ಹೆಂಡತಿಯ ಚಿತಾಭಸ್ಮ ಬಿಡಲು ಲಂಡನ್​ನಿಂದ ಬಂದಿದ್ದ ಗಂಡನೇ ವಿಮಾನ ಅಪಘಾತದಲ್ಲಿ ಬೂದಿಯಾದ ಕತೆಯಿದು!

Gujarat Plane Crash: ಗುಜರಾತ್‌ನಲ್ಲಿ ಪತ್ನಿಯ ಚಿತಾಭಸ್ಮವನ್ನು ವಿಸರ್ಜಿಸಿದ ನಂತರ, ಅರ್ಜುನ್‌ಭಾಯ್ ಪಟೋಲಿಯಾ ಎಂಬ ವ್ಯಕ್ತಿ ವಾಪಾಸ್ ಲಂಡನ್​​ಗೆ ಹೊರಟಿದ್ದರು. 7 ದಿನಗಳ ಹಿಂದಷ್ಟೇ ಅವರ ಹೆಂಡತಿ ಸಾವನ್ನಪ್ಪಿದ್ದರು. ಆಕೆಯ ಚಿತಾಭಸ್ಮವನ್ನು ಊರಿನ ನದಿಯಲ್ಲಿ ಬಿಡಬೇಕೆಂಬುದು ಆಕೆಯ ಕೊನೆಯಾಸೆಯಾಗಿತ್ತು. ಆ ಆಸೆಯನ್ನು ಈಡೇರಿಸಲು ಅವರು ಅಹಮದಾಬಾದ್​ಗೆ ಬಂದಿದ್ದರು. ಆದರೆ, ಗುರುವಾರ ನಡೆದ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಅವರೇ ನಿಧನರಾಗಿದ್ದಾರೆ.

ಹೆಂಡತಿಯ ಚಿತಾಭಸ್ಮ ಬಿಡಲು ಲಂಡನ್​ನಿಂದ ಬಂದಿದ್ದ ಗಂಡನೇ ವಿಮಾನ ಅಪಘಾತದಲ್ಲಿ ಬೂದಿಯಾದ ಕತೆಯಿದು!
Arjunbhai Patoliya

Updated on: Jun 13, 2025 | 4:29 PM

ಅಹಮದಾಬಾದ್, ಜೂನ್ 13: ಗುಜರಾತ್​​ನ ಅಹಮದಾಬಾದ್​ನಲ್ಲಿ ನಡೆದ ವಿಮಾನ ಅಪಘಾತದಲ್ಲಿ (Ahmedabad Plane Crash) ಕೇವಲ ಓರ್ವ ವ್ಯಕ್ತಿಯನ್ನು ಬಿಟ್ಟು ಉಳಿದವರೆಲ್ಲರೂ ಸುಟ್ಟು ಕರಕಲಾಗಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದವರ ಒಂದೊಂದೇ ಕತೆಗಳು ಹೊರಬರುತ್ತಿವೆ. ಭವಿಷ್ಯದ ಬಗ್ಗೆ ಕನಸುಗಳನ್ನು ಇಟ್ಟುಕೊಂಡು ಲಂಡನ್​ಗೆ ಹೊರಟಿದ್ದ ಭಾರತೀಯರ ಕತೆ ಒಂದೆಡೆಯಾದರೆ ವಿದೇಶದಿಂದ ಭಾರತಕ್ಕೆ ಪ್ರವಾಸ ಬಂದಿದ್ದ ಪ್ರವಾಸಿಗರ ದುರಂತ ಕತೆ ಇನ್ನೊಂದೆಡೆ. ಇದರ ಜೊತೆಗೆ ಅಹಮದಾಬಾದ್​​ನ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಯ ಕೊನೆ ಆಸೆ ಈಡೇರಿಸಲು ಆಕೆಯ ಚಿತಾಭಸ್ಮ ವಿಸರ್ಜನೆಗೆ ಅಹಮದಾಬಾದ್​​ಗೆ ಲಂಡನ್​​ನಿಂದ ಬಂದವರು ತಾವೇ ಸುಟ್ಟು ಬೂದಿಯಾಗಿದ್ದಾರೆ ಎಂಬ ಕತೆ ಎಂಥವರನ್ನೂ ಭಾವುಕರನ್ನಾಗಿಸದೇ ಇರದು.

ಅಹಮದಾಬಾದ್‌ನಲ್ಲಿ ಸಂಭವಿಸಿದ ಭಯಾನಕವಾದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ, ಒಬ್ಬೊಬ್ಬರ ಮನಕಲಕುವ ಕಥೆಗಳು ಹೊರಬರುತ್ತಿವೆ. ಪ್ರತಿಯೊಂದೂ ಒಂದಕ್ಕಿಂತ ಒಂದು ಹೆಚ್ಚು ಹೃದಯವಿದ್ರಾವಕವಾಗಿದೆ. ಅವುಗಳಲ್ಲಿ ಒಂದು ದುರಂತ ಕತೆ ಇಲ್ಲಿದೆ. 7 ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದ ತನ್ನ ಪತ್ನಿಯ ಕೊನೆಯ ಆಸೆಯನ್ನು ಪೂರೈಸಲು ಲಂಡನ್‌ನಿಂದ ಅಹಮದಾಬಾದ್‌ಗೆ ಹಾರಿದ ವ್ಯಕ್ತಿ ಈಗ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಅವರ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಲಂಡನ್‌ನಲ್ಲಿ ಅನಾಥರಾಗಿದ್ದಾರೆ.

ಇದನ್ನೂ ಓದಿ
ಭಾರತವನ್ನು ಬೆಚ್ಚಿ ಬೀಳಿಸಿದ 8 ಭಯಾನಕ ವಿಮಾನ ದುರಂತಗಳಿವು
ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; 241 ಪ್ರಯಾಣಿಕರ ಸಾವು
ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ನಾಳೆ ಅಹಮದಾಬಾದ್​​ಗೆ ಮೋದಿ ಭೇಟಿ; ಭಾರತಕ್ಕೆ ಸಹಾಯಹಸ್ತ ಚಾಚಿದ ಟ್ರಂಪ್


ಇದನ್ನೂ ಓದಿ: ಗಣಪತಿಯೇ ನನ್ನ ಕಾಪಾಡಿದ!; 10 ನಿಮಿಷ ತಡವಾಗಿ ಏರ್​ಪೋರ್ಟ್​ಗೆ ಬಂದಿದ್ದಕ್ಕೆ ಉಳಿಯಿತು ಯುವತಿಯ ಪ್ರಾಣ

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ವಾಡಿಯಾ ಗ್ರಾಮದವರಾದ, ಇದೀಗ ಲಂಡನ್ ನಿವಾಸಿಯಾಗಿರುವ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಕೆಲವೇ ದಿನಗಳ ಹಿಂದೆ ಅಹಮದಾಬಾದ್‌ಗೆ ಆಗಮಿಸಿದ್ದರು. ಅವರ ಪತ್ನಿ ಭಾರತಿಬೆನ್ ಕೇವಲ 1 ವಾರದ ಹಿಂದೆ ಲಂಡನ್‌ನಲ್ಲಿ ನಿಧನರಾಗಿದ್ದರು. ಅವರ ಪೂರ್ವಜರ ಗ್ರಾಮದ ನೀರಿನಲ್ಲಿಯೇ ಅವರ ಚಿತಾಭಸ್ಮವನ್ನು ವಿಸರ್ಜಿಸಬೇಕೆಂಬುದು ಅವರ ಅಂತಿಮ ಆಸೆಯಾಗಿತ್ತು. ಹೀಗಾಗಿ, 8 ಮತ್ತು 4 ವರ್ಷದ ಸಣ್ಣ ಹೆಣ್ಣುಮಕ್ಕಳನ್ನು ಲಂಡನ್​​ನಲ್ಲಿಯೇ ಬಿಟ್ಟು ಅರ್ಜುನ್ ಒಬ್ಬಂಟಿಯಾಗಿ ಭಾರತಕ್ಕೆ ಬಂದಿದ್ದರು. ಹೆಂಡತಿಯ ಅಂತಿಮ ವಿಧಿಯನ್ನು ಈಡೇರಿಸಿದ ನಂತರ ಗುರುವಾರ ಅವರು ಲಂಡನ್​ಗೆ ವಾಪಾಸ್ ಹೊರಟಿದ್ದರು. ಆಗಲೇ ವಿಮಾನ ಅಪಘಾತವಾಗಿ ಅವರು ಸುಟ್ಟು ಬೂದಿಯಾಗಿದ್ದಾರೆ. ಇದರಿಂದ ಅವರ ಮಕ್ಕಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ವಿದೇಶದಲ್ಲಿ ಅನಾಥರಾಗಿದ್ದಾರೆ.

ಇದನ್ನೂ ಓದಿ: ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು

ಅರ್ಜುನ್ ಅವರ ಕುಟುಂಬದ ಮೂಲಗಳ ಪ್ರಕಾರ, ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ನಂತರ ಅವರ ಹೆಂಡತಿಯ ಇಚ್ಛೆಯಂತೆ ಅವರ ಚಿತಾಭಸ್ಮವನ್ನು ಹಳ್ಳಿಯ ನದಿಯಲ್ಲಿ ಮುಳುಗಿಸಿದ ನಂತರ, ಅರ್ಜುನ್ ಲಂಡನ್‌ಗೆ ಮರಳಲು ಏರ್ ಇಂಡಿಯಾ ವಿಮಾನ ಹತ್ತಿದರು. ಆದರೆ ವಿಧಿ ಬೇರೆ ಪ್ಲಾನ್ ಮಾಡಿತ್ತು. ಅಹಮದಾಬಾದ್‌ನಲ್ಲಿ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಇದರಿಂದ 241 ಪ್ರಯಾಣಿಕರ ಜೀವ ಅಪಘಾತದಲ್ಲಿ ಬಲಿಯಾಯಿತು.


ಅಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಇಬ್ಬರು ಪುಟ್ಟ ಹುಡುಗಿಯರು ಲಂಡನ್‌ನಲ್ಲಿ ತಮ್ಮ ತಂದೆಗಾಗಿ ಕಾಯುತ್ತಿದ್ದರು. ಒಂದು ವಾರದೊಳಗೆ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದೇವೆಂದು ಅವರಿಗೆ ತಿಳಿದಿಲ್ಲ. ಅವರಿನ್ನೂ ಅಪ್ಪನಿಗಾಗಿ ಕಾಯುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:29 pm, Fri, 13 June 25