ಕರ್ನಾಲ್: ಮಾಜಿ ಎಸ್ಡಿಎಂನ್ನು ರಜೆ ಮೇಲೆ ಕಳುಹಿಸಿ ತನಿಖೆಗೆ ಆದೇಶಿಸಿದ ಹರ್ಯಾಣ ಸರ್ಕಾರ; ರೈತರ ಪ್ರತಿಭಟನೆ ಅಂತ್ಯ
Karnal Farmers Protest: ರೈತ ಸಂಘಗಳೊಂದಿಗಿನ ಒಪ್ಪಂದದ ಪ್ರಕಾರ, "ಲಾಠಿಚಾರ್ಜ್ ನಂತರ ಸಾವನ್ನಪ್ಪಿದ ರೈತ ಸುಶೀಲ್ ಕಾಜಲ್ ಕುಟುಂಬದ ಇಬ್ಬರು ಸದಸ್ಯರಿಗೆ ಮಂಜೂರಾದ ಹುದ್ದೆಯ ಮೇಲೆ ಉದ್ಯೋಗವನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಕರ್ನಾಲ್: ಬಸ್ತಾರಾ ಟೋಲ್ ಪ್ಲಾಜಾದ (Bastara toll plaza) ರೈತರ ಮೇಲೆ ಆಗಸ್ಟ್ 28 ರಂದು ಪೊಲೀಸರ ಲಾಠಿಚಾರ್ಜ್ ಕುರಿತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಹರ್ಯಾಣ ಸರ್ಕಾರ ಶನಿವಾರ ಒಪ್ಪಿಕೊಂಡಿದೆ. ವಿಚಾರಣೆ ಮುಗಿಯುವವರೆಗೂ ಕರ್ನಾಲ್ ಎಸ್ ಡಿಎಂ ಆಯುಷ್ ಸಿನ್ಹಾ ಅವರನ್ನು ರಜೆ ಮೇಲೆ ಕಳುಹಿಸಲಾಗಿದೆ. ಈ ಮೂಲಕ ರೈತರು ಮತ್ತು ಕರ್ನಾಲ್ ಜಿಲ್ಲಾಡಳಿತದ ನಡೆ ಐದು ದಿನಗಳಿಂದ ನಡೆದು ಬಂದ ಬಿಕ್ಕಟ್ಟು ಅಂತ್ಯವಾಗಿದೆ. ರೈತ ಸಂಘಗಳೊಂದಿಗಿನ ಒಪ್ಪಂದದ ಪ್ರಕಾರ, “ಲಾಠಿಚಾರ್ಜ್ ನಂತರ ಸಾವನ್ನಪ್ಪಿದ ರೈತ ಸುಶೀಲ್ ಕಾಜಲ್ ಕುಟುಂಬದ ಇಬ್ಬರು ಸದಸ್ಯರಿಗೆ ಮಂಜೂರಾದ ಹುದ್ದೆಯ ಮೇಲೆ ಉದ್ಯೋಗವನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಲಾಠಿಚಾರ್ಜ್ ಪ್ರಕರಣದಲ್ಲಿ ಸಿನ್ಹಾ ಅವರನ್ನು ಅಮಾನತುಗೊಳಿಸಬೇಕು ಮತ್ತು ಆತನ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದರು. 2018 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಸಿನ್ಹಾ ಅವರು ಆಗಸ್ಟ್ 28 ನಿರತ ರೈತರನ್ನು ಥಳಿಸುವಂತೆ ಪೊಲೀಸರಿಗೆ ಆದೇಶಿಸಿದ್ದು, ಭದ್ರತಾ ಚೌಕಟ್ಟನ್ನು ಉಲ್ಲಂಘಿಸಲು ಯಾರಿಗೂ ಬಿಡಬೇಡಿ, ಉಲ್ಲಂಘಿಸಿದರೆ ರೈತರ ತಲೆ ಒಡೆಯಿರಿ ಎಂದು ಹೇಳುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಕರ್ನಾಲ್ ಮಿನಿ-ಸೆಕ್ರೆಟರಿಯೇಟ್ ಹೊರಗೆ ರೈತರು ನಡೆಸಿದ ಧರಣಿಯು ಸರ್ಕಾರದಲ್ಲಿ ಎಚ್ಚರಿಕೆಯ ಗಂಟೆಯಾಗಿತ್ತು. ಯಾಕೆಂದರೆ ಕರ್ನಾಲ್ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಕ್ಷೇತ್ರವಾಗಿದೆ. ಖಟ್ಟರ್ ಮತ್ತು ರಾಜ್ಯ ಬಿಜೆಪಿ ನಾಯಕರು ಆಗಸ್ಟ್ 28 ರಂದು ಕರ್ನಾಲ್‌ನಲ್ಲಿ ಸಭೆ ನಡೆಸಿ ಮುಂಬರುವ ಪಂಚಾಯತ್ ಚುನಾವಣೆಗೆ ಪಕ್ಷದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾಗ ಪೊಲೀಸರು ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದಾಳಿ ನಡೆಸಿದ್ದರು.
Haryana govt orders probe into Aug 28 lathicharge, agrees to give jobs to kin of deceased Karnal farmer
Read @ANI Story | https://t.co/OAmTAVKwCh#KarnalProtest #FarmersProtest pic.twitter.com/bNwAAHPC2W
— ANI Digital (@ani_digital) September 11, 2021
ಗುರ್ನಾಮ್ ಸಿಂಗ್ ಚಾದುನಿ ನೇತೃತ್ವದ ರೈತ ಸಂಘಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದರ್ ಸಿಂಗ್ ನೇತೃತ್ವದ ಸರ್ಕಾರದ ಕಡೆಯಿಂದ ನಡೆದ ವ್ಯಾಪಕ ಮಾತುಕತೆಯ ನಂತರ ಈ ಬಿಕ್ಕಟ್ಟು ಕೊನೆಗೊಂಡಿತು. ನಂತರ ಅವರು ಪತ್ರಿಕಾಗೋಷ್ಠಿ ನಡೆಸಿ ಒಪ್ಪಂದವನ್ನು ಘೋಷಿಸಿದರು.
“ಕರ್ನಾಲ್‌ನ ಜಿಲ್ಲಾಡಳಿತವು ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸೌಹಾರ್ದಯುತ ವಾತಾವರಣದಲ್ಲಿ ಪ್ರತಿಭಟನ ನಿರತ ರೈತರೊಂದಿಗೆ ಮಾತುಕತೆ ನಡೆಸುತ್ತಿತ್ತು, ಇದರ ಪರಿಣಾಮವಾಗಿ ಇಂದು ಎರಡೂ ಕಡೆಯವರ ನಡುವೆ ಪರಸ್ಪರ ಒಪ್ಪಂದಕ್ಕೆ ಬರಲಾಯಿತು. ರೈತರು ನಮ್ಮ ಕುಟುಂಬದವರಂತೆ. ಆಗಸ್ಟ್ 28 ರಂದು ಬಸ್ತಾರಾ ಟೋಲ್ (ಪ್ಲಾಜಾ) ನಲ್ಲಿ ಪೊಲೀಸರ ಲಾಠಿ ಚಾರ್ಜ್ ಬಗ್ಗೆ ತನಿಖೆ ನಡೆಸಬೇಕು ಮತ್ತು ರೈತ ಸುಶೀಲ್ ಕಾಜಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳಿಂದ ಬೇಡಿಕೆ ಇತ್ತು. ಕರ್ನಾಲ್ ಜಿಲ್ಲಾಡಳಿತ ಮತ್ತು ರೈತ ಸಂಘದ ಮುಖಂಡರ ನಡುವೆ ನಾಲ್ಕು ಸುತ್ತಿನ ಮಾತುಕತೆ ನಡೆಯಿತು. ಶುಕ್ರವಾರ ತಡರಾತ್ರಿ ಜಿಲ್ಲಾಡಳಿತ ಮತ್ತು ರೈತರ ನಡುವೆ ಒಪ್ಪಂದಕ್ಕೆ ಬರಲಾಯಿತು ಎಂದು ದೇವೇಂದರ್ ಸಿಂಗ್ ಹೇಳಿದ್ದಾರೆ.
“ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರು ಲಾಠಿಚಾರ್ಜ್ ಪ್ರಕರಣದ ವಿವರವಾದ ತನಿಖೆ ನಡೆಸಲು ಒಪ್ಪಲಾಗಿದೆ. ಈ ತನಿಖೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಮತ್ತು ಈ ಸಮಯದಲ್ಲಿ ಮಾಜಿ ಎಸ್‌ಡಿಎಂ ಆಯುಷ್ ಸಿನ್ಹಾ ರಜೆಯ ಮೇಲೆ ಇರುತ್ತಾರೆ. ಇದರೊಂದಿಗೆ, ಮೃತ ರೈತರ ಕುಟುಂಬದ ಇಬ್ಬರು ಸದಸ್ಯರಿಗೆ ಮಂಜೂರಾದ ಹುದ್ದೆಯ ಮೇಲೆ ಒಂದು ವಾರದೊಳಗೆ ಕೆಲಸ ನೀಡಲಾಗುವುದು ಎಂದು ಸಿಂಗ್ ಹೇಳಿದರು.
“ಆಡಳಿತಾಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದವು ಮತ್ತು ಸರ್ಕಾರವು ನಂತರ ರೈತರ ಬೇಡಿಕೆಯನ್ನು ಅಂಗೀಕರಿಸಿತು. ಲಾಠಿಚಾರ್ಜ್ ಪ್ರಕರಣದ ತನಿಖೆ ಮತ್ತು ಮೃತ ರೈತನ ಸಂಬಂಧಿಕರಿಗೆ ಉದ್ಯೋಗ ನೀಡುವ ಬೇಡಿಕೆಯನ್ನು ಒಪ್ಪಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನಡೆದ ಚರ್ಚೆಗಳಲ್ಲಿ ಎಲ್ಲಾ ಸಂಘಟನೆಗಳು ಭಾಗಿಯಾಗಿದ್ದವು ಮತ್ತು ಕರ್ನಾಲ್ ಮಿನಿ-ಸೆಕ್ರೆಟರಿಯೇಟ್ ಮುಂದೆ ನಡೆಯುತ್ತಿರುವ ಧರಣಿಯನ್ನು ಕೊನೆಗೊಳಿಸಲು ಎಲ್ಲರೂ ಒಪ್ಪಿಕೊಂಡರು ಎಂದು ಚಾದುನಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Farmers Protest ಕರ್ನಾಲ್ ಮಾಜಿ ಎಸ್‌ಡಿಎಮ್ ವಿರುದ್ಧ ಕ್ರಮದ ಕುರಿತು ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಸಿದ ರೈತರು
(Haryana agreed to conduct a probe Five-day standoff between farmers and the Karnal district administration ends)