ಪೊಲೀಸರ ಕಣ್ತಪ್ಪಿಸಿ ಓಡಲು ಹೋಗಿ ಮುಗ್ಗರಿಸಿ ಬಿದ್ದ ಆರೋಪಿ: ಗುರುಗ್ರಾಮ ಬೈಕರ್ ಕೇಸ್‌ನಲ್ಲಿ ಕಲ್ಯಾಣ್ ಬೈನ್ಸ್ಲಾ ಅರೆಸ್ಟ್

ಗುರುಗ್ರಾಮ ಬೈಕರ್ ಶಿವಾನಿ ಚೌಹಾಣ್ (ಸಿಯಾ) ಹಿಟ್-ಅಂಡ್-ರನ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಲಾಗಿದೆ. ರಾಜಸ್ಥಾನದ ದೌಸಾದಲ್ಲಿ ಅವಿತಿದ್ದ ಆರೋಪಿ, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿ ಮುಗ್ಗರಿಸಿ ಬಿದ್ದಿದ್ದಾನೆ. ಈ ಪ್ರಕರಣವನ್ನು ಕೊಲೆಯತ್ನ (BNS ಸೆಕ್ಷನ್ 109) ಎಂದು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಉದ್ದೇಶಪೂರ್ವಕ ಕೃತ್ಯ ಸಾಬೀತಾಗಿದ್ದು, ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪೊಲೀಸರ ಕಣ್ತಪ್ಪಿಸಿ ಓಡಲು ಹೋಗಿ ಮುಗ್ಗರಿಸಿ ಬಿದ್ದ ಆರೋಪಿ: ಗುರುಗ್ರಾಮ ಬೈಕರ್ ಕೇಸ್‌ನಲ್ಲಿ ಕಲ್ಯಾಣ್ ಬೈನ್ಸ್ಲಾ ಅರೆಸ್ಟ್
ಕಲ್ಯಾಣ್
Image Credit source: NDTV

Updated on: Sep 16, 2026 | 8:34 AM

ಗುರುಗ್ರಾಮ, ಸೆಪ್ಟೆಂಬರ್ 16: ಸಾಮಾಜಿಕ ಜಾಲತಾಣಗಳಲ್ಲಿ ‘ಸಿಯಾ’ ಎಂದೇ ಚಿರಪರಿಚಿತವಾಗಿರುವ ಮಹಿಳಾ ಬೈಕರ್ ಶಿವಾನಿ ಚೌಹಾಣ್ ಅವರ ಬೈಕಿಗೆ ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆದಿದ್ದ ಗುರುಗ್ರಾಮದ ಹಿಟ್-ಆ್ಯಂಡ್-ರನ್ ಪ್ರಕರಣವು ಈಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಘಟನೆ ನಡೆಸಿ ರಾಜಸ್ಥಾನದ ದೌಸಾದಲ್ಲಿ ಅವಿತಿದ್ದ ಪ್ರಮುಖ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಆದರೆ, ಕಸ್ಟಡಿಗೆ ಪಡೆಯುತ್ತಿದ್ದ ವೇಳೆ ಶೌಚಾಲಯಕ್ಕೆ ಹೋಗುವ ನೆಪ ಹೇಳಿ ಪರಾರಿಯಾಗಲು ಯತ್ನಿಸಿದ ಆರೋಪಿ, ಕೆಳಗೆ ಬಿದ್ದು ಗಾಯಗೊಂಡು ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಟಾಯ್ಲೆಟ್ ನೆಪದಲ್ಲಿ ಎಸ್ಕೇಪ್ ಪ್ಲಾನ್ ಫೇಲ್: ಬಂಧನದ ವೇಳೆ ಶೌಚಾಲಯ ಬಳಸಬೇಕೆಂದು ಹೇಳಿದ ಬೈನ್ಸ್ಲಾ, ಪೊಲೀಸರ ಕಣ್ತಪ್ಪಿಸಿ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದಿದ್ದರಿಂದ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸರು ಅಧಿಕೃತವಾಗಿ ವಶಕ್ಕೆ ಪಡೆದಿದ್ದಾರೆ.

ಕಾರಿನಲ್ಲಿದ್ದ 2ನೇ ಆರೋಪಿಯ ಬಂಧನ: ಅಪಘಾತ ಸಂಭವಿಸಿದ ಸಮಯದಲ್ಲಿ ಕಲ್ಯಾಣ್ ಬೈನ್ಸ್ಲಾ ಜೊತೆಗೆ ಕಾರಿನಲ್ಲಿ ಕುಳಿತಿದ್ದ ಪಲ್ವಾಲ್‌ನ ನ್ಯೂ ಕಾಲೋನಿ ನಿವಾಸಿ ಲವಣೀಶ್ (34) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಓದಿ:ಗುರುಗ್ರಾಮದಲ್ಲಿ ಮಹಿಳಾ ಬೈಕರ್ ಮೇಲೆ ಕಾರು ಚಾಲಕನ ದರ್ಪ: ಅಂತರ ಕಾಯ್ದುಕೊಳ್ಳಲು ಹೇಳಿದ್ದಕ್ಕೆ ಗುದ್ದಿ ಪರಾರಿ, ಆಘಾತಕಾರಿ ವಿಡಿಯೋ ವೈರಲ್

ಕೊಲೆಯತ್ನ ಕೇಸ್ : ಸಿಸಿಟಿವಿ ಮತ್ತು ಹೆಲ್ಮೆಟ್ ಕ್ಯಾಮೆರಾ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರು, ಸಾಮಾನ್ಯ ಅಪಘಾತದ ಬದಲಿಗೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 109 ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಆಕಸ್ಮಿಕ ಅಪಘಾತವಲ್ಲ, ಉದ್ದೇಶಪೂರ್ವಕ ಕೊಲೆಯತ್ನ ಎಂದು ಬೈಕರ್ ಸಿಯಾ ಮೊದಲಿನಿಂದಲೂ ಹೇಳುತ್ತಿದ್ದರು. ಕಾರಿನಲ್ಲಿದ್ದ ಪುಂಡರು ಮದ್ಯದ ಅಮಲಿನಲ್ಲಿ ಬೈಕನ್ನು ಅಡ್ಡಗಟ್ಟಿ ಡಿಕ್ಕಿ ಹೊಡೆದಿದ್ದು ಈಗ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ.

ಆರೋಪಿಯ ಮುಖವಾಡ ಬಯಲು: ತಾನು ಸವಾರನಿಗೆ ಡಿಕ್ಕಿ ಹೊಡೆದಿದ್ದು ಆಕಸ್ಮಿಕ, ಬೈಕರ್ಸ್‌ಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸುತ್ತಿದ್ದರು ಎಂದು ಮಾಧ್ಯಮಗಳ ಮುಂದೆ ಗೋಳಾಡಿದ್ದ ಆರೋಪಿ, ಪೊಲೀಸರು ಬಂಧಿಸಲು ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿರುವುದು ಆತನ ತಪ್ಪನ್ನು ಇನ್ನಷ್ಟು ಬಲವಾಗಿ ಸಾಬೀತುಪಡಿಸಿದೆ.

ಕಾನೂನು ಸಂಕಷ್ಟ: ಬಿಎನ್‌ಎಸ್ ಸೆಕ್ಷನ್ 109ರ ಅನ್ವಯ ಕೊಲೆಯತ್ನ ಆರೋಪ ಸಾಬೀತಾದರೆ ಆರೋಪಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಜೊತೆಗೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಾಗಿ ಹೆಚ್ಚುವರಿ ಸೆಕ್ಷನ್‌ಗಳನ್ನು ಕೂಡ ಸೇರಿಸಲಾಗುತ್ತಿದೆ. ಘಟನೆಯ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಹೊರರಾಜ್ಯದಲ್ಲಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಸೆಕ್ಷನ್ ಜಡಿದ ಗುರುಗ್ರಾಮ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us