ಮಂಡ್ಯದಲ್ಲೊಂದು ಮನಕಲಕುವ ಘಟನೆ: ಯುವಕನ ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!
ಅವರಿಬ್ಬರೂ ಅಕ್ಕಪಕ್ಕದ ಗ್ರಾಮದವರು. ಇಬ್ಬರ ನಡುವೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಆತನ ಬಣ್ಣ ಬಣ್ಣದ ಮಾತನ್ನೇ ನಿಜವಾದ ಪ್ರೀತಿ ಅಂದುಕೊಂಡಿದ್ದ ಆಕೆ, ತನ್ನನ್ನ ತಾನು ಅರ್ಪಿಸಿಕೊಂಡಿದ್ದಳು. ಆಕೆಯ ಮುಗ್ದತೆಯನ್ನ ಬಳಸಿಕೊಂಡಿದ್ದ ಪ್ರೇಮಿ, ಆಕೆಯನ್ನ ಬಳಸಿಕೊಂಡು ಮೋಸ ಮಾಡಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿನ ಮನನೊಂದಿದ್ದ ತಾಯಿ, ಮಗಳ ಸಾವಿಗೆ ನ್ಯಾಯ ಸಿಗಲಿಲ್ಲವೆಂದು ನೇಣಿಗೆ ಶರಣಾಗಿದ್ದಾಳೆ. ಸಕ್ಕರಿನಗರಿ ಮಂಡ್ಯದಲ್ಲಿ ನಡೆದ ಮನಕಲಕುವ ಘಟನೆ ವಿವರ ಇಲ್ಲಿದೆ.

ಮಂಡ್ಯ, (ಮಾರ್ಚ್ 14): ಲವ್, ಸೆಕ್ಸ್ ದೋಖಾಕ್ಕೆ ತಾಯಿ ಮಗಳು (mother and daughter) ಇಬ್ಬರು ಬಲಿಯಾಗಿರುವ ದಾರುಣ ಘಟನೆ ಸಕ್ಕರಿನಗರಿ ಮಂಡ್ಯದಲ್ಲಿ (Mandya) ನಡೆದಿದೆ. ಹೌದು..ಯುವಕನ ಪ್ರೀತಿ ಹುಚ್ಚಾಟಕ್ಕೆ ತಾಯಿ ಲಕ್ಷ್ಮಿ ಹಾಗೂ ಮಗಳು ವಿಜಯಲಕ್ಷ್ಮೀ ಬಲಿಯಾಗಿರುವ ಮನಕಲಕುವ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಪ್ರಿಯತಮ ಹರಿಕೃಷ್ಣ ಮೋಸ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಮನನೊಂದ ಯುವತಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದರಿಂದ ಮನನೊಂದಿದ್ದ ಯುವತಿ ತಾಯಿ ಲಕ್ಷ್ಮೀ ಸಹ ಮಗಳ ಸಾವಿಗೆ ನ್ಯಾಯ ಸಿಗಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನ ಪ್ರೀತಿಯ ಹುಚ್ಚಾಟಕ್ಕೆ 21 ದಿನಗಳಲ್ಲಿ ತಾಯಿ ಮಗಳು ದುರಂತ ಅಂತ್ಯಕಂಡಿದ್ದಾರೆ.
ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ವಿಜಯಲಕ್ಷ್ಮೀ ಇತ್ತೀಚೆಗಷ್ಟೇ ಡಿಗ್ರಿ ಮುಗಿಸಿ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಓದುವಾಗಲೇ ತನ್ನೂರಿನ ಮೊಮ್ಮಗ, ಪಕ್ಕದ ಗ್ರಾಮ ಮಾರಸಿಂಗನಹಳ್ಳಿ ಗ್ರಾಮದ ಹರಿಕೃಷ್ಣ ಎಂಬಾತನ ಪ್ರೀತಿ ಬಲೆಗೆ ಬಿದ್ದಿದ್ದಳು. ಪರಸ್ಪರ ಇಬ್ಬರು ಒಂದೂವರೆ ವರ್ಷದಿಂದ ಪ್ರೀತಿಸಿದ್ದರು. ಹರಿಕೃಷ್ಣ ಪ್ರೀತಿಯ ಹರಿ ಕಥೆಗೆ ಮರುಳಾಗಿ ವಿಜಯಲಕ್ಷ್ಮೀ ತನ್ನನ್ನ ನಂಬಿ ಮನಸ್ಸಿಗೆ ಹಚ್ಚಿಕೊಂಡಿದ್ದಳು.
ಇದನ್ನೂ ಓದಿ: ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್ನ ಕ್ರೌರ್ಯ, ಸಿಡಿದೆದ್ದ ಹಿಂದೂ ಸಂಘಟನೆಗಳು
ಆದ್ರೆ, ಈ ಮಧ್ಯೆ ಹರಿಕೃಷ್ಣಬೇರೆ ಹುಡುಗಿಯರ ಜೊತೆ ಸಂಪರ್ಕದಲ್ಲಿ ಇರುವ ವಿಚಾರ ಗೊತ್ತಗಿತ್ತು. ಈ ಬಗ್ಗೆ ವಿಜಯಲಕ್ಷ್ಮೀ ಪ್ರಶ್ನಿಸಿ ಮದುವೆಗೆ ಪಟ್ಟು ಹಿಡಿದಿದ್ದಳು. ಆದರೆ ದುರುಳ ಹರಿಕೃಷ್ಣ, ಮದುವೆಯನ್ನ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಇದರಿಂದ ಮನನೊಂದಿದ್ದ ವಿಜಯಲಕ್ಷ್ಮೀ ಫೆಬ್ರವರಿ 21 ರಂದು ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ರೈಲ್ವೆ ಪೊಲೀಸರು ಯುಡಿಆರ್ ಮಾಡಿಕೊಂಡಿದ್ದರು. ಕುಟುಂಬಸ್ಥರಿಗೆ ಪ್ರಾರಂಭದಲ್ಲಿ ಅಸಲಿ ಸತ್ಯ ಗೊತ್ತಾಗಿರಲಿಲ್ಲ. ಆದರೆ ಆನಂತರ ಯುವತಿಯ ಮೊಬೈಲ್ ಹಾಗೂ ಸ್ನೇಹಿತರ ಹೇಳಿಕೆಯಿಂದ ಅಸಲಿ ಸತ್ಯ ಗೊತ್ತಾಗಿದೆ.
ಅಂದಹಾಗೆ ವಿಜಯಲಕ್ಷ್ಮೀ ಸಾವಿನಿಂದ ಕೆರಳಿದ ಕುಟುಂಬಸ್ಥರು ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ನ್ಯಾಯ ಕೇಳಲು ಹರಿಕೃಷ್ಣನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದರು. ಹೀಗಾಗಿ ವಿಜಯಲಕ್ಷ್ಮೀ ಕುಟುಂಬಸ್ಥರು ಸೇರಿ ಗ್ರಾಮಸ್ಥರ ವಿರುದ್ಧವೇ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಮೃತ ವಿಜಯಲಕ್ಷ್ಮೀ ತಾಯಿ ಲಕ್ಷ್ಮಿ ಸಾಕಷ್ಟು ಮನನೊಂದಿದ್ದರು. ಮಗಳ ಸಾವಿಗೆ ನ್ಯಾಯ ಸಿಗಲಿಲ್ಲ. ತಮ್ಮವರ ವಿರುದ್ದವೇ ದೂರು ದಾಖಲಾಯ್ತು ಎಂದು ವಿಜಯಲಕ್ಷ್ಮೀ ತಾಯಿ ಲಕ್ಷ್ಮಿ ಕೂಡ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ.
. ಆನಂತರ ಪೊಲೀಸರ ವಿರುದ್ದವೇ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಮೃತದೇಹ ಎತ್ತಲು ಬಿಟ್ಟಿರಲಿಲ್ಲ. ಆದರೆ ಇದರಿಂದ ಎಚ್ಚೆತ್ತ ಪೊಲೀಸರು, ಕೊನೆಗೂ ಹರಿಕೃಷ್ಣ ಹಾಗೂ ಕುಟುಂಬಸ್ಥರ ವಿರುದ್ಧ ದೂರು ದಾಖಲು ಮಾಡಿಕೊಂಡು ಐವರನ್ನ ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಿಯಕರ ಹರಿಕೃಷ್ಣ ಪರಾರಿಯಾಗಿದ್ದಾನೆ.
ಒಟ್ಟಾರೆ ಯುವಕನ ಕಾಮತೃಷೆಗಾಗಿ ಒಂದೇ ಕುಟುಂಬದ ಇಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Fri, 14 March 25