AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಪತ್ತೆಯಾಗಿದ್ದ ಗೃಹಿಣಿ ಕೊಲೆ; ಬೈಕ್ ಇಎಂಐಗಾಗಿ ಪ್ರೇಯಸಿಯನ್ನೇ ಹತ್ಯೆಗೈದಿದ್ದ ಆರೋಪಿ ಅಂದರ್​

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಮೂರು ತಿಂಗಳ ಬಳಿಕ ಪೊಲೀಸರು ಭೇದಿಸಿದ್ದಾರೆ. ಅನೈತಿಕ ಸಂಬಂಧ ಮತ್ತು ಹಣದಾಸೆಗಾಗಿ ಪ್ರಿಯಕರನೇ ಮಹಿಳೆಯ ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆ ಆಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ನಾಪತ್ತೆಯಾಗಿದ್ದ ಗೃಹಿಣಿ ಕೊಲೆ; ಬೈಕ್ ಇಎಂಐಗಾಗಿ ಪ್ರೇಯಸಿಯನ್ನೇ ಹತ್ಯೆಗೈದಿದ್ದ ಆರೋಪಿ ಅಂದರ್​
ದಿಲೀಪ್, ಅನ್ನಪೂರ್ಣ
ಸಹದೇವ್​ ಮಾನೆ
| Edited By: |

Updated on: Sep 13, 2026 | 4:11 PM

Share

ಬೆಳಗಾವಿ, ಸೆಪ್ಟೆಂಬರ್​​ 13: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅನ್ನಪೂರ್ಣ ಎಂಬ ಗೃಹಿಣಿ ನಿಗೂಢ ನಾಪತ್ತೆ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ. ಪತಿ ನೀಡಿದ್ದ ಮಿಸ್ಸಿಂಗ್ ದೂರು ಆಧಾರದ ಮೇಲೆ ತನಿಖೆ ಆರಂಭಿಸಿದ ಬೆಳಗಾವಿ ಪೊಲೀಸರಿಗೆ ಮಹಿಳೆ ಕಾಣೆಯಾದ ದಿನವೇ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಊರ ಹೊರಗಿನ ಕಬ್ಬಿನ ಗದ್ದೆಯಲ್ಲಿ ಆಕೆಯ ಶವ ಪತ್ತೆಯಾಗಿದ್ದು, ಗೋಕಾಕ್ ತಾಲೂಕಿನ ಶಿಂಗಳಾಪುರ ಗ್ರಾಮದ ದಿಲೀಪ್ ಗಡಕರಿ ಎಂಬಾತನೇ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ನಡೆದಿದ್ದೇನು?

ಅನ್ನಪೂರ್ಣ ಹಾಗೂ ಸಿದ್ದಪ್ಪಗೆ ಹದಿನೈದು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಎರಡು ಮುದ್ದಾದ ಮಕ್ಕಳು ಕೂಡ ಇವೆ. ಎರಡು ಎಕರೆ ಜಮೀನಿದ್ದು, ದಂಪತಿ ಅದರಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದರು. ಇನ್ನು ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇದ್ದ ದಂಪತಿ ನಡುವೆ ಯಾವುದೇ ಕಲಹವೂ ಇರಲಿಲ್ಲ. ಆದರೆ ಎರಡು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಅನ್ನಪೂರ್ಣ ಇದೀಗ  ಶವವಾಗಿ ಕೇವಲ ಮೂಳೆಗಳ ರೂಪದಲ್ಲಿ ಸಿಕ್ಕಿದ್ದಾಳೆ‌. ಇದು ಕುಟುಂಬಸ್ಥರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ.

ಹಣ ಕೊಡದಿದ್ದಕ್ಕೆ ಕೊಲೆ

ನಾಲ್ಕು ವರ್ಷಗಳ ಹಿಂದೆ ಕೌಜಲಗಿಗೆ ಮನೆ ನಿರ್ಮಾಣ ಕೆಲಸಕ್ಕೆ ತೆರಳಿದ್ದ ದಿಲೀಪ್‌ಗೆ ಪಕ್ಕದ ಮನೆಯಲ್ಲಿದ್ದ ಅನ್ನಪೂರ್ಣ ಪರಿಚಯವಾಗಿತ್ತು. ನಂಬರ್ ಎಕ್ಸ್‌ಚೇಂಜ್‌ ಆಗಿದೆ. ಇಬ್ಬರ ನಡುವೆ ಅನೈತಿಕ ಸಂಬಂಧ ಕೂಡ ಶುರುವಾಗಿತ್ತು. ದಿಲೀಪ್​​ ಮದುವೆಯಾಗಿ ನಾಲ್ಕು ಮಕ್ಕಳಿದರೂ ಅದನ್ನ ಮರೆತು ಈಕೆಯ ಬೆನ್ನು ಬಿದ್ದಿದ್ದ‌. ಇದೆಲ್ಲದರ ನಡುವೆ ಕೆಲ ತಿಂಗಳ ಹಿಂದೆ ದಿಲೀಪ್ ಇಎಂಐ ಮೂಲಕ ಹೊಸ ಬೈಕ್ ಒಂದನ್ನ ಖರೀದಿ ಮಾಡಿದ್ದ. ಕಂತು ಕಟ್ಟಲು ಹಣವಿಲ್ಲದೆ ಅನ್ನಪೂರ್ಣ ಬಳಿ ಹಣ ಕೊಡುವಂತೆ ಪೀಡಿಸುತ್ತಿದ್ದ. ಆಕೆ ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಜುಲೈ 23ರಂದು ಊರ ಹೊರಗೆ ಆಕೆಯನ್ನು ಕರೆಸಿಕೊಂಡಿದ್ದ ಆರೋಪಿ, ಹಣದ ವಿಚಾರವಾಗಿ ಗಲಾಟೆ ನಡೆಸಿ ಕಬ್ಬಿನ ಗದ್ದೆಯಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಸರ, ಕಿವಿವೋಲೆ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ.

LIVE TV

ಮೊಬೈಲ್ ಲೊಕೇಶನ್ ಜಾಡು ಹಿಡಿದು ಆರೋಪಿ ಸೆರೆ

ಇತ್ತ ನಾಪತ್ತೆ ಕೇಸ್ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದ ಪೊಲೀಸರು ಆಕೆಗೆ ಕೊನೆಯ ಕಾಲ್ ಯಾರು ಮಾಡಿದ್ದಾರೆ ಅಂತಾ ತಪಾಸಣೆ ಮಾಡಿದಾಗ ದಿಲೀಪ್ ಮಾಡಿದ್ದು ಗೊತ್ತಾಗಿತ್ತು. ಮತ್ತೊಂದು ಕಡೆ ಆಕೆ ಮೊಬೈಲ್​ನಲ್ಲಿ ಬೇರೊಂದು ಸೀಮ್ ಹಾಕಿ ಆ್ಯಕ್ಟೀವ್ ಆಗಿದ್ದು ಪೊಲೀಸರ ಗಮನಕ್ಕೆ ಬಂದಿತ್ತು. ಕೂಡಲೇ ಲೊಕೇಶನ್​ ಪತ್ತೆ ಮಾಡಿದ್ದು, ಮಧ್ಯಪ್ರದೇಶ ಎಂಬುವುದು ಗೊತ್ತಾಗಿದೆ. ಆ್ಯಕ್ಟೀವ್​ ಆದ ಮೊಬೈಲ್​ಗೆ ಕರೆ ಮಾಡಿ ಕೇಳಿದಾಗ ಕೊಲ್ಲಾಪುರದಲ್ಲಿದ್ದ ಗೆಳೆಯ ಸತ್ಯಪ್ಪ ಈ‌ ಮೊಬೈಲ್ ಮಾರಾಟ ಮಾಡಿರುವುದಾಗಿ ಹೇಳಿದ್ದು, ಆತನ ನಂಬರ್ ಕೊಟ್ಟಿದ್ದ. ಆ ನಂಬರ್ ಪಡೆದು ಸತ್ಯಪ್ಪನ ಸಂಪರ್ಕ ಮಾಡಿದಾಗ ಆತ ತನಗೆ ದಿಲೀಪ್ ಮೊಬೈಲ್ ಕೊಟ್ಟಿದ್ದ ಎಂದು ಹೇಳಿದ್ದ.

ಇದನ್ನೂ ಓದಿ: ತಂಗಿ ಜೊತೆ ಅನೈತಿಕ ಸಂಬಂಧ ಶಂಕೆಗೆ ಹಂತಕನಾದ ಅಣ್ಣ: ಊಟ ಮಾಡ್ತಿದ್ದಾಗಲೇ ಯುವಕನ ಕೊಲೆ

ಆಗ ದಿಲೀಪ್ ಬೆನ್ನುಬಿದ್ದ ಪೊಲೀಸರು ಆತನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ‘ತನ್ನ ಬಳಿ ಹಣ ಇರಲಿಲ್ಲ ಬೈಕ್ ಇಎಂಐ ಕಟ್ಟಲು ಆಗುತ್ತಿರಲಿಲ್ಲ. ಆಕೆಗೆ ಹಣ ಕೇಳಿದೆ, ಕೊಡಲಿಲ್ಲ ಹೀಗಾಗಿ ಕೊಲೆ ಮಾಡಿದ್ದೇನೆ’ ಎಂದು ದಿಲೀಪ್ ಹೇಳಿದ್ದಾನೆ.

ಆರೋಪಿ ನ್ಯಾಯಾಂಗ ಬಂಧನಕ್ಕೆ: ಕಣ್ಣೀರಿಡುತ್ತಿರುವ ಕುಟುಂಬಗಳು

ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಆರೋಪಿಯ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಆತನನ್ನು ಹಿಂಡಲಗಾ ಜೈಲಿಗೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ. ಅನೈತಿಕ ಸಂಬಂಧ ಹಾಗೂ ಕ್ಷುಲ್ಲಕ ದುರಾಶೆಯಿಂದ ನಡೆದ ಈ ಹತ್ಯೆಯಿಂದಾಗಿ ಇತ್ತ ಅನ್ನಪೂರ್ಣಳ ಮಕ್ಕಳು, ಅತ್ತ ಆರೋಪಿಯ ಮಕ್ಕಳು ಅನಾಥವಾಗಿದ್ದು, ಎರಡೂ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us