
ನವದೆಹಲಿ, ನವೆಂಬರ್ 28: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಈಗ ದಕ್ಷಿಣ ಭಾರತದಿಂದ ಬಹುಮತದ ಬೆಂಬಲ ದೊರೆತಂತೆ ಕಾಣುತ್ತಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶದ ಒಟ್ಟು 129 ಲೋಕಸಭಾ ಸಂಸದರಲ್ಲಿ ಸುಮಾರು 75 ಸಂಸದರು ಈಗ ವಿಧೇಯಕದ ಪರವಾಗಿ ಮತ ಚಲಾಯಿಸುವ ನಿರೀಕ್ಷೆಯಿದೆ. ಇದು ಸುಮಾರು ಶೇ. 58ರಷ್ಟಾಗುತ್ತದೆ. ಕಳೆದ ಏಪ್ರಿಲ್ನಲ್ಲಿ ನಡೆದ ಬೆಳವಣಿಗೆಗೆ ಹೋಲಿಸಿದರೆ ಇದು ಭಾರೀ ದೊಡ್ಡ ಬದಲಾವಣೆಯಾಗಿದೆ; ಆ ವೇಳೆ ದಕ್ಷಿಣ ಭಾರತದ 131 ಸಂಸದರಲ್ಲಿ (ಪುದುಚೇರಿ ಮತ್ತು ಲಕ್ಷದ್ವೀಪ ಸೇರಿದಂತೆ) 75 ಮಂದಿ ಹಿಂದಿನ ತಿದ್ದುಪಡಿಯ ವಿರುದ್ಧ ಮತ ಚಲಾಯಿಸಿದ್ದರು ಮತ್ತು 53 ಮಂದಿ ಪರವಾಗಿ ಮತ ಹಾಕಿದ್ದರು. ಹಾಗಾದರೆ, ಕ್ಷೇತ್ರ ಮರುವಿಂಗಡಣೆಗೆ ಬೆಂಬಲ ಪಡೆಯಲು ನರೇಂದ್ರ ಮೋದಿ ಸರ್ಕಾರ ದಕ್ಷಿಣ ಭಾರತದ ಪಕ್ಷಗಳ ಮನವೊಲಿಸಿದ್ದು ಹೇಗೆ? ಇಲ್ಲಿದೆ ವಿವರ.
ಯಾವ ಪಕ್ಷಗಳಿಂದ ಬೆಂಬಲ?:
ವಿಧೇಯಕವನ್ನು ಬೆಂಬಲಿಸುತ್ತಿರುವ ದಕ್ಷಿಣ ಭಾರತದ 8 ಪಕ್ಷಗಳೆಂದರೆ, 5 ಎನ್ಡಿಎ ಮಿತ್ರಪಕ್ಷಗಳಾದ ಬಿಜೆಪಿ, ಆಂಧ್ರದ ತೆಲುಗು ದೇಶಂ ಪಕ್ಷ (ಟಿಡಿಪಿ), ಆಂಧ್ರದ ಜನಸೇನಾ ಪಕ್ಷ (ಜೆಎಸ್ಪಿ), ಕರ್ನಾಟಕದ ಜೆಡಿಎಸ್, ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿ. ಹಾಗೇ, 3 ಪ್ರಾದೇಶಿಕ ಪಕ್ಷಗಳಾದ ತಮಿಳುನಾಡಿನ ಡಿಎಂಕೆ, ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷ, ತೆಲಂಗಾಣದ ಬಿಆರ್ಎಸ್ ಪಕ್ಷ.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ: ಮೋದಿ ಸರ್ಕಾರದ ಬಲ ಹೆಚ್ಚಿಸಿದ ಸ್ಟಾಲಿನ್ ಪಕ್ಷದ ನಿರ್ಧಾರ
ಎಲ್ಲಾ ರಾಜ್ಯಗಳಿಗೆ ಏಕರೂಪವಾಗಿ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವ ಭರವಸೆಯನ್ನು ವಿಧೇಯಕದಲ್ಲಿ ಸೇರಿಸಿರುವುದರಿಂದ ಈ ಹಿಂದೆ ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ ವ್ಯಕ್ತಪಡಿಸಿದ್ದ ಪಕ್ಷಗಳೂ ಇದೀಗ ಬೆಂಬಲ ಘೋಷಿಸಿವೆ. ಇದು ನರೇಂದ್ರ ಮೋದಿ- ಅಮಿತ್ ಶಾ ಅವರ ಮಾಸ್ಟರ್ಪ್ಲಾನ್ ಎನ್ನಬಹುದು.
ದಕ್ಷಿಣದ ಪಕ್ಷಗಳ ಮನವೊಲಿಸಲು ಮೋದಿ ಸರ್ಕಾರ ಅನುಸರಿಸಿದ ತಂತ್ರಗಳೇನು?:
ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಹೆಚ್ಚಾಗಿ ದಕ್ಷಿಣ ಭಾರತದ ರಾಜಕೀಯ ಪ್ರಭಾವ ಕಡಿಮೆಯಾಗುತ್ತದೆ ಎಂಬುದು ದಕ್ಷಿಣದ ರಾಜ್ಯಗಳ ಪ್ರಮುಖ ಆತಂಕವಾಗಿತ್ತು. ಇದನ್ನು ನಿವಾರಿಸಲು, ಕೇಂದ್ರ ಸಚಿವ ಸಂಪುಟವು ವಿಧೇಯಕಕ್ಕೆ ತಿದ್ದುಪಡಿ ತಂದು ಎಲ್ಲಾ ರಾಜ್ಯಗಳ ಲೋಕಸಭಾ ಮತ್ತು ವಿಧಾನಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಸೂತ್ರವನ್ನು ಅಳವಡಿಸಿದೆ. ಇದರಿಂದ ದಕ್ಷಿಣದ ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳು 130ರಿಂದ ಸುಮಾರು 195ಕ್ಕೆ ಏರಿಕೆಯಾಗಲಿವೆ. ಹಾಗೇ, 2051ರವರೆಗೆ ಸಂಸತ್ತಿನಲ್ಲಿ ಪ್ರತಿ ರಾಜ್ಯದ ಪ್ರಸ್ತುತ ಸ್ಥಾನಗಳ ಪಾಲಿನಲ್ಲಿ (ಶೇ. 24ರಷ್ಟು ದಕ್ಷಿಣದ ಪಾಲು) ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸಂವಿಧಾನ (132ನೇ ತಿದ್ದುಪಡಿ) ವಿಧೇಯಕದಲ್ಲಿ ಖಾತ್ರಿಪಡಿಸಲಾಗಿದೆ. ಇದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಬಿಆರ್ಎಸ್ ನಾಯಕರ ಪ್ರಮುಖ ಬೇಡಿಕೆಯಾಗಿತ್ತು.
ಇದನ್ನೂ ಓದಿ: ‘ಅಧಿಕಾರ ಉಳಿಸಿಕೊಳ್ಳುವ ಹುನ್ನಾರ’; ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
2029ರ ಲೋಕಸಭಾ ಚುನಾವಣೆಗೂ ಮುನ್ನವೇ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ಈ ಕ್ಷೇತ್ರ ಪುನರ್ವಿಂಗಡಣೆ ಅಗತ್ಯವಾಗಿದೆ ಎಂಬ ಕೇಂದ್ರದ ನಿಲುವನ್ನು ಪ್ರಾದೇಶಿಕ ಪಕ್ಷಗಳು ಒಪ್ಪಿಕೊಂಡಿವೆ. ಮಹಿಳಾ ಮೀಸಲಾತಿಯನ್ನು ವಿರೋಧಿಸಿದರೆ ಮಹಿಳಾ ಮತದಾರರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ರಾಜಕೀಯ ಲೆಕ್ಕಾಚಾರವೂ ಪ್ರಾದೇಶಿಕ ಪಕ್ಷಗಳ ನಿರ್ಧಾರದ ಹಿಂದಿದೆ ಎಂದು ವಿಶ್ಲೇಷಿಸಲಾಗಿದೆ.
ನವೆಂಬರ್ 30ರಿಂದ ವಿಶೇಷ ಅಧಿವೇಶನ:
ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕವನ್ನು ಕೈಗೆತ್ತಿಕೊಳ್ಳಲಾಗುವುದು. ಆಗಸ್ಟ್ 13ರಂದು ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ