ಪೊಲೀಸ್ ಠಾಣೆಗೆ ಬೆಂಕಿ: 23 ಮಂದಿ ಅಪರಾಧಿಗಳಿಗೆ 5 ವರ್ಷ ಜೈಲು, 36 ಲಕ್ಷ ರೂ. ದಂಡ
ಗದಗದ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 23 ಜನರನ್ನು ಅಪರಾಧಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಅವರಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 36.87 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಪೊಲೀಸ್ ಠಾಣೆ ಹಾನಿಗೆ ಪರಿಹಾರವಾಗಿ 12.72 ಲಕ್ಷ ರೂಪಾಯಿಗಳನ್ನು ಪೊಲೀಸ್ ಇಲಾಖೆಗೆ ನೀಡಲು ಆದೇಶಿಸಲಾಗಿದೆ. ಈ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು.

ಗದಗ, ಮಾರ್ಚ್ 25: ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ (Laxmeshwar Police Station) ಬೆಂಕಿ ಹಚ್ಚಿದ್ದ 23 ಜನ ಅಪರಾಧಿಗಳಿಗೆ ಗದಗ (Gadag) ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ ಹಾಗೂ 36.87 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ದಂಡದ ಮೊತ್ತದಲ್ಲಿ ಪೊಲೀಸ್ ಠಾಣೆ ಹಾನಿ ಪರಿಹಾರವಾಗಿ 12.72 ಲಕ್ಷ ರೂಪಾಯಿ ನೀಡಲು ನ್ಯಾಯಾಲಯ ಸೂಚನೆ ನೀಡಿದೆ. ದೊಂಬಿ ಪ್ರಕರಣವೊಂದರಲ್ಲಿ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲು ನ್ಯಾಯಾಲಯ ಆದೇಶಿಸಿದೆ.
ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಪ್ರಕರಣ
8 ವರ್ಷಗಳ ಹಿಂದೆ ಅಂದರೆ 2017 ಫೆಬ್ರವರಿ 5 ರಂದು ಅಕ್ರಮ ಮರಳು ಸಾಗಿಸುವ ವಾಹನವನ್ನು ಪೊಲೀಸರು ತಡೆದಿದ್ದರು. ಈ ವಾಹನ ಚಲಾಯಿಸುತ್ತಿದ್ದ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿ ಶಿವಪ್ಪ ಡೋಣಿ ಎಂಬುವರಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ನಂತರ, ಶಿವಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಶಿವಪ್ಪ ಮೃತಪಟ್ಟಿದ್ದರು.
ಇದರಿಂದ ಆಕ್ರೋಶಗೊಂಡಿದ್ದ ಶಿವಪ್ಪ ಅವರ ಪೋಷಕರು ಮತ್ತು ಗ್ರಾಮಸ್ಥರು ಮೃತದೇಹವನ್ನು ಪೊಲೀಸ್ ಠಾಣೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ನೋಡ ನೋಡುತ್ತಿದ್ದಂತೆ ಶಾಂತಯುತವಾಗಿ ನಡೆದಿದ್ದ ಪ್ರತಿಭಟನೆ, ವಿಕೋಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಪೊಲೀಸ್ ಠಾಣೆಯೊಳಗೆ ನುಗ್ಗಿ, ಕಚೇರಿಯಲ್ಲಿದ್ದ ಕಡತಗಳು, ದಾಖಲೆಗಳು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು.
ಪೊಲೀಸ್ ಜೀಪ್ ಹಾಗೂ ಹತ್ತಾರು ಬೈಕ್ಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮೂರು ಸಿಬ್ಬಂದಿಗಳಿದ್ದರು. ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ಸಹ ಮಾಡಿದ್ದರು. ಪೊಲೀಸ್ ಸಿಬ್ಬಂದಿ ಠಾಣೆಯ ಹಿಂಬಾಗಿನಿಲಿಂದ ಓಡಿ ಹೋಗಿ ಜೀವವನ್ನು ಉಳಿಸಿಕೊಂಡಿದ್ದರು.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 8 ವರ್ಷದ ನಂತರ 122 ಜನರ ಪೈಕಿ 23 ಜನರಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 36 ಲಕ್ಷ 87 ಸಾವಿರ ದಂಡವನ್ನು ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇಷ್ಟೊಂದು ಪ್ರಮಾಣದಲ್ಲಿ ದಂಡವನ್ನು ವಿಧಿಸಿದ್ದು, ರಾಜ್ಯದಲ್ಲಿ ಇದೇ ಮೊದಲಾಗಿದೆ.
ಇದನ್ನೂ ಓದಿ: ಯುವಕನ ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!
ಇನ್ನು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಬೆಂಕಿ ಹಚ್ಚಿದ ವೇಳೆಯಲ್ಲಿ ವಾಹನ ಹಾಗೂ ಪೊಲೀಸ್ ಠಾಣೆಗೆ ಸಾಕಷ್ಟು ಹಾನಿಯಾಗಿತ್ತು. ಹೀಗಾಗಿ, ಪರಿಹಾರವಾಗಿ 12 ಲಕ್ಷ 72 ರೂಪಾಯಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ನೀಡಲು ನ್ಯಾಯಲಯ ಸೂಚನೆ ನೀಡಿದೆ. ಹಾಗೇ, 23 ಆರೋಪಿಗಳ ಪೈಕಿ, ಎ1 ಹಾಗೂ ಎ 6ಗೆ 5.85 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.