ಮೀಟಿಂಗ್ ನಡೆಯುವಾಗಲೇ ಮಾನಸಿಕ ಒತ್ತಡದಿಂದ ಆಫೀಸ್ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಟೆಕ್ಕಿ
'ನಾನು ಜೀವನದಲ್ಲಿ ಎಲ್ಲೆಡೆ ವಿಫಲನಾಗಿದ್ದೇನೆ' ಎಂದು ಪುಣೆಯ ಟೆಕ್ಕಿ ಆಫೀಸ್ ಮೀಟಿಂಗ್ ಮಧ್ಯದಲ್ಲೇ ಎದ್ದು ಹೋಗಿ ಕಟ್ಟಡದಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ನಾಸಿಕ್ ಮೂಲದ ವಾಕಾಡ್ ನಿವಾಸಿ ಪಿಯೂಷ್ ಕವಾಡೆ ಎಂದು ಗುರುತಿಸಲಾಗಿದೆ. ಹಿಂಜಾವಾಡಿ ಪೊಲೀಸ್ ಠಾಣೆಯ ಮುಖ್ಯಸ್ಥರಾಗಿರುವ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಾಜಿ ಪಂಧಾರೆ ಅವರ ಪ್ರಕಾರ, ಕವಾಡೆ ಕಳೆದ ವರ್ಷ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಪುಣೆ, ಜುಲೈ 29: ಒಂದು ದುರಂತ ಘಟನೆಯಲ್ಲಿ 23 ವರ್ಷದ ವ್ಯಕ್ತಿಯೊಬ್ಬರು ಹಿಂಜಾವಾಡಿ ಹಂತ 1ರಲ್ಲಿರುವ ಅಟ್ಲಾಸ್ ಕಾಪ್ಕೊ ಜಿಇಸಿಐಎಯ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀಟಿಂಗ್ ಸಮಯದಲ್ಲಿ ಮಾನಸಿಕ ಒತ್ತಡ (Mental Stress) ಅನುಭವಿಸಿದ ಟೆಕ್ಕಿ, ಹಿಂಜಾವಾಡಿಯ ಕಚೇರಿಯ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ಪುಣೆಯ ಹಿಂಜಾವಾಡಿ ಐಟಿ ಪಾರ್ಕ್‌ನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಐಟಿ ಎಂಜಿನಿಯರ್ ಸೋಮವಾರ ಬೆಳಿಗ್ಗೆ ತಮ್ಮ ಕಚೇರಿ ಕಟ್ಟಡದ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪಿಯೂಷ್ ಅಶೋಕ್ ಕವಾಡೆ ಎಂದು ಗುರುತಿಸಲಾಗಿದ್ದು, ಹಿಂಜಾವಾಡಿ ಒಂದನೇ ಹಂತದ ಅಟ್ಲಾಸ್ ಕಾಪ್ಕೊದಲ್ಲಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಉದ್ಯೋಗದಲ್ಲಿದ್ದರು.
ಈ ಘಟನಾ ಸ್ಥಳದಲ್ಲಿ ಕೈಬರಹದ ಸೂಸೈಡ್ ನೋಟ್ ಪತ್ತೆಯಾಗಿದೆ. ಪಿಯೂಷ್ ತೀವ್ರ ವಿಷಾದ ಮತ್ತು ವೈಯಕ್ತಿಕ ವೈಫಲ್ಯದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. “ನಾನು ಜೀವನದಲ್ಲಿ ಎಲ್ಲೆಡೆ ವಿಫಲನಾಗಿದ್ದೇನೆ. ನನ್ನನ್ನು ಕ್ಷಮಿಸಿ” ಎಂದು ಅವರು ಬರೆದಿದ್ದಾರೆ. ಮೂಲತಃ ನಾಸಿಕ್‌ನವರಾದ ಪಿಯೂಷ್ ಮೀಟಿಂಗ್ನಲ್ಲಿ ಭಾಗವಹಿಸಿದ್ದಾಗ ಎದೆನೋವು ಎಂದು ಹೇಳಿ ಇದ್ದಕ್ಕಿದ್ದಂತೆ ಕ್ಷಮೆ ಯಾಚಿಸಿ ಟೆರೇಸ್‌ಗೆ ಹೋಗಿ ಈ ಭೀಕರ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಸೆಂಟ್ರಲ್ ಇಂಟಲಿಜೆನ್ಸ್ ಸಿಬ್ಬಂದಿ ಆತ್ಮಹತ್ಯೆ, ಮಗನ ತಿಥಿ ದಿನವೇ ತಾಯಿ ನೇಣಿಗೆ ಶರಣು!
ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಘಟನೆ ಸೋಮವಾರ ಬೆಳಿಗ್ಗೆ 10.30ರ ಸುಮಾರಿಗೆ ನಡೆದಿದ್ದು, ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. “ಅವರು ಎದೆನೋವು ಎಂದು ಹೇಳಿಕೊಂಡು ಸಭೆಯಿಂದ ಅರ್ಧದಲ್ಲೇ ಹೊರಟರು. ಅದಾದ ಕೆಲವೇ ನಿಮಿಷಗಳ ನಂತರ ಏಳನೇ ಮಹಡಿಯಿಂದ ಹಾರಿದರು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!
“ನಾವು ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಟಿಪ್ಪಣಿಯಲ್ಲಿ ಕೆಲಸದ ಸ್ಥಳದ ಸಮಸ್ಯೆಗಳನ್ನು ಉಲ್ಲೇಖಿಸದಿದ್ದರೂ, ಈ ಕೃತ್ಯಕ್ಕೆ ಕಾರಣವಾಗಿರಬಹುದಾದ ಎಲ್ಲಾ ಸಂಭಾವ್ಯ ಕಾರಣಗಳನ್ನು ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




