19 ವರ್ಷದ ಯುವತಿ ಮೇಲೆ ಅತ್ಯಾಚಾರ; ಗುಜರಾತ್​ನ ದಿಗಂಬರ ಜೈನಮುನಿ ಶಾಂತಿಸಾಗರ್ ಮಹಾರಾಜ್‌ಗೆ 10 ವರ್ಷ ಜೈಲು

19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಗುಜರಾತಿನ ದಿಗಂಬರ ಜೈನಮುನಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಾಸಿಕ್ಯೂಷನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಿತ್ತು. ಆ ಯುವತಿ ಕುಟುಂಬದವರು ಬಹಳ ಗೌರವಿಸುವ ವ್ಯಕ್ತಿಯಿಂದಲೇ ಅತ್ಯಾಚಾರಕ್ಕೊಳಗಾದ ನಂತರ ಆಕೆ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಆಘಾತವನ್ನು ಎತ್ತಿ ತೋರಿಸಿತ್ತು. ಆದರೆ, ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.

19 ವರ್ಷದ ಯುವತಿ ಮೇಲೆ ಅತ್ಯಾಚಾರ; ಗುಜರಾತ್​ನ ದಿಗಂಬರ ಜೈನಮುನಿ ಶಾಂತಿಸಾಗರ್ ಮಹಾರಾಜ್‌ಗೆ 10 ವರ್ಷ ಜೈಲು
Shantisagar Maharaj

Updated on: Apr 05, 2025 | 10:07 PM

ಅಹಮದಾಬಾದ್, ಏಪ್ರಿಲ್ 5: 2017ರಲ್ಲಿ 19 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಜೈನ ದಿಗಂಬರ ಪಂಥದ ಸನ್ಯಾಸಿ ಶಾಂತಿಸಾಗರ್‌ಜಿ ಮಹಾರಾಜ್‌ಗೆ ಸೂರತ್‌ನ ಸೆಷನ್ಸ್ ನ್ಯಾಯಾಲಯವು ಇಂದು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಸ್ವಾಮೀಜಿಗೆ ನ್ಯಾಯಾಲಯವು 25,000 ರೂ. ದಂಡವನ್ನೂ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಕೆ. ಶಾ ಅವರು ಅತ್ಯಾಚಾರ ಎಸಗಿದ ಆರೋಪದ ಮೇಲೆ 56 ವರ್ಷದ ದಿಗಂಬರ ಜೈನಮುನಿ ತಪ್ಪಿತಸ್ಥರೆಂದು ತೀರ್ಪು ನೀಡಿದ ನಂತರ ಶಿಕ್ಷೆಯನ್ನು ಪ್ರಕಟಿಸಿದರು. ನ್ಯಾಯಾಲಯವು ತನ್ನ ತೀರ್ಪನ್ನು ತಲುಪುವಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಇತರ ಪ್ರಾಸಿಕ್ಯೂಷನ್ ಸಾಕ್ಷಿಗಳ ಸಾಕ್ಷ್ಯಗಳನ್ನು ವೈದ್ಯಕೀಯ ವರದಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಪರಿಗಣಿಸಿತು.

ಈ ಘಟನೆ ಅಕ್ಟೋಬರ್ 2017ರಲ್ಲಿ ಸೂರತ್‌ನ ಜೈನ ಧರ್ಮಶಾಲೆಯಲ್ಲಿ ನಡೆದಿತ್ತು. ತನ್ನ ಕುಟುಂಬದೊಂದಿಗೆ ವಡೋದರಾದಲ್ಲಿ ವಾಸಿಸುತ್ತಿದ್ದ ಯುವತಿ ತನ್ನ ತಂದೆ ಮತ್ತು ಸಹೋದರನೊಂದಿಗೆ ಸೂರತ್‌ಗೆ ಪ್ರಯಾಣ ಬೆಳೆಸಿ, ಈ ಜೈನಮುನಿಯನ್ನು ಗುರು ಎಂದು ಪರಿಗಣಿಸಿದ್ದಳು. ಆಕೆಯ ಕುಟುಂಬದವರು ಅವರ ಮೇಲೆ ಬಹಳ ಗೌರವ, ನಂಬಿಕೆ ಹೊಂದಿದ್ದರು. ಆಗ ಶಾಂತಿಸಾಗರ್‌ಜಿ ಮಹಾರಾಜ್ ಅವರು ಆ ಯುವತಿಯ ಮೊಬೈಲ್ ಸಂಖ್ಯೆಯನ್ನು ಆಕೆಯ ತಂದೆಯಿಂದ ಪಡೆದುಕೊಂಡಿದ್ದರು. ಈ ಘಟನೆಗೆ ಮೊದಲು ಆಕೆಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಚಿಕಿತ್ಸೆ ವೇಳೆ ಗೊತ್ತಾಯ್ತು ಗರ್ಭಿಣಿಯಾದ ಸತ್ಯ!

ಇದನ್ನೂ ಓದಿ
ಬ್ಯಾಡ್ಮಿಂಟನ್ ಕೋಚ್​ನಿಂದ ಬಾಲಕಿ ಮೇಲೆ ಅತ್ಯಾಚಾರ: ವಿಡಿಯೋಗಳು ಪತ್ತೆ!
ಕೌಟುಂಬಿಕ ಕಲಹದ ವೇಳೆ ಮನೆಯ ಛಾವಣಿ ಕುಸಿದು 10 ಜನರ ಸ್ಥಿತಿ ಗಂಭೀರ
ಮದುವೆ ಬೇಡವೆಂದು ವರನನ್ನು ಕೊಲ್ಲಲು ಸುಪಾರಿಕೊಟ್ಟ ವಧು
ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ

ಅತ್ಯಾಚಾರ ನಡೆದ ದಿನದಂದು, ಆ ಜೈನಮುನಿ ಯುವತಿಯ ತಂದೆ ಮತ್ತು ಸಹೋದರನನ್ನು ವಿಧಿವಿಧಾನಗಳನ್ನು ನಡೆಸುವ ನೆಪದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ಇರಿಸಿದ್ದರು. ಅವರಿಗೆ ಹೊರಗೆ ಬಾರದಂತೆ ಸೂಚಿಸಿದ್ದರು. ನಂತರ ಪ್ರತ್ಯೇಕ ಕೋಣೆಯಲ್ಲಿ ಆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದರು. ಆಕೆ ವಿರೋಧಿಸಿದರೆ ಆಕೆಯ ಕುಟುಂಬಕ್ಕೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು.

ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ನೆಪದಲ್ಲಿ ಶಾಂತಿಸಾಗರ್‌ಜಿ ಮಹಾರಾಜ್ ಅವರು ತಮ್ಮ ನಗ್ನ ಛಾಯಾಚಿತ್ರಗಳನ್ನು ಕೇಳಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಾಮಾಜಿಕ ಕಳಂಕದ ಬಗ್ಗೆ ಭಯದಿಂದಾಗಿ ಆಕೆಯ ಕುಟುಂಬ ಆರಂಭದಲ್ಲಿ ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲು ಹಿಂಜರಿಯಿತು. ಆದರೆ ಅತ್ಯಾಚಾರ ನಡೆದ 13 ದಿನಗಳ ನಂತರ, ಇತರ ಯುವತಿಯರಿಗೆ ಇದೇ ರೀತಿಯ ಘಟನೆಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಅವರು ಸೂರತ್‌ನ ಅಥವಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಇದನ್ನೂ ಓದಿ: ಪೊಲೀಸ್ ಠಾಣೆಗೆ ಬೆಂಕಿ: 23 ಮಂದಿ ಅಪರಾಧಿಗಳಿಗೆ 5 ವರ್ಷ ಜೈಲು, 36 ಲಕ್ಷ ರೂ. ದಂಡ

ಶಾಂತಿಸಾಗರ್‌ಜಿ ಮಹಾರಾಜ್ ಅವರನ್ನು ಅಕ್ಟೋಬರ್ 2017ರಲ್ಲಿ ಬಂಧಿಸಲಾಯಿತು. ಅಂದಿನಿಂದ ಸೂರತ್‌ನ ಲಾಜ್‌ಪೋರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಾಸಿಕ್ಯೂಷನ್ ತಮ್ಮ ಪ್ರಕರಣವನ್ನು ಬೆಂಬಲಿಸಲು 33 ಸಾಕ್ಷಿಗಳು ಮತ್ತು ವೈದ್ಯಕೀಯ ಮತ್ತು ವಿಧಿವಿಜ್ಞಾನ ವರದಿಗಳು ಸೇರಿದಂತೆ ವಿವಿಧ ಪುರಾವೆಗಳನ್ನು ಹಾಜರುಪಡಿಸಿತು. ಶಾಂತಿಸಾಗರ್‌ಜಿ ಮಹಾರಾಜ್ ಈಗಾಗಲೇ ಶಿಕ್ಷೆ ಅನುಭವಿಸಿರುವುದರಿಂದ, ಸುಮಾರು ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ