5 ವರ್ಷಗಳ ಬಳಿಕ ಅಕ್ಟೋಬರ್ ಅಂತ್ಯದಿಂದ ಭಾರತ-ಚೀನಾ ನಡುವೆ ನೇರ ವಿಮಾನ ಸೇವೆಗಳು ಆರಂಭ
ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧ ಕೊಂಚ ಸುಧಾರಿಸುತ್ತಿದೆ. ಇದೀಗ ಭಾರತ ಮತ್ತು ಚೀನಾ ನಡುವೆ ಮತ್ತೆ ನೇರ ವಿಮಾನ ಸೇವೆಗಳು ಆರಂಭವಾಗಲಿವೆ. ಈ ತಿಂಗಳ ಅಂತ್ಯದ ವೇಳೆಗೆ ವಿಮಾನ ಸೇವೆಗಳು ಮರುಆರಂಭವಾಗಲಿವೆ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನವದೆಹಲಿ, ಅಕ್ಟೋಬರ್ 2: ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಭಾರತ ಮತ್ತು ಚೀನಾ (China) ಎರಡೂ ದೇಶಗಳ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ (MEA) ಪ್ರಕಟಿಸಿದೆ. ಇದು ಭಾರತ ಮತ್ತು ಚೀನಾ ನಡುವಿನ ಸುಗಮ ಸಂಪರ್ಕಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.
“ಚಳಿಗಾಲದ ವೇಳಾಪಟ್ಟಿಗೆ ಅನುಗುಣವಾಗಿ ಭಾರತ ಮತ್ತು ಚೀನಾದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಸಂಪರ್ಕಿಸುವ ನೇರ ವಿಮಾನ ಸೇವೆಗಳು ಅಕ್ಟೋಬರ್ 2025ರ ಅಂತ್ಯದ ವೇಳೆಗೆ ಪುನರಾರಂಭಗೊಳ್ಳಬಹುದು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ’; ವಿದೇಶಿ ನೆಲದಲ್ಲಿ ಮತ್ತೆ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಈ ವರ್ಷದ ಆರಂಭದಿಂದ, ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ಎರಡೂ ದೇಶಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ಎರಡೂ ದೇಶಗಳ ನಡುವೆ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಮತ್ತು ಪರಿಷ್ಕೃತ ವಾಯು ಸೇವೆಗಳ ಒಪ್ಪಂದದ ಕುರಿತು ತಾಂತ್ರಿಕ ಮಟ್ಟದ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
“ನಾಗರಿಕ ವಿಮಾನಯಾನ ಅಧಿಕಾರಿಗಳ ಈ ಒಪ್ಪಂದವು ಭಾರತ ಮತ್ತು ಚೀನಾ ನಡುವಿನ ಜನರಿಂದ ಜನರಿಗೆ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಇದು ದ್ವಿಪಕ್ಷೀಯ ವಿನಿಮಯವನ್ನು ಕ್ರಮೇಣ ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ; ದುರ್ಗಾ ವಿಸರ್ಜನೆ ಮುಗಿಸಿ ಮರಳುತ್ತಿದ್ದ ಟ್ರ್ಯಾಕ್ಟರ್ ನದಿಗೆ ಬಿದ್ದು 11 ಜನ ಸಾವು
ಭಾರತ ಮತ್ತು ಚೀನಾ ನಡುವಿನ ಒಪ್ಪಂದದ ಬಗ್ಗೆ MEA ದೃಢಪಡಿಸಿದ ಬೆನ್ನಲ್ಲೇ ಭಾರತ ಮತ್ತು ಚೀನಾ ನಡುವೆ ನೇರ ವಿಮಾನಗಳನ್ನು ಪುನರಾರಂಭಿಸುವುದಾಗಿ ಇಂಡಿಗೋ ವಿಮಾನ ಸಂಸ್ಥೆ ಘೋಷಿಸಿತು. “ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆಗಳ ನಂತರ, ಇಂಡಿಗೋ ಚೀನಾದ ಮುಖ್ಯ ಭೂಭಾಗಕ್ಕೆ ಸೇವೆಗಳನ್ನು ಪುನರಾರಂಭಿಸಲಿದೆ. 2025ರ ಅಕ್ಟೋಬರ್ 26ರಿಂದ ಕೋಲ್ಕತ್ತಾದಿಂದ ಗುವಾಂಗ್‌ಝೌ (CAN)ಗೆ ನೇರ ವಿಮಾನ ಸೇವೆಯನ್ನು ಆರಂಭಿಸಲಾಗುವುದು” ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Thu, 2 October 25




