ಮೇ 28ರಂದು ಜಿಎಸ್‌ಟಿ ಕೌನ್ಸಿಲ್ ಸಭೆ; ಕೊವಿಡ್ ಚಿಕಿತ್ಸೆಗೆ ಬಳಸುವ ಪರಿಕರಗಳ ಮೇಲಿನ ಜಿಎಸ್‌ಟಿ ಬಗ್ಗೆ ಚರ್ಚೆ ಸಾಧ್ಯತೆ
ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರ ಮತ್ತು ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರು ವರ್ಚುವಲ್ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಸಬೇಕೆಂದು ಒತ್ತಾಯಿಸಿದ್ದರು.
ದೆಹಲಿ: ಜಿಎಸ್‌ಟಿ ಕೌನ್ಸಿಲ್ ಮೇ 28ರಂದು ಸಭೆ ನಡೆಸಲಿದ್ದು, ಕೊವಿಡ್ ಸಂಬಂಧಿ ಔಷಧ, ಆಕ್ಸಿಜನ್ ಉಪಕರಣಗಳು ಮತ್ತು ಲಸಿಕೆ ಮೇಲಿನ ತೆರಿಗೆ ಮೊತ್ತದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಏಪ್ರಿಲ್ 1ರಂದು ಆರಂಭವಾದ ಆರ್ಥಿಕ ವರ್ಷದ ತೆರಿಗೆಯ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಸಿಕೊಡಲಿದ್ದಾರೆ.
ವಿವಿಧ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು, ಕೇಂದ್ರ ಸರ್ಕಾರದ ಹಾಗೂ ರಾಜ್ಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್ ಕಚೇರಿ ತನ್ನ ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಈ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರ ಮತ್ತು ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಅವರು ವರ್ಚುವಲ್ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಸಬೇಕೆಂದು ಒತ್ತಾಯಿಸಿದ್ದರು. ಪರಿಷತ್ತಿನ ಸಭೆ ಆರ್ಥಿಕ ವರ್ಷದ ಪ್ರತಿ ತ್ರೈಮಾಸಿಕಕ್ಕೊಮ್ಮೆಯಾದರೂ ನಡೆಯಬೇಕಿದೆ. ಆದರೆ, ಕಳೆದ ವರ್ಷ ಅಕ್ಟೋಬರ್ 5 ರಿಂದ ಈ ಸಮಿತಿ ಸಭೆ ಸೇರಿಲ್ಲ.
ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಸೋನಿಯಾ ಗಾಂಧಿ, ಜೀವರಕ್ಷಕ ಔಷಧಿಗಳು, ವೈದ್ಯಕೀಯ ಪರಿಕರಗಳು, ಕೊರೊನಾ ಚಿಕಿತ್ಸೆಗೆ ಬೇಕಾದ ವಸ್ತುಗಳು ಎಲ್ಲವೂ ಜಿಎಸ್ಟಿಯಿಂದ ಹೊರತಾಗಿ ಇರಬೇಕು ಎಂದು ಕಳೆದ ತಿಂಗಳು ಕೇಳಿದ್ದರು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿತ್ತು.
ಆದರೆ, ಕೊವಿಡ್ 19ರ ಹೋರಾಟಕ್ಕೆ ಬಳಸುತ್ತಿರುವ ವಸ್ತುಗಳ ಬೆಲೆ ಕಡಿಮೆ ಇರಲು ಲಸಿಕೆಗೆ ಶೇಕಡಾ 5ರಷ್ಟು ಮತ್ತು ಔಷಧ ಮತ್ತು ಆಕ್ಸಿಜನ್ ಕಾನ್ಸ್ಟ್ರೇಟರ್ಗಳ ಮೇಲೆ ಶೇಕಡಾ 12ರಷ್ಟು ತೆರಿಗೆ ಅನಿವಾರ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊವಿಡ್ ಸಂಬಂಧಿತ ಔಷಧ, ಆಮ್ಲಜನಕದ ಸಿಲಿಂಡರ್ಗಳ ಮೇಲಿನ ಜಿಎಸ್‌ಟಿ ಮತ್ತು ಕಸ್ಟಮ್ ಸುಂಕ ರದ್ದುಗೊಳಿಸುವಂತೆ ಮಾಡಿರುವ ಮನವಿಗೆ ಕೇಂದ್ರ ಹಣಕಾಸು ಸಚಿವೆ 16 ಸರಣಿ ಟ್ವೀಟ್ಗಳ ಮೂಲಕ ಪ್ರತ್ಯುತ್ತರ ನೀಡಿದ್ದರು.
ಕೊವಿಡ್ ವಿರುದ್ಧದ ಹೋರಾಟಕ್ಕೆ ಬಳಸುತ್ತಿರುವ ಈ ಉತ್ಪನ್ನಗಳಿಗೆ ಜಿಎಸ್ಟಿಯಿಂದ (ಸರಕು ಮತ್ತು ಸೇವಾ ತೆರಿಗೆ) ಸಂಪೂರ್ಣ ವಿನಾಯಿತಿ ನೀಡಿದರೆ, ಈ ಉತ್ಪನ್ನಗಳ ದೇಶೀಯ ಉತ್ಪಾದಕರು ತಮ್ಮ ಒಳಹರಿವಿನ ಸೇವೆಗಳಿಗೆ ಪಾವತಿಸುವ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಹಾಗಾದಲ್ಲಿ ಅಂತಿಮವಾಗಿ ವಸ್ತುವಿನ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿ: SWAMIH ನಿಧಿಯ ದೇಶದ ಮೊದಲ ವಸತಿ ಯೋಜನೆ ಮನೆ ಖರೀದಿದಾರರಿಗೆ ಹಸ್ತಾಂತರಿಸಿದ ನಿರ್ಮಲಾ ಸೀತಾರಾಮನ್
ಕೋವಿಡ್- 19 ಕ್ಲೇಮ್ಗೆ ಆದ್ಯತೆ ನೀಡುವಂತೆ ನಿರ್ದೇಶಿಸಲು ಐಆರ್ಡಿಎಐಗೆ ಸೂಚಿಸಿದ ನಿರ್ಮಲಾ ಸೀತಾರಾಮನ್
Published On - 6:48 pm, Sat, 15 May 21