GROHE ಹ್ಯುರನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2020ರಲ್ಲಿ ಮಂಗಲ್ ಪ್ರಭಾತ್ ಲೋಧಾ ನಂಬರ್ 1
GROHE ಹ್ಯುರನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2020ರಲ್ಲಿ ಮಂಗಲ್ ಪ್ರಭಾತ್ ಲೋಧಾ ಅವರು ಸತತವಾಗಿ ನಾಲ್ಕನೇ ವರ್ಷ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಟಾಪ್ 10 ಸ್ಥಾನದಲ್ಲಿ ಇರುವವರು ಯಾರು ಎಂಬುದನ್ನು ತಿಳಿಯಿರಿ.
GROHE ಹ್ಯುರನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2020ರಲ್ಲಿ ಮಂಗಲ್ ಪ್ರಭಾತ್ ಲೋಧಾ (65) ಮತ್ತು ಲೋಧಾ ಕುಟುಂಬ ಸಮೂಹವು ಸತತ ನಾಲ್ಕನೇ ವರ್ಷ ಮೊದಲ ಸ್ಥಾನದಲ್ಲಿದ್ದಾರೆ. ಅಂದ ಹಾಗೆ ಇವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ? 44,270 ಕೋಟಿ ರೂಪಾಯಿ. ಇವರ ಸಂಪತ್ತು ಈ ವರ್ಷದಲ್ಲಿ ಶೇಕಡಾ 39ರಷ್ಟು ಏರಿಕೆ ಆಗಿದೆ. 1980ರಲ್ಲಿ ಆರಂಭವಾದ, ಮುಂಬೈ ಮೂಲದ ಲೋಧಾ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್. 2014- 20ರ ಮಧ್ಯೆ ಇದು ಮಾರಾಟ ಮಾಡಿರುವ ಮೌಲ್ಯದ ಮೂಲಕ ತಿಳಿಸಿರುವುದು ಹಾಗೂ ವ್ಯಾಪ್ತಿ ಪ್ರದೇಶವನ್ನು ಒಪ್ಪಿಸಿಕೊಟ್ಟಿರುವ ದೃಷ್ಟಿಯಲ್ಲಿ ದೇಶಕ್ಕೇ ಎರಡನೇ ದೊಡ್ಡ ಸಂಸ್ಥೆ ಇದು. ಕೊರೊನಾ ಬಿಕ್ಕಟ್ಟು ತಲೆದೋರಿದ 2020ರಲ್ಲಿ ಭಾರತದ ಎಲ್ಲ ರಿಯಲ್ ಎಸ್ಟೇಟ್ ಡೆವಲಪರ್ಗಳ ಪೈಕಿ ಅತಿ ಹೆಚ್ಚಿನ ಆದಾಯ ಗಳಿಸಿದೆ ಲೋಧಾ ಸಮೂಹ.
36,430 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಡಿಎಲ್ಎಫ್ನ 61 ವರ್ಷದ ರಾಜೀವ್ ಸಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಸಂಪತ್ತು ಮೌಲ್ಯ ಶೇಕಡಾ 45ರಷ್ಟು ಜಾಸ್ತಿ ಆಗಿದೆ. ಅದಕ್ಕೆ ಬೆಂಬಲವಾಗಿರುವುದು ಶೇಕಡಾ 50ರಷ್ಟು ಮೇಲೇರಿರುವ ಡಿಎಲ್ಎಫ್ ಕಂಪೆನಿಯ ಷೇರು ಬೆಲೆ ಎನ್ನಲಾಗಿದೆ. 1946ರಲ್ಲಿ ಶುರುವಾದ ದೆಹಲಿ ಲ್ಯಾಂಡ್ ಅಂಡ್ ಫೈನಾನ್ಸ್ (ಡಿಎಲ್ಎಫ್ ಲಿಮಿಟೆಡ್) ಭಾರತದಲ್ಲಿ ಅತಿ ದೊಡ್ಡ ಲಿಸ್ಟೆಡ್ ರಿಯಲ್ ಎಸ್ಟೇಟ್ ಕಂಪೆನಿ. ಭಾರತದ ಹದಿನೈದು ರಾಜ್ಯಗಳು ಮತ್ತು 24 ನಗರಗಳಲ್ಲಿ ಡಿಎಲ್ಎಫ್ ಆಸ್ತಿಯಿದೆ. ಡಿಎಲ್ಎಫ್ ಸೈಬರ್ ಸಿಟಿ ಡೆವಲಪರ್ಸ್ ಲಿಮಿಟೆಡ್ ಎಂಬುದು ಡಿಎಲ್ಎಫ್ ಮತ್ತು ಸಿಂಗಾಪೂರ್ ಸವರನ್ ವೆಲ್ತ್ ಫಂಡ್ ಜಿಐಸಿಯ ಜಂಟಿ ಯೋಜನೆ. ಇದರ 3.40 ಕೋಟಿ ಚದರ ಅಡಿ ಕಚೇರಿ ಮತ್ತು ರೀಟೇಲ್ ಆಸ್ತಿ ಇದ್ದು, ವಾರ್ಷಿಕವಾಗಿ 3500 ಕೋಟಿ ರೂಪಾಯಿ ಬಾಡಿಗೆ ಆದಾಯ ತರುತ್ತದೆ.
GROHE ಹ್ಯುರನ್ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2020ರ ನಾಲ್ಕನೇ ಅವತರಣಿಕೆಯು ಭಾರತ ಮೂಲದ ಯಶಸ್ವಿ ರಿಯಲ್ ಎಸ್ಟೇಟ್ ಶ್ರೀಮಂತ ಉದ್ಯಮಿಗಳನ್ನು ಒಳಗೊಂಡಿದೆ. ಅದಕ್ಕಾಗಿ ಅವರ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಅದರ ಪ್ರಮಾಣಕ್ಕೆ ತಕ್ಕಂತೆ ನಿವ್ವಳ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸಂಪತ್ತಿನ ಲೆಕ್ಕಾಚಾರ ಡಿಸೆಂಬರ್ 31, 2020ಕ್ಕೆ ಹಾಕಲಾಗಿದೆ. GROHE ಹ್ಯುರನ್ ಇಂಡಿಯಾ ರಿಯಲ್ ಎಸ್ಟೇಟ್ ಶ್ರೀಮಂತರ ಪಟ್ಟಿ 2020ರಲ್ಲಿ 15 ನಗರಗಳ 71 ಕಂಪೆನಿಗಳ 100 ವ್ಯಕ್ತಿಗಳನ್ನು ಒಳಗೊಂಡಿದೆ.
ಪಟ್ಟಿಯ ಪ್ರಕಾರ, ಮುಂಬೈನಲ್ಲಿ ಅತಿ ಹೆಚ್ಚು ಲಕ್ಷಾಧೀಶ ಕುಟುಂಬಗಳಿವೆ ಮತ್ತು ದೇಶದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪೆನಿಗಳು ಸಹ ಅಲ್ಲೇ ಹೆಚ್ಚಿನ ಸಂಖ್ಯೆಯಲ್ಲಿವೆ. ಶ್ರೀಮಂತರ ಪಟ್ಟಿಯಲ್ಲಿ ಇರುವವರ ಪೈಕಿ ಮುಂಬೈನಲ್ಲಿ ಇರುವವರು 31 ಮಂದಿ, ದೆಹಲಿ 22 ಹಾಗೂ ಬೆಂಗಳೂರಿನ 20 ಮಂದಿ ಇದ್ದಾರೆ. ಈ ಪಟ್ಟಿಯಲ್ಲಿ ಇರುವವರ ಆಸ್ತಿ 2019ರಲ್ಲಿ ಇದ್ದುದಕ್ಕಿಂತ ಶೇಕಡಾ 26ರಷ್ಟು ಹೆಚ್ಚಾಗಿ 3,48,660 ಕೋಟಿ ರೂಪಾಯಿಯನ್ನು ತಲುಪಿದೆ.
GROHE ಹ್ಯುರನ್ ಇಂಡಿಯಾ ರಿಯಲ್ ಎಸ್ಟೇಟ್ ಟಾಪ್ ಟೆನ್ ಶ್ರೀಮಂತರ ಪಟ್ಟಿ 2020 1. ಮಂಗಲ್ ಪ್ರಭಾತ್ ಲೋಧಾ ಮತ್ತು ಕುಟುಂಬ- 44,270 ಕೋಟಿ ರೂ. 2. ರಾಜೀವ್ ಸಿಂಗ್- 36,430 ಕೋಟಿ ರೂ. 3. ಚಂದ್ರು ರಹೇಜಾ ಮತ್ತು ಕುಟುಂಬ- 26,260 ಕೋಟಿ ರೂ. 4. ಜಿತೇಂದ್ರ ವಿರ್ವಾನಿ- 23,220 ಕೋಟಿ ರೂ. 5. ನಿರಂಜನ್ ಹೀರನಂದನಿ- 20,600 ಕೋಟಿ ರೂ. 6. ವಿಕಾಸ್ ಒಬೇರಾಯ್- 15,770 ಕೋಟಿ ರೂ. 7. ರಾಜ ಬಾಗ್ಮನೆ- 15,590 ಕೋಟಿ ರೂ. 8. ಸುಭಾಷ್ ರನ್ವಾಲಾ ಮತ್ತು ಕುಟುಂಬ- 11,450 ಕೋಟಿ ರೂ. 9. ಅಜಯ್ ಪಿರಾಮಲ್ ಮತ್ತು ಕುಟುಂಬ- 6,560 ಕೋಟಿ ರೂ. 10. ಅತುಲ್ ರುಯಾ ಮತ್ತು ಕುಟುಂಬ- 6,340 ಕೋಟಿ ರೂ.
ಇದನ್ನೂ ಓದಿ: Hurun Global Rich List: Hurunನಿಂದ ಭಾರತದ ಅತ್ಯಂತ ಸಿರಿವಂತರ ಟಾಪ್ 10 ಪಟ್ಟಿ ಬಿಡುಗಡೆ: ಮುಕೇಶ್ ಅಂಬಾನಿ ನಂಬರ್ ಒನ್