲಿ ಇವರು ಇದೇ ಕ್ಷೇತ್ರದಲ್ಲಿ ಟಿಎಂಸಿ ಟಿಕೆಟ್ ಮೇಲೆ ಕಣಕ್ಕಿಳಿದಿದ್ದ ಚಿತ್ರನಟಿ ದೇವಶ್ರೀ ರಾಯ್ರಿಂದ ಸೋಲನುಭವಿಸಿದ್ದರು. ಈ ಬಾರಿ ದೇವಶ್ರೀ ಬಿಜೆಪಿಗೆ ಸೇರಿದ್ದಾರೆ.
ಮತ್ತೊಬ್ಬ ಮಾಜಿ ಸಚಿವ ಸುಭಾಷ್ ನಸ್ಕರ್ ಬಸಂತಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಿಪಿಐ (ಎಂ)ನ ವಿದ್ಯಾರ್ಥಿ ಘಟಕವಾದ ಎಸ್ಎಫ್ಐ (Student Federation of India – SFI) ರಾಜ್ಯ ಘಟಕದ ಅಧ್ಯಕ್ಷ ಪ್ರತಿಕ್ಉರ್ ರೆಹಮಾನ್ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. 3ನೇ ಹಂತದ ಮತದಾನ ನಡೆಯುವ ಕ್ಷೇತ್ರದಲ್ಲಿರುವ ಮೂರರಲ್ಲಿ ಒಬ್ಬ ಮತದಾರ ಮುಸ್ಲಿಂ ಮತ್ತು ಇನ್ನೊಬ್ಬರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರಾಗಿರುತ್ತಾರೆ ಎನ್ನುವುದು ಗಮನಾರ್ಹ ಸಂಗತಿ. ಈ ಕ್ಷೇತ್ರಗಳಲ್ಲಿ ಮುಸ್ಲಿಮರು ಶೇ 29 ಮತ್ತು ಎಸ್ಸಿ (ಶೇ 29) ಮತ್ತು ಎಸ್ಟಿಗೆ (ಶೇ 2) ಸೇರಿದ ಮತದಾರರ ಪ್ರಮಾಣ ಒಟ್ಟು ಶೇ 31ರಷ್ಟಿದೆ.
ಹಲವು ರಾಜಕೀಯ ಲೆಕ್ಕಾಚಾರಗಳು 3ನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಟಿಎಂಸಿಯು 4 ಮುಸ್ಲಿಮರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಇಬ್ಬರಿಗೆ ಕೊಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅನುಸರಿಸುತ್ತಿರುವ ಕಾರ್ಯತಂತ್ರ ಸ್ಪಷ್ಟವಾಗಿದೆ. ಹಿಂದೂ ಮತಗಳನ್ನು ಕ್ರೋಡೀಕರಿಸಿಕೊಂಡು ಆಡಳಿತಾರೂಢ ಟಿಎಂಸಿಯಿಂದ ಗೆಲುವು ಕಸಿದುಕೊಳ್ಳಬೇಕೆನ್ನುವುದು ಬಿಜೆಪಿಯ ಉದ್ದೇಶ. ಎಡಪಕ್ಷ-ಕಾಂಗ್ರೆಸ್-ಐಎಸ್ಎಫ್ ಮೈತ್ರಿಕೂಟದಲ್ಲಿ ಪ್ರಭಾವಿ ಮುಸ್ಲಿಂ ಧರ್ಮಗುರು ಅಬ್ಬಾಸ್ ಸಿದ್ದಿಕಿ ಇರುವುದು ಬಿಜೆಪಿಯ ಭರವಸೆ ಹೆಚ್ಚಿಸಿದೆ. ಟಿಎಂಸಿಯ ಪ್ರಬಲ ಬೆಂಬಲಿಗರಾಗಿರುವ ಮುಸ್ಲಿಮರ ಮತಗಳನ್ನು ಇದು ಒಡೆಯುವಂತೆ ಮಾಡುತ್ತದೆ. ಈ ಮೂಲಕ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ. ಅಂಫನ್ ಚಂಡಮಾರುತ ಪರಿಹಾರ ಸಾಮಗ್ರಿ ವಿತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಿಜೆಪಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ. ಟಿಎಂಸಿ ನಾಯಕರ ‘ಕಟ್ ಮನಿ’ (ಕಮಿಷನ್ ದಂದೆ) ವಿಚಾರವನ್ನೂ ಕೇಸರಿಪಾಳಯ ಚುನಾವಣಾ ವಿಷಯವಾಗಿಸಿದೆ.
ಭ್ರಷ್ಟಾಚಾರ ಆರೋಪಗಳಿಂದ ಹೈರಾಣಾಗಿರುವ ಟಿಎಂಸಿ ಹೊಸಬರಿಗೆ ಟಿಕೆಟ್ ಕೊಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಪ್ರಯತ್ನಿಸುತ್ತಿದೆ. ಪಕ್ಷವು ಮುಸ್ಲಿಂ ಮತಗಳನ್ನು ಕ್ರೋಡಿಕರಿಸಲು ಪ್ರಯತ್ನಿಸುತ್ತಿದ್ದರೆ ಅದರ ನಾಯಕರು ದಿನಬಳಕೆ ವಸ್ತುಗಳ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಗಳು ಕೆಳಗಿಳಿಯುತ್ತಿಲ್ಲ ಎಂಬುದನ್ನೇ ಸಾರ್ವಜನಿಕ ಸಮಾರಂಭಗಳಲ್ಲಿ ಹೆಚ್ಚುಹೆಚ್ಚು ಪ್ರಸ್ತಾಪಿಸುತ್ತಿದ್ದಾರೆ. ಅಡುಗೆ ಮನೆಯ ಮೇಲೆ ಹಣದುಬ್ಬರದ ಪರಿಣಾಮದ ಬಗ್ಗೆಯೂ ಟಿಎಂಸಿ ಅಭ್ಯರ್ಥಿಗಳು ಮಾತನಾಡುತ್ತಿದ್ದಾರೆ.
24 ಪರಗಣ ಜಿಲ್ಲೆಯ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಟಿಎಂಸಿಗೆ ಹೆಚ್ಚಿನ ಅನುಕೂಲಗಳಿವೆ. ಮುಸ್ಲಿಮರ ಸಂಖ್ಯೆ ಕಡಿಮೆಯಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಜೊತೆಗೆ ಟಿಎಂಸಿ ನೇರ ಹಣಾಹಣಿ ನಡೆಸಬೇಕಿದೆ. ಹೌರಾ ಜಿಲ್ಲೆಯಲ್ಲಿ ಟಿಎಂಸಿಗೆ ಹೆಚ್ಚು ಅನುಕೂಲವಿದೆ. ಈಚೆಗೆ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಚಿವ ಮತ್ತು ಟಿಎಂಸಿ ನಾಯಕರಾಗಿದ್ದ ರಾಜೀವ್ ಬ್ಯಾನರ್ಜಿ ಅವರ ಪ್ರಭಾವವನ್ನು ಬಿಜೆಪಿ ನೆಚ್ಚಿಕೊಂಡಿದೆ. ಆದರೆ 3ನೇ ಹಂತದಲ್ಲಿ ಹೌರಾ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿರುವ ಕ್ಷೇತ್ರಗಳು ಉಲ್ಬೆರಿಯಾ ಉಪವಿಭಾಗದ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ರಾಜೀವ್ ಬ್ಯಾನರ್ಜಿಗೆ ಹೇಳಿಕೊಳ್ಳುವಂಥ ಪ್ರಭಾವವಿಲ್ಲ. ಹೂಗ್ಲಿ ಜಿಲ್ಲೆಯಲ್ಲಿಯೂ ಕದನಕಣ ರಂಗೇರಿದೆ.
ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ
ಕಾಂಗ್ರೆಸ್, ಸೆಕ್ಯುಲರ್ ಮೈತ್ರಿಕೂಟದ ತಂತ್ರಗಳಿವು ಎಡಪಕ್ಷಗಳು, ಕಾಂಗ್ರೆಸ್ ಮತ್ತು ಸೆಕ್ಯುಲರ್ ರಂಗದ ಮೈತ್ರಿಕೂಟವು ಸಹ ಪ್ರಬಲ ಹೋರಾಟದ ಮುನ್ಸೂಚನೆ ನೀಡಿವೆ. 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳ ಬಗ್ಗೆ ತೃತೀಯ ರಂಗಕ್ಕೆ ಹೆಚ್ಚಿನ ಭರವಸೆ ಇದೆ. ರೈದಿಘಿ, ಬಸಂತಿ ಮತ್ತು ಕೆನಿಂಗ್ ಕ್ಷೇತ್ರಗಳಲ್ಲಿ ತೃತೀಯ ರಂಗ ಗೆಲುವಿನ ಭರವಸೆ ಇರಿಸಿಕೊಂಡಿದೆ. ಸಿಂಗೂರ್ ಪ್ರದೇಶವಿರುವ ಹೂಗ್ಲಿ ಜಿಲ್ಲೆಯಲ್ಲಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಎಡರಂಗವು ಟಾಟಾ ಮೋಟಾರ್ಸ್ ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದು ಒಳ್ಳೆಯ ನಿರ್ಧಾರವಾಗಿತ್ತು ಎಂದು ಎಡಪಕ್ಷಗಳು ಇಂದಿಗೂ ಪ್ರತಿಪಾದಿಸುತ್ತಿವೆ. ವಿವಾದಿತ 997 ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆ ಈವರೆಗೆ ಆರಂಭವಾಗಿಲ್ಲ. ಇಲ್ಲಿಗೆ ಯಾವುದೇ ಕೈಗಾರಿಕೆಗಳೂ ಬಂದಿಲ್ಲ. ಸಿಂಗೂರ್ ಕ್ಷೇತ್ರವನ್ನು ಗಮನಿಸಿದರೆ ಮಮತಾ ಬ್ಯಾನರ್ಜಿ ಆಗ ಮಾಡಿದ್ದು ಶುದ್ಧ ರಾಜಕೀಯ ಮಾತ್ರ ಎಂಬುದು ಮನವರಿಕೆಯಾಗುತ್ತದೆ ಎಂದು ಎಡಪಕ್ಷಗಳು ಪ್ರಚಾರ ಮಾಡುತ್ತಿವೆ. ಜಂಗರಿಪುರ, ಹರಿಪ್ಲಾ, ಧನೈಖಾಲಿ (ಎಸ್ಸಿ) ಮತ್ತು ತಾರಕೇಶ್ವರ ಕ್ಷೇತ್ರಗಳತ್ತ ಎಡಪಕ್ಷಗಳು ಹೆಚ್ಚು ಭರವಸೆ ಇರಿಸಿಕೊಂಡಿವೆ.
(Battle for Bengal TMC stronghold in south Bengal to go for polls in phase 3)
ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?
Published On - 4:32 pm, Mon, 5 April 21