ಜ್ಞಾನವಾಪಿ ಮಸೀದಿ-ವಿಶ್ವನಾಥ ದೇಗುಲ ವಿವಾದ: 10 ದಿನಗಳ ಒಳಗೆ ಅಫಿಡವಿಟ್ ಸಲ್ಲಿಸಲು ಪುರಾತತ್ವ ಇಲಾಖೆಗೆ ಅಲಹಬಾದ್ ಹೈಕೋರ್ಟ್ ಸೂಚನೆ
ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಶ್ರದ್ಧಾ ಚಿಹ್ನೆಗಳಿವೆ ಎಂದು ಹಿಂದೂಗಳು ವಾದಿಸುತ್ತಿದ್ದಾರೆ. ಅಂಥ ಯಾವುದೇ ವಿಗ್ರಹಗಳು ಇಲ್ಲ ಎಂದು ಮುಸ್ಲಿಮರು ಪ್ರತಿವಾದಿಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದೆ.
ಅಲಹಾಬಾದ್: ಕಾಶಿಯ ಜ್ಞಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೇಗುಲ (Gyanvapi-Kashi Vishwanath dispute) ವಿವಾದವು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರವಾಗಿದೆ. ವಿವಾದಿತ ಸ್ಥಳಕ್ಕೆ ಸಂಬಂಧಿಸಿದಂತೆ 10 ದಿನಗಳ ಒಳಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (Archaeological Survey of India – ASI) ಪ್ರಧಾನಿ ನಿರ್ದೇಶಕರು (Director General – DG) ಈ ಸಂಬಂಧ 10 ದಿನಗಳ ಒಳಗೆ ತಮ್ಮ ಅಫಿಡವಿಟ್ ದಾಖಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಸೂಚಿಸಿದೆ. ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಶ್ರದ್ಧಾ ಚಿಹ್ನೆಗಳಿವೆ ಎಂದು ಹಿಂದೂಗಳು ವಾದಿಸುತ್ತಿದ್ದಾರೆ. ಅಂಥ ಯಾವುದೇ ವಿಗ್ರಹಗಳು ಇಲ್ಲ ಎಂದು ಮುಸ್ಲಿಮರು ಪ್ರತಿವಾದಿಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಪ್ರಗತಿಯಲ್ಲಿದೆ.
ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರ ಎಂದು ನ್ಯಾಯಮೂರ್ತಿ ಪ್ರಕಾಶ್ ಪರ್ದೀಯಾ ಅಭಿಪ್ರಾಯಪಟ್ಟರು. ಈ ಮೊದಲು ಎಎಸ್ಐನ ಪ್ರಧಾನ ನಿರ್ದೇಶಕರು ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೆಚ್ಚು ವಿವರಗಳು ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ‘ಎರಡೂವರೆ ಪುಟಗಳ ಅಫಿಡವಿಟ್ನಲ್ಲಿ ಅಗತ್ಯ ಮಾಹಿತಿಗಳೇ ಇಲ್ಲ. ಇದೊಂದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರವಾಗಿರುವುದರಿಂದ ದೆಹಲಿಯಲ್ಲಿರುವ ಎಎಸ್ಐನ ಪ್ರಧಾನ ನಿರ್ದೇಶಕರೂ ವಿಸ್ತೃತ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ’ ಎಂದು ನ್ಯಾಯಾಲಯವು ಹೇಳಿದೆ.
ವಾರಾಣಸಿ ನ್ಯಾಯಾಲಯದ ತೀರ್ಪಿಗೆ ನೀಡಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ವಿಸ್ತರಿಸಿದೆ. ವಾರಾಣಸಿ ನ್ಯಾಯಾಲಯದಲ್ಲಿ ವಿಚಾರಣೆಯನ್ನು ನಿಲ್ಲಿಸಲು ಈ ತಡೆಯಾಜ್ಞೆ ಸೂಚನೆ ನೀಡಿದೆ. ಎಎಸ್ಐ ಮೂಲಕ ಸೆಪ್ಟೆಂಬರ್ 30ರ ಒಳಗೆ ಸಂಪೂರ್ಣ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಅಂಜುಮನ್ ಇಂತಜಾಮಿಯಾ ಮಸೀದಿ ಪರ ವಕೀಲರು 1991ರಲ್ಲಿ ವಾರಾಣಸಿ ನ್ಯಾಯಾಲಯದಲ್ಲಿ ನಡೆದ ಮೂಲ ಅರ್ಜಿ ವಿಚಾರಣೆಯ ಅಗತ್ಯವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನಿನ್ನೆ (ಆಗಸ್ಟ್ 30) ನಡೆದ ವಿಚಾರಣೆಯಲ್ಲಿ ವಾದಿ-ಪ್ರತಿವಾದಿಗಳು ‘ಪೂಜಾ ಸ್ಥಳಗಳ ಕಾಯ್ದೆ’ ಅನ್ವಯ ಒಂದು ಧರ್ಮಕ್ಕೆ ಸೇರಿದ ಸ್ಥಳವನ್ನು ಬದಲಿಸಲು ಅವಕಾಶವಿಲ್ಲ ಎಂದು ಹೇಳಿದೆ. ಅರ್ಜಿದಾರರು ಪೂಜಾ ಸ್ಥಳವನ್ನು ಬದಲಿಸಬೇಕೆಂದು ನ್ಯಾಯಾಲಯವನ್ನು ಕೋರಿಲ್ಲ ಎಂದು ವಕೀಲರು ವಾದಿಸಿದರು. ವಿವಾದಿತ ಸ್ಥಳವು (ಜ್ಞಾನವಾಪಿ ಮಸೀದಿ) ಪುರಾತನ ಕಾಲದಿಂದಲೂ ದೇಗುಲವೇ ಆಗಿತ್ತು. ಹೀಗಾಗಿ 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಅನ್ವಯಿಸುವುದು ಸರಿಯಅಗಲಾರದು. ಇದಕ್ಕೆ ಸಂಬಂಧಿಸಿದ ಪುರಾವೆಗಳನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಹಿಂದೂಗಳ ಪರ ವಕೀಲರು ಮನವಿ ಮಾಡಿದ್ದರು.
ಸಂವಿಧಾನದ 227ನೇ ಪರಿಚ್ಛೇದದ ಅಡಿಯಲ್ಲಿ ನ್ಯಾಯಾಲಯಕ್ಕೆ ಇರುವ ಅಧಿಕಾರವನ್ನು ವಕೀಲರು ತಮ್ಮ ವಾದದಲ್ಲಿ ಪ್ರಸ್ತಾಪಿಸಿದ್ದರು. ಈ ಪರಿಚ್ಛೇದವು ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಉನ್ನತ ನ್ಯಾಯಾಲಯಗಳ ಮಧ್ಯಪ್ರವೇಶಕ್ಕೆ ಹಲವು ನಿಯಮಗಳನ್ನು ವಿಧಿಸುತ್ತದೆ. ವಾರಾಣಸಿ ನ್ಯಾಯಾಲಯಕ್ಕೆ ವಿಚಾರಣೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ವಕೀಲರು ಈ ಮೂಲಕ ಕೋರಿದರು. ಆದರೆ ಈ ಕುರಿತು ತೀರ್ಪಿನಲ್ಲಿ ಹೈಕೋರ್ಟ್ ಯಾವ ಅಂಶವನ್ನೂ ಪ್ರಸ್ತಾಪಿಸಲಿಲ್ಲ. ಸೆಪ್ಟೆಂಬರ್ 12ರ ಒಳಗೆ ಅಗತ್ಯ ಮಾಹಿತಿಯೊಂದಿಗೆ ಅಫಿಡವಿಟ್ಗಳನ್ನು ಸಲ್ಲಿಸಬೇಕು ಎಂದಷ್ಟೇ ಹೇಳಿತು.
Published On - 4:15 pm, Wed, 31 August 22