
ಗ್ರೇಟರ್ ನೋಯ್ಡಾ, ಅಕ್ಟೋಬರ್ 15: ಪತ್ನಿಯೊಂದಿಗೆ ಮತ್ತೆ ಜಗಳವಾಗಬಹುದೆಂಬ ಭೀತಿಯಿಂದ ಬಾಲ್ಕನಿಯಿಂದ ಕೆಳಗೆ ಇಳಿಯಲು ಹೋಗಿ ಟೆಕ್ಕಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ವೆಸ್ಟ್ ವ್ಯಾಪ್ತಿಯ ಸೆಂಚುರಿಯನ್ ಪಾರ್ಕ್ ಟ್ರಾಪಿಕಲ್ ಗಾರ್ಡನ್ ಸೊಸೈಟಿಯಲ್ಲಿ ಈ ಘಟನೆ ಸಂಭವಿಸಿದೆ.
ಮೃತನನ್ನು ಹರ್ಷಿತ್ ಲವಾನಿಯಾ ಎಂದು ಗುರುತಿಸಲಾಗಿದೆ, ಆರು ತಿಂಗಳಿನಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಹರ್ಷಿತ್, ಆಕೆ ಏಕಾಏಕಿ ಮನೆಬಾಗಿಲಿಗೆ ಬಂದಾಗ ಮುಖಾಮುಖಿಯಾಗುವುದನ್ನು ತಪ್ಪಿಸಲು ಬಾಲ್ಕನಿಯ ಮೂಲಕ ಕೆಳಮಹಡಿಗೆ ಜಿಗಿಯಲು ಹೋಗಿ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಹರ್ಷಿತ್ ಲವಾನಿಯಾ ಅವರಿಗೆ 2024 ರಲ್ಲಿ ವಿವಾಹವಾಗಿತ್ತು. ದಾಂಪತ್ಯ ಕಲಹದ ಕಾರಣ ಕಳೆದ ಆರು ತಿಂಗಳಿಂದ ಪತಿಯಿಂದ ದೂರವಿದ್ದ ಹರ್ಷಿತ್, ಸೆಂಚುರಿಯನ್ ಪಾರ್ಕ್ ಸೊಸೈಟಿಯ 21ನೇ ಮಹಡಿಯ ಬಾಡಿಗೆ ಫ್ಲಾಟ್ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಘಟನೆ ನಡೆದ ದಿನ ಹರ್ಷಿತ್ ಅವರ ಪತ್ನಿ ಮಾತನಾಡಲು ಅವರ ಫ್ಲಾಟ್ಗೆ ಬಂದಿದ್ದಾರೆ. ಹೊರಗಡೆಯಿಂದ ಬಾಗಿಲು ತಟ್ಟಿ ಮಾತನಾಡಲು ಕರೆದಾಗ, ಮತ್ತೆ ವಾಗ್ವಾದ ನಡೆಯಬಹುದೆಂದು ಹೆದರಿದ ಹರ್ಷಿತ್ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ಪತಿ ಬಾಗಿಲು ತೆರೆಯದಿದ್ದಾಗ ಆಕೆ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿಯನ್ನು ಕರೆದು ಬಾಗಿಲು ತೆರೆಸಲು ಮುಂದಾಗಿದ್ದಾಳೆ. ಸಿಬ್ಬಂದಿ ಬರುವುದನ್ನು ಕಂಡ ಹರ್ಷಿತ್ ಆತಂಕಗೊಂಡು, ಬಾಲ್ಕನಿಯ ರೇಲಿಂಗ್ ಹಿಡಿದು 20ನೇ ಮಹಡಿಯ ಬಾಲ್ಕನಿಗೆ ಇಳಿಯಲು ಪ್ರಯತ್ನಿಸಿದ್ದಾರೆ.
ಮತ್ತಷ್ಟು ಓದಿ: “ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ
ಜಾರಿಬಿದ್ದು ಸಾವು: ಸಮತೋಲನ ತಪ್ಪಿ 21ನೇ ಮಹಡಿಯಿಂದ ಕೆಳಗೆ ಬಿದ್ದ ಹರ್ಷಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಸೈಟಿಯ ನಿವಾಸಿಗಳು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪತ್ನಿಯೊಂದಿಗಿನ ನಿರಂತರ ಜಗಳ ಹಾಗೂ ಕೌಟುಂಬಿಕ ಕಲಹದಿಂದ ಹರ್ಷಿತ್ ತೀವ್ರ ಮಾನಸಿಕ ಖಿನ್ನತೆ ಮತ್ತು ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪಾರ್ಟ್ಮೆಂಟ್ ಕಾರಿಡಾರ್ ಮತ್ತು ಲಿಫ್ಟ್ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹರ್ಷಿತ್ ಪತ್ನಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಬಹುಮಹಡಿ ಕಟ್ಟಡಗಳಲ್ಲಿನ ಬಾಲ್ಕನಿ ಸುರಕ್ಷತೆ: ಮಹಾನಗರಗಳ ಹೈ-ರೈಸ್ ಅಪಾರ್ಟ್ಮೆಂಟ್ಗಳಲ್ಲಿ ಬಾಲ್ಕನಿಗಳಿಂದ ಆಕಸ್ಮಿಕವಾಗಿ ಬೀಳುವ ಪ್ರಕರಣಗಳು ಹೆಚ್ಚುತ್ತಿದ್ದು, ಸುರಕ್ಷತಾ ಗ್ರಿಲ್ಗಳು ಮತ್ತು ನೆಟ್ಗಳ ಅಳವಡಿಕೆ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರತ್ಯೇಕವಾಗಿ ವಾಸಿಸುವ ದಂಪತಿಗಳ ನಡುವೆ ಪರಸ್ಪರ ಮಾತುಕತೆಗೆ ಸೂಕ್ತ ಆಪ್ತಸಮಾಲೋಚನೆ ಅಥವಾ ಮಧ್ಯಸ್ಥಿಕೆದಾರರ ಕೊರತೆಯಿರುವುದು ಇಂತಹ ಹಠಾತ್ ಹಾಗೂ ಅವಿವೇಕದ ದುಡುಕು ನಿರ್ಧಾರಗಳಿಗೆ ಕಾರಣವಾಗುತ್ತಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ