AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Auto Tips: ಕಾರಿನ ವೇಗವನ್ನು ಸ್ಪೀಡೋಮೀಟರ್‌ಗೆ ಹೇಗೆ ತಿಳಿಯುತ್ತದೆ? ಕಾರಿನೊಳಗೆ ನಡೆಯುವ ಪ್ರಕ್ರಿಯೆ ಏನು?

ನಾವು ಕಾರು ಚಾಲನೆ ಮಾಡುವಾಗ ಸ್ಪೀಡೋಮೀಟರ್‌ ಕಾರಿನ ವೇಗವನ್ನು ತಕ್ಷಣ ತೋರಿಸುತ್ತದೆ. ಆದರೆ ಕಾರು ಎಷ್ಟು ವೇಗದಲ್ಲಿ ಚಲಿಸುತ್ತಿದೆ ಎಂಬುದು ಸ್ಪೀಡೋಮೀಟರ್‌ಗೆ ಹೇಗೆ ಗೊತ್ತಾಗುತ್ತದೆ? ಚಕ್ರದ ವೇಗವನ್ನು ಸೆನ್ಸರ್‌ಗಳು ಹೇಗೆ ಪತ್ತೆಹಚ್ಚುತ್ತವೆ, ಆ ಮಾಹಿತಿಯಿಂದ ಕಾರಿನ ವೇಗವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿಯೋಣ.

Auto Tips: ಕಾರಿನ ವೇಗವನ್ನು ಸ್ಪೀಡೋಮೀಟರ್‌ಗೆ ಹೇಗೆ ತಿಳಿಯುತ್ತದೆ? ಕಾರಿನೊಳಗೆ ನಡೆಯುವ ಪ್ರಕ್ರಿಯೆ ಏನು?
Car Speed Meter
ಮಾಲಾಶ್ರೀ ಅಂಚನ್​
| Edited By: |

Updated on: Sep 13, 2026 | 9:58 AM

Share

ಮುಖ್ಯಾಂಶಗಳು

  • ಕಾರಿನ ವೇಗವನ್ನು ಸ್ಪೀಡೋಮೀಟರ್‌ ಹೇಗೆ ತಿಳಿಯುತ್ತದೆ?
  • ಚಕ್ರದ ವೇಗವನ್ನು ಸೆನ್ಸರ್‌ ಹೇಗೆ ಅಳೆಯುತ್ತದೆ?
  • ABSಗೂ ಇದೇ ಸೆನ್ಸರ್‌ಗಳು ಏಕೆ ಮುಖ್ಯ?

ನಾವು ಕಾರು (Car) ಚಾಲನೆ ಮಾಡುವಾಗ ಡ್ಯಾಶ್‌ಬೋರ್ಡ್‌ನಲ್ಲಿರುವ ಸ್ಪೀಡೋಮೀಟರ್‌ ಪ್ರತಿ ಕ್ಷಣವೂ ಕಾರಿನ ವೇಗವನ್ನು ತೋರಿಸುತ್ತಿರುತ್ತದೆ. ಕಾರು ಗಂಟೆಗೆ 40 ಕಿ.ಮೀ ವೇಗದಲ್ಲಿ ಸಾಗುತ್ತಿದ್ದರೆ 40, ವೇಗ ಹೆಚ್ಚಿಸಿದರೆ 60 ಅಥವಾ 80 ಎಂದು ಸ್ಪೀಡೋಮೀಟರ್‌ನಲ್ಲಿ ಕಾಣಿಸುತ್ತದೆ. ಆದರೆ ಕಾರಿನ ವೇಗವನ್ನು ಅಳೆಯಲು ಅದರೊಳಗೆ ಯಾರೂ ಕುಳಿತಿಲ್ಲ. ಹಾಗಾದರೆ ಕಾರು ಎಷ್ಟು ವೇಗದಲ್ಲಿ ಚಲಿಸುತ್ತಿದೆ ಎಂಬುದು ಸ್ಪೀಡೋಮೀಟರ್‌ಗೆ ಹೇಗೆ ಗೊತ್ತಾಗುತ್ತದೆ?.

ಇದರ ಹಿಂದೆ ಮುಖ್ಯವಾಗಿ ವೀಲ್ ಸ್ಪೀಡ್ ಸೆನ್ಸರ್, ಎಲೆಕ್ಟ್ರಾನಿಕ್ ನಿಯಂತ್ರಣ ಘಟಕ ಮತ್ತು ಸ್ಪೀಡೋಮೀಟರ್‌ ನಡುವಿನ ಸಂವಹನವಿದೆ. ಆಧುನಿಕ ಕಾರುಗಳಲ್ಲಿ ಚಕ್ರಗಳು ಎಷ್ಟು ವೇಗವಾಗಿ ತಿರುಗುತ್ತಿವೆ ಎಂಬುದನ್ನು ಸೆನ್ಸರ್‌ಗಳ ಮೂಲಕ ಪತ್ತೆಹಚ್ಚಿ, ಅದನ್ನು ಕಾರಿನ ವೇಗವಾಗಿ ಪರಿವರ್ತಿಸಲಾಗುತ್ತದೆ.

ಕಾರಿನ ಚಕ್ರ ಅಥವಾ ಅದರ ಸಮೀಪದಲ್ಲಿ ಸ್ಪೀಡ್ ಸೆನ್ಸರ್‌ ಅಳವಡಿಸಲಾಗಿರುತ್ತದೆ. ಚಕ್ರ ತಿರುಗುವಾಗ ಸೆನ್ಸರ್‌ಗೆ ನಿರ್ದಿಷ್ಟ ರೀತಿಯ ಸಂಕೇತಗಳು ಸಿಗುತ್ತವೆ. ಚಕ್ರ ಎಷ್ಟು ವೇಗವಾಗಿ ತಿರುಗುತ್ತಿದೆ ಎಂಬುದರ ಆಧಾರದ ಮೇಲೆ ಈ ಸಂಕೇತಗಳ ಪ್ರಮಾಣವೂ ಬದಲಾಗುತ್ತದೆ. ಚಕ್ರ ವೇಗವಾಗಿ ತಿರುಗಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಸಂಕೇತಗಳು ಬರುತ್ತವೆ. ನಿಧಾನವಾಗಿ ತಿರುಗಿದರೆ ಸಂಕೇತಗಳ ನಡುವಿನ ಅಂತರ ಹೆಚ್ಚಾಗುತ್ತದೆ.

ಈ ಮಾಹಿತಿಯನ್ನು ಕಾರಿನ ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆ ಸ್ವೀಕರಿಸುತ್ತದೆ. ಚಕ್ರದ ಗಾತ್ರ ಮತ್ತು ಅದು ತಿರುಗುತ್ತಿರುವ ವೇಗವನ್ನು ಆಧರಿಸಿ ಕಾರು ಪ್ರಯಾಣಿಸುತ್ತಿರುವ ವೇಗವನ್ನು ಲೆಕ್ಕ ಹಾಕುತ್ತದೆ. ನಂತರ ಈ ಮಾಹಿತಿಯನ್ನು ಡ್ಯಾಶ್‌ಬೋರ್ಡ್‌ನಲ್ಲಿರುವ ಸ್ಪೀಡೋಮೀಟರ್‌ಗೆ ಕಳುಹಿಸಲಾಗುತ್ತದೆ. ಹೀಗಾಗಿ ಚಾಲಕನಿಗೆ ಕಾರಿನ ಪ್ರಸ್ತುತ ವೇಗ ತಿಳಿಯುತ್ತದೆ.

ಬೆಳಗ್ಗೆ ಪೆಟ್ರೋಲ್ ಹಾಕಿಸಿದರೆ ಹೆಚ್ಚು ಮೈಲೇಜ್ ಸಿಗುತ್ತದೆಯೇ? ಇದರ ಹಿಂದಿನ ಸತ್ಯವೇನು?

ಈ ಸೆನ್ಸರ್‌ಗಳ ಕೆಲಸ ಕೇವಲ ಸ್ಪೀಡೋಮೀಟರ್‌ಗೆ ವೇಗ ತೋರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾರಿನ ABS ವ್ಯವಸ್ಥೆಯಲ್ಲೂ ಚಕ್ರಗಳ ವೇಗದ ಮಾಹಿತಿ ಬಹಳ ಮುಖ್ಯ. ಬ್ರೇಕ್ ಹಾಕಿದಾಗ ಯಾವುದಾದರೂ ಚಕ್ರ ಉಳಿದ ಚಕ್ರಗಳಿಗಿಂತ ಬೇರೆ ರೀತಿಯಲ್ಲಿ ತಿರುಗುತ್ತಿರುವುದನ್ನು ಸೆನ್ಸರ್‌ಗಳು ಪತ್ತೆಹಚ್ಚಿದರೆ, ABS ವ್ಯವಸ್ಥೆ ಅದಕ್ಕೆ ಅನುಗುಣವಾಗಿ ಬ್ರೇಕ್ ಒತ್ತಡವನ್ನು ನಿಯಂತ್ರಿಸುತ್ತದೆ. ಇದರಿಂದ ಚಕ್ರ ಲಾಕ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಇನ್ನು ಕೆಲವು ಆಧುನಿಕ ಕಾರುಗಳಲ್ಲಿ ವಾಹನದ ವೇಗದ ಮಾಹಿತಿಯನ್ನು ಇತರ ವ್ಯವಸ್ಥೆಗಳೂ ಬಳಸುತ್ತವೆ. ಉದಾಹರಣೆಗೆ, ಕ್ರೂಸ್ ಕಂಟ್ರೋಲ್‌ಗೆ ಕಾರಿನ ವೇಗದ ಮಾಹಿತಿ ಅಗತ್ಯವಿರುತ್ತದೆ. ಕೆಲವು ಕಾರುಗಳಲ್ಲಿ ಚಾಲನಾ ಸಹಾಯ ವ್ಯವಸ್ಥೆಗಳು ಕೂಡ ಇದೇ ರೀತಿಯ ಮಾಹಿತಿಯನ್ನು ಬಳಸುತ್ತವೆ.

ಹಾಗಾದರೆ ಸ್ಪೀಡೋಮೀಟರ್ ಯಾವಾಗಲೂ ತೋರಿಸುವ ವೇಗವೇ ನಿಖರವಾದ ವೇಗವೇ? ಅಗತ್ಯವಿಲ್ಲ. ಟೈರ್‌ನ ಗಾತ್ರ, ಟೈರ್‌ನ ಸ್ಥಿತಿ ಅಥವಾ ಇತರ ಕಾರಣಗಳಿಂದ ಪ್ರದರ್ಶಿಸುವ ವೇಗದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಕೆಲವು ಕಾರುಗಳಲ್ಲಿ ಚಕ್ರದ ತಿರುಗುವಿಕೆಯನ್ನು ಆಧರಿಸಿ ವೇಗವನ್ನು ಲೆಕ್ಕ ಹಾಕಲಾಗುತ್ತದೆ, ಆದರೆ ಕೆಲವು ಆಧುನಿಕ ವ್ಯವಸ್ಥೆಗಳು ಇತರ ಮೂಲಗಳ ಮಾಹಿತಿಯನ್ನೂ ಬಳಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More