ಗುರುಗ್ರಾಮದಲ್ಲಿ ಮಹಿಳಾ ಬೈಕರ್ ಮೇಲೆ ಕಾರು ಚಾಲಕನ ದರ್ಪ: ಅಂತರ ಕಾಯ್ದುಕೊಳ್ಳಲು ಹೇಳಿದ್ದಕ್ಕೆ ಗುದ್ದಿ ಪರಾರಿ, ಆಘಾತಕಾರಿ ವಿಡಿಯೋ ವೈರಲ್
ಗುರುಗ್ರಾಮದಲ್ಲಿ ಮಹಿಳಾ ಬೈಕರ್ ಸಿಯಾಗೆ ಕಾರು ಚಾಲಕ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಆಘಾತಕಾರಿಯಾಗಿದೆ. ಅಂತರ ಕಾಯ್ದುಕೊಳ್ಳಲು ಹೇಳಿದ್ದಕ್ಕೆ ಈ ದರ್ಪ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಸಿಯಾ ಪೊಲೀಸರಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ದೆಹಲಿ-ಎನ್‌ಸಿಆರ್‌ನಲ್ಲಿ ಮಹಿಳಾ ಸವಾರರ ಸುರಕ್ಷತೆ ಮತ್ತು ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳ ಬಗ್ಗೆ ಈ ಘಟನೆ ತೀವ್ರ ಆತಂಕ ಮೂಡಿಸಿದೆ.

ಗುರುಗ್ರಾಮ, ಸೆಪ್ಟೆಂಬರ್ 14: ಹರಿಯಾಣದ ಗುರುಗ್ರಾಮದ ಪ್ರಸಿದ್ಧ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ವೊಬ್ಬರ ಮೇಲೆ ಕಾರು ಚಾಲಕ ಉದ್ದೇಶಪೂರ್ವಕವಾಗಿ ವಾಹನ ಹರಿಸಿ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಮ್ಮ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಜನಪ್ರಿಯ ಬೈಕರ್ ಸಿಯಾ ಎಂಬುವವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಮಹಿಳೆ ರಸ್ತೆಗೆ ಬಿದ್ದಿದ್ದು, ಬೈಕ್ ಕೆಲವು ಮೀಟರ್‌ಗಳಷ್ಟು ದೂರ ಎಳೆದೊಯ್ಯಲ್ಪಟ್ಟಿದೆ. ಈ ಇಡೀ ಕೃತ್ಯ ಬೈಕ್‌ನಲ್ಲಿದ್ದ ಆಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆನ್ನಟ್ಟಿ ಬಂದು ಕಿರುಕುಳ: ಸಿಯಾ ತಮ್ಮ ಬೈಕರ್ಸ್ ಗ್ರೂಪ್ ಜೊತೆ ಭಾನುವಾರ ಬೆಳಿಗ್ಗೆ ರೈಡ್ ಹೊರಟಿದ್ದಾಗ, ಕಾರಿನಲ್ಲಿದ್ದ ಯುವಕರು ಸವಾರಿಯ ಆರಂಭದಿಂದಲೇ ಬೆನ್ನಟ್ಟಿ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದರು. ಕಾರಿನಲ್ಲಿದ್ದವರು ಕುಡಿದ ಮತ್ತಿನಲ್ಲಿದ್ದಂತೆ ಕಂಡುಬಂದಿದ್ದು, ಸಿಯಾ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸೂಚಿಸಿದಾಗ ಬೈಕ್ ನಿಲ್ಲಿಸುವಂತೆ ದಮ್ಕಿ ಹಾಕಿದ್ದಾರೆ. ಸಿಯಾ ಮುಂದೆ ಸಾಗಲು ಯತ್ನಿಸಿದಾಗ ಕಾರನ್ನು ದಿಢೀರ್ ಬೈಕಿನ ಮುಂಭಾಗಕ್ಕೆ ತಿರುಗಿಸಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ವೇಗವಾಗಿ ಪರಾರಿಯಾಗಿದ್ದಾರೆ.
ಸಿಗ್ನಲ್‌ನಲ್ಲಿ ಪ್ರಶ್ನಿಸಿದ ಸ್ನೇಹಿತ: ಅಪಘಾತದ ಬೆನ್ನಲ್ಲೇ ಸಿಯಾ ಅವರ ಸ್ನೇಹಿತ ಕಾರನ್ನು ಬೆನ್ನಟ್ಟಿ ಮುಂದಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ಅಡ್ಡಗಟ್ಟಿದ್ದಾರೆ. ಆದರೆ ಚಾಲಕ ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಜಗಳವಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಸಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (‘rebelwheels_sia_’) ಘಟನೆಯ ಪೂರ್ಣ ವೀಡಿಯೊ, ಕಾರಿನ ನೋಂದಣಿ ಸಂಖ್ಯೆ ಮತ್ತು ಆರ್‌ಸಿ ಮಾಲೀಕರ ವಿವರಗಳನ್ನು ಹಂಚಿಕೊಂಡು ಗುರುಗ್ರಾಮ ಪೊಲೀಸರಿಗೆ ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಮತ್ತಷ್ಟು ಓದಿ: ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೌರಿ ಹಬ್ಬಕ್ಕೆ ತವರಿಗೆ ಬಂದಿದ್ದ ಗೃಹಿಣಿ ಸಾವು
ರಸ್ತೆ ಸುರಕ್ಷತೆ ಮತ್ತು ಎಫ್‌ಐಆರ್ ಆಗ್ರಹ: ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹರಿಯಾಣ ಮತ್ತು ಗುರುಗ್ರಾಮ ಪೊಲೀಸರಿಗೆ ಟ್ಯಾಗ್ ಮಾಡಿ, ಆರೋಪಿಗಳ ವಿರುದ್ಧ ಕೊಲೆಯತ್ನ ಹಾಗೂ ಹಿಟ್ ಆ್ಯಂಡ್ ರನ್ ಅಡಿಯಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳು: ದೆಹಲಿ-ಎನ್‌ಸಿಆರ್ ಹಾಗೂ ಗುರುಗ್ರಾಮದ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಹಿಳಾ ವಾಹನ ಸವಾರರನ್ನು ಹಿಂಬಾಲಿಸುವುದು, ಮದ್ಯಪಾನ ಮಾಡಿ ಅತಿವೇಗದಿಂದ ವಾಹನ ಚಲಾಯಿಸುವುದು ಮತ್ತು ರೋಡ್ ರೇಜ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದು ನಾಗರಿಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಹುಟ್ಟುಹಾಕಿದೆ.
ಇನ್ಸ್ಟಾಗ್ರಾಂ ಪೋಸ್ಟ್
View this post on Instagram
ಅದೃಷ್ಟವಶಾತ್ ರೈಡಿಂಗ್ ಜಾಕೆಟ್, ಗ್ಲೌಸ್ ಮತ್ತು ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರಿಂದ ಸಿಯಾ ಯಾವುದೇ ದೊಡ್ಡ ಪ್ರಾಣಾಪಾಯವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯ ಆಘಾತದಿಂದ ಮಾತನಾಡಿದ ಅವರು, ಇಂದು ಗುರುಗ್ರಾಮದ ರಸ್ತೆಗಳಲ್ಲಿ ನಾನು ಸಂಪೂರ್ಣ ಅಸುರಕ್ಷಿತ ಎಂದು ಭಾವಿಸಿದೆ, ಜನರಿಗೆ ಯಾರನ್ನಾದರೂ ಹೊಡೆದು ಪರಾರಿಯಾಗಲು ಕಿಂಚಿತ್ತೂ ಭಯವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




