ಪತ್ನಿಯ ಶಿರಚ್ಛೇದ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಪೊಲೀಸ್ ಜೀಪ್‌ನಿಂದ ಕಂದಕಕ್ಕೆ ಹಾರಿ ಸಾವು

ಗುವಾಹಟಿಯಲ್ಲಿ ಪತ್ನಿ ರಿಯಾ ತಾಲೂಕ್‌ದಾರ್ ಶಿರಚ್ಛೇದ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ರಾಮಾನುಜ್ ಗೋಸ್ವಾಮಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ವೈದ್ಯಕೀಯ ತಪಾಸಣೆ ನಂತರ ಕರೆದೊಯ್ಯುವಾಗ ಪೊಲೀಸ್ ಜೀಪ್‌ನಿಂದ ಜಿಗಿದು ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಅಸ್ಸಾಂನಲ್ಲಿ ಭಾರಿ ಸದ್ದು ಮಾಡಿದ್ದು, ಪೊಲೀಸ್ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ಮಾದಕ ವ್ಯಸನ ಮತ್ತು ಹಿಂದಿನ ಅಪರಾಧ ಹಿನ್ನೆಲೆ ಹೊಂದಿದ್ದ ಗೋಸ್ವಾಮಿ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಸ್ಟಡಿ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯಲಿದೆ.

ಪತ್ನಿಯ ಶಿರಚ್ಛೇದ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆರೋಪಿ ಪೊಲೀಸ್ ಜೀಪ್‌ನಿಂದ ಕಂದಕಕ್ಕೆ ಹಾರಿ ಸಾವು
ಆರೋಪಿ
Image Credit source: NDTV

Updated on: Sep 14, 2026 | 12:25 PM

ಗುವಾಹಟಿ, ಸೆಪ್ಟೆಂಬರ್ 14: ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ಆಕೆಯ ಕತ್ತರಿಸಿದ ತಲೆಯನ್ನು ರೆಫ್ರಿಜರೇಟರ್‌ನಲ್ಲಿ ಬಚ್ಚಿಟ್ಟಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಗುವಾಹಟಿಯ ರಾಮಾನುಜ್ ಗೋಸ್ವಾಮಿ (30), ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಹಾರಿ ಸಾವನ್ನಪ್ಪಿದ್ದಾನೆ. ಸೋಮವಾರ ಮುಂಜಾನೆ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (GMCH) ವೈದ್ಯಕೀಯ ತಪಾಸಣೆ ಮುಗಿಸಿ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆತ ಆಳವಾದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಪೊಲೀಸರ ಮೇಲೆಯೇ ಅಟ್ಯಾಕ್: ಗುವಾಹಟಿಯ ನರಕಾಸುರ್ ಪಹಾರ್ ಪ್ರದೇಶದ ಬಳಿ ಪೊಲೀಸ್ ವಾಹನ ಸಾಗುತ್ತಿದ್ದಾಗ, ಗೋಸ್ವಾಮಿ ಭದ್ರತಾ ಸಿಬ್ಬಂದಿಯ ಮೇಲೆ ಹಠಾತ್ ದಾಳಿ ನಡೆಸಿ ಚಲಿಸುತ್ತಿದ್ದ ಜೀಪ್‌ನಿಂದ ಹೊರಕ್ಕೆ ಜಿಗಿದಿದ್ದಾನೆ. ಆಯತಪ್ಪಿ ಕಂದಕಕ್ಕೆ ಬಿದ್ದ ಪರಿಣಾಮ ಆತನ ತಲೆ ಹಾಗೂ ದೇಹಕ್ಕೆ ತೀವ್ರ ಗಾಯಗಳಾಗಿದ್ದವು.

ಆಸ್ಪತ್ರೆಯಲ್ಲಿ ಸಾವು ದೃಢ: ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಪೊಲೀಸರು ತಕ್ಷಣವೇ ಅದೇ ಆಸ್ಪತ್ರೆಗೆ ಮರಳಿ ದಾಖಲಿಸಿದರಾದರೂ, ತಪಾಸಣೆ ನಡೆಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.

ಮತ್ತಷ್ಟು ಓದಿ:

ನಾಪತ್ತೆಯಾಗಿದ್ದ ಗೃಹಿಣಿ ಕೊಲೆ; ಬೈಕ್ ಇಎಂಐಗಾಗಿ ಪ್ರೇಯಸಿಯನ್ನೇ ಹತ್ಯೆಗೈದಿದ್ದ ಆರೋಪಿ ಅಂದರ್​

 

ಕೃತ್ಯದ ಹಿನ್ನೆಲೆ: ಸೆಪ್ಟೆಂಬರ್ 3 ರಂದು ಪತ್ನಿ ರಿಯಾ ತಾಲೂಕ್‌ದಾರ್  ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಹತ್ಯೆ ಮಾಡಿದ್ದ. ಫ್ಲಾಟ್‌ನಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ನೆರೆಹೊರೆಯವರು ದೂರು ನೀಡಿದಾಗ, ಫ್ರಿಡ್ಜ್‌ನಲ್ಲಿದ್ದ ಕಪ್ಪು ಪಾಲಿಥಿನ್ ಚೀಲದಲ್ಲಿ ಮಹಿಳೆಯ ಕತ್ತರಿಸಿದ ತಲೆ ಹಾಗೂ ಬೆರಳುಗಳು ಪತ್ತೆಯಾಗಿದ್ದವು. ಸೆಪ್ಟೆಂಬರ್ 6 ರಂದು ಶರಣಾಗಿದ್ದ ಈತನನ್ನು ಸ್ಥಳ ಮಹಜರಿಗೆ ಕರೆದೊಯ್ದಾಗ, ನನಗೆ ಪಶ್ಚಾತ್ತಾಪವಿಲ್ಲ, ಜೈಲಿನಿಂದ ಹೊರಬಂದರೆ ಆಕೆಯ ಇನ್ನೊಬ್ಬ ಗೆಳೆಯನನ್ನೂ ಕೊಲ್ಲುತ್ತೇನೆ ಎಂದು ಯಾವುದೇ ಭಯವಿಲ್ಲದೆ ಹೇಳಿಕೆ ನೀಡಿದ್ದ.

ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ: ಆರೋಪಿಯ ವಿರುದ್ಧ ಹೊಸ ಅಪರಾಧ ಕಾನೂನಾದ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) (ಕೊಲೆ) ಮತ್ತು ಸೆಕ್ಷನ್ 238 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದಿಂದ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.

ಹಳೆ ಅಪರಾಧ ಹಿನ್ನೆಲೆ: ಕೊಲೆಗೆ ಬಳಸಿದ್ದ ರಕ್ತಸಿಕ್ತ ಮಚ್ಚು ಹಾಗೂ ಖಾಲಿ ಮದ್ಯದ ಬಾಟಲಿಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದರು. ಮೃತರ ಕುಟುಂಬಸ್ಥರ ಪ್ರಕಾರ, ಆರೋಪಿ ಗೋಸ್ವಾಮಿಗೆ ತೀವ್ರ ಮಾದಕ ವ್ಯಸನದ ಚಟವಿತ್ತು ಮತ್ತು ಆತ 2019 ರಲ್ಲಿ ದೊಡ್ಡ ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಎನ್ನಲಾಗಿದೆ.

ಕಸ್ಟಡಿ ಸಾವು ತನಿಖೆ: ಪೊಲೀಸ್ ಬೆಂಗಾವಲು ವಾಹನದಿಂದ ಹಾರಿ ಆರೋಪಿ ಸಾವನ್ನಪ್ಪಿರುವ ಕಾರಣ, ಕಾನೂನು ನಿಯಮಾವಳಿಗಳ ಪ್ರಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಯಲಿದ್ದು, ಭದ್ರತಾ ವೈಫಲ್ಯದ ಬಗ್ಗೆಯೂ ಇಲಾಖಾ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us