- TV9 Kannada Kannada News Photos Bengaluru Airport Hosts Grand Dasara Celebration: Showcasing Karnataka's Rich Culture
ವಿದೇಶಿ ಪ್ರಯಾಣಿಕರಿಗೆ ಕನ್ನಡ ನಾಡಹಬ್ಬದ ಮೆರಗು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರಾರಾಜಿಸುತ್ತಿವೆ ಮೈಸೂರು ಜಂಬೂಸವಾರಿ ಮತ್ತು ಪಟ್ಟದ ಗೊಂಬೆಗಳು
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೇಶ-ವಿದೇಶಿ ಪ್ರಯಾಣಿಕರಿಗೆ ಮೈಸೂರು ದಸರಾ ಹಾಗೂ ಕರ್ನಾಟಕದ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಲು 'ದಸರಾ ಸಂಭ್ರಮ' ಆಯೋಜಿಸಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಗೊಂಬೆಗಳು, ಜಾನಪದ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಕಳೆಗಟ್ಟಿವೆ. ಇದು ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ವಿಶಿಷ್ಟ ಪ್ರಯತ್ನ.
Updated on: Oct 13, 2026 | 9:17 PM

ವಿಶ್ವ ವಿಖ್ಯಾತ ಮೈಸೂರು ದಸರಾ ಹಾಗೂ ನಾಡಹಬ್ಬ ನವರಾತ್ರಿಯ ಸಂಭ್ರಮವನ್ನು ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA/KIAB) ಆಡಳಿತ ಮಂಡಳಿ ವಿನೂತನ ಮುನ್ನುಡಿ ಬರೆದಿದೆ. ಏರ್‌ಪೋರ್ಟ್‌ನಲ್ಲಿ ಅದ್ಧೂರಿ ‘ದಸರಾ ಸಂಭ್ರಮ’ವನ್ನು ಆಯೋಜಿಸಲಾಗಿದ್ದು, ವಿಮಾನ ನಿಲ್ದಾಣದ ಆವರಣದಲ್ಲಿ ಹಬ್ಬದ ಕಳೆ ಮನೆಮಾಡಿದೆ.

ದೇವನಹಳ್ಳಿ ಬಳಿಯಿರುವ ಕೆಐಎಬಿಯ ಈ ವಿಶೇಷ ಸಂಭ್ರಮಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ಚಾಲನೆ ನೀಡಿ, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ. ದೇಶ-ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಕರ್ನಾಟಕದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಸೌಂದರ್ಯವನ್ನು ಏರ್‌ಪೋರ್ಟ್‌ನಿಂದಲೇ ಉಣಬಡಿಸಲು ಆಡಳಿತ ಮಂಡಳಿ ಈ ನಿರ್ಧಾರವನ್ನು ಕೈಗೊಂಡಿದೆ.

ಏರ್‌ಪೋರ್ಟ್‌ನ ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ಮೈಸೂರು ಪೇಟ, ಬಣ್ಣ-ಬಣ್ಣದ ಲೈಟಿಂಗ್‌ನೊಂದಿಗೆ ಕಂಗೊಳಿಸುತ್ತಿರುವ ಪಟ್ಟದ ಗೊಂಬೆಗಳು ಹಾಗೂ ಜಂಬೂಸವಾರಿಯ ಗೊಂಬೆಗಳ ಕಲಾಕೃತಿಯನ್ನು ಪ್ರದರ್ಶಿಸಲಾಗಿದೆ.

ಯಾಣಿಕರ ಮನರಂಜನೆ ಹಾಗೂ ನಾಡಿನ ಸಂಸ್ಕೃತಿಯ ಪರಿಚಯಕ್ಕಾಗಿ ಟರ್ಮಿನಲ್‌ನಲ್ಲಿ ಪ್ರತ್ಯೇಕ ವೇದಿಕೆಯನ್ನು ನಿರ್ಮಿಸಲಾಗಿದ್ದು, ಪ್ರತಿದಿನ ಸಂಜೆ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಏರ್‌ಪೋರ್ಟ್ ದಸರಾ ಸಂಭ್ರಮದಲ್ಲಿ ನಾಡಿನ ಜನಪ್ರಿಯ ಜಾನಪದ ಕಲೆಯಾದ ಡೊಳ್ಳು ಕುಣಿತದ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾದಬ್ರಹ್ಮ ಹಂಸಲೇಖ ಅವರು, ಡೊಳ್ಳು ಕುಣಿತದ ರಿದಮ್‌ಗೆ ತಕ್ಕಂತೆ ಕಲಾವಿದರ ಜೊತೆ ಖುದ್ದಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಹಲವು ದೇಶ-ವಿದೇಶಿ ಪ್ರಯಾಣಿಕರೂ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕಿ ಈ ಕ್ಷಣಗಳನ್ನು ಆನಂದಿಸಿದರು.

ಏರ್‌ಪೋರ್ಟ್ ಆಡಳಿತ ಮಂಡಳಿಯ ಈ ಸಾಂಸ್ಕೃತಿಕ ಉಪಕ್ರಮಕ್ಕೆ ಸಂಪೂರ್ಣ ಫಿದಾ ಆದ ಹಂಸಲೇಖ ಅವರು, "ನಾಡಿನ ಇತಿಹಾಸ ಮತ್ತು ಹಬ್ಬದ ಪರಂಪರೆಯನ್ನು ಜಾಗತಿಕ ಮಟ್ಟದ ಪ್ರಯಾಣಿಕರಿಗೆ ತಲುಪಿಸುತ್ತಿರುವ ಕೆಐಎಬಿಯ ಕಾರ್ಯ ಅತ್ಯಂತ ಶ್ಲಾಘನೀಯ" ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.
Read More



