ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ; ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಅರೆಸ್ಟ್ ವಾರಂಟ್ ಜಾರಿ

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮತ್ತೊಂದು ಹಿನ್ನಡೆಯಾಗಿದ್ದು, ದ್ವೇಷಪೂರಿತ ಭಾಷಣ ಪ್ರಕರಣದಲ್ಲಿ ಪದೇ ಪದೇ ನೀಡಿದ ಸಮನ್ಸ್‌ಗಳನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನ್ಯಾಯಾಲಯ ಇಂದು ಆದೇಶಿಸಿದೆ. ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಕುರಿತು ಆಗಸ್ಟ್ 28ರೊಳಗೆ ವರದಿ ಸಲ್ಲಿಸುವಂತೆ ಕೃಷ್ಣನಗರ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ; ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಅರೆಸ್ಟ್ ವಾರಂಟ್ ಜಾರಿ
Mahua Moitra
Image Credit source: TV9

Updated on: Aug 19, 2026 | 9:12 PM

ಕೃಷ್ಣನಗರ, ಆಗಸ್ಟ್ 19: ಭಾರತೀಯ ಸೇನೆಯ (Indian Army) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಾಗೂ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸತತವಾಗಿ ಸಮನ್ಸ್ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ವಿರುದ್ಧ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿ ಆದೇಶಿಸಿದೆ. ಕೃಷ್ಣನಗರದ 3ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದು, ಬಂಧನ ವಾರಂಟ್ ಜಾರಿಗೊಳಿಸಿದ ಕುರಿತು ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.

ಮಹುವಾ ಮೊಯಿತ್ರಾ ವಿರುದ್ಧದ ಪ್ರಕರಣವೇನು?:

ಭಾರತೀಯ ಸೇನಾ ಸಿಬ್ಬಂದಿ ಹಾಗೂ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಅವರಿಗೆ ಹಲವು ಬಾರಿ ಸಮನ್ಸ್ ಕಳುಹಿಸಿತ್ತು. ನ್ಯಾಯಾಲಯವು ಪದೇಪದೆ ಸಮನ್ಸ್ ನೀಡಿದ್ದರೂ ಮಹುವಾ ಮೊಯಿತ್ರಾ ವಿಚಾರಣೆಗೆ ಹಾಜರಾಗಿರಲಿಲ್ಲ.

ಇದನ್ನೂ ಓದಿ: ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ

ಜುಲೈ 1ರಂದು ಸಂಸದೆ ಮಹುವಾ ಮೊಯಿತ್ರಾ ನಾದಿಯಾದಲ್ಲಿ ಪ್ರತಿಭಟನೆಗಳನ್ನು ಎದುರಿಸಿದರು. ಆ ದಿನ, ಅವರ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆಯಲಾಯಿತು. ಆ ಸಮಯದಲ್ಲಿ ಮಹುವಾ ಮೊಯಿತ್ರಾ ನೀಡಿದ ಹೇಳಿಕೆಯೊಂದಿಗೆ ವಿವಾದ ಪ್ರಾರಂಭವಾಯಿತು. ಸಂಸದೆ ಮಹುವಾ ಮೊಯಿತ್ರಾ, “ಈ ರೀತಿ ಮೊಟ್ಟೆಗಳನ್ನು ಎಸೆಯುವ ಬದಲು, ಬುರ್ಖಾ ಧರಿಸಿ ಮೊಟ್ಟೆಗಳನ್ನು ಎಸೆಯಿರಿ. ಆಗ ಯಾರೂ ನಿಮ್ಮನ್ನು ನೋಡುವುದಿಲ್ಲ. ಆಗ ನಿಮ್ಮ ವಿರುದ್ಧ ಯಾವುದೇ ದೂರು ಇರುವುದಿಲ್ಲ” ಎಂದು ಹೇಳಿದ್ದರು. ಅದರ ನಂತರ, ನಾದಿಯಾದ ಹೊಗಲ್ಬೇರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹುವಾ ಮೊಯಿತ್ರಾ ಅವರ ಹೇಳಿಕೆಗಳು ಧಾರ್ಮಿಕ ಭಾವನೆಗಳನ್ನು ನೋಯಿಸುತ್ತವೆ ಮತ್ತು ಎರಡೂ ಧರ್ಮಗಳನ್ನು ಅವಮಾನಿಸುವ ಧಾರ್ಮಿಕವಾಗಿ ಪ್ರಚೋದನಕಾರಿ ಕಾಮೆಂಟ್‌ಗಳಾಗಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ನಿವಾಸದಲ್ಲಿ ಶೋಧ ನಡೆಸುತ್ತಿರುವ ಸಿಬಿಐ

ಬಂಗಾಳ ಕೋರ್ಟ್ ಅಂತಿಮವಾಗಿ ಇಂದು ಸ್ವತಃ ಹಾಜರಾಗುವಂತೆ ನಿರ್ದೇಶನ ನೀಡಿತ್ತು. ಆದರೆ, ವಿಚಾರಣೆ ಆರಂಭವಾದಾಗ ಅವರು ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ. ಮಹುವಾ ಮೊಯಿತ್ರಾ ಅವರ ನಿರಂತರ ಗೈರುಹಾಜರಿಯನ್ನು ನ್ಯಾಯಾಲಯವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅವರ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

“ಈ ನ್ಯಾಯಾಲಯದ ಆದೇಶಗಳನ್ನು ಸತತವಾಗಿ ಉಲ್ಲಂಘಿಸಿರುವುದು, ಆರೋಪಿಗೆ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಇರುವ ನಿರ್ಲಕ್ಷ್ಯದ ಧೋರಣೆಯನ್ನು ತೋರಿಸುತ್ತದೆ. ಹೀಗಾಗಿ, ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸುವುದನ್ನು ಬಿಟ್ಟು ಈ ನ್ಯಾಯಾಲಯಕ್ಕೆ ಬೇರೆ ಯಾವುದೇ ದಾರಿಯಿಲ್ಲ” ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ವಿಚಾರಣೆ ವೇಳೆ ಮೊಯಿತ್ರಾ ಅವರ ವಕೀಲರು, ತಮ್ಮ ಕಕ್ಷಿದಾರರು ಯಾವುದೇ ಕಾರಣಕ್ಕೂ ನ್ಯಾಯಾಲಯದ ಮುಂದೆ ಹಾಜರಾಗುವುದಿಲ್ಲ ಎಂದು ಹೇಳಿದ್ದನ್ನೂ ಪ್ರಸ್ತಾಪಿಸಿದ ನ್ಯಾಯಾಲಯ, ಸಂಸದೆ ಮಹುವಾ ಮೊಯಿತ್ರಾ ಅವರಿಗೆ “ಕಾನೂನಿನ ಹಾಗೂ ನ್ಯಾಯಾಲಯದ ಬಗ್ಗೆ ಯಾವುದೇ ಗೌರವವಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us