ಅಮೆರಿಕದ ಸರಕುಗಳ ಮೇಲೆ ಭಾರತವೂ ಶೇ.50ರಷ್ಟು ಸುಂಕ ವಿಧಿಸಬೇಕು; ಟ್ರಂಪ್ ವಿರುದ್ಧ ಶಶಿ ತರೂರ್ ಕಿಡಿ

ಶಶಿ ತರೂರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 'ಯಾವುದೇ ದೇಶ ಭಾರತಕ್ಕೆ ಈ ರೀತಿ ಬೆದರಿಕೆ ಹಾಕಲು ಸಾಧ್ಯವಿಲ್ಲ, ನಾವು ಕೂಡ ಅಮೆರಿಕದ ಸರಕುಗಳ ಮೇಲೆ ಶೇ. 50ರಷ್ಟು ಸುಂಕಗಳನ್ನು ವಿಧಿಸಬೇಕು' ಎಂದು ಶಶಿ ತರೂರ್ ಟೀಕಿಸಿದ್ದಾರೆ. ಅಮೆರಿಕದ ಸರಕುಗಳ ಮೇಲಿನ ನಮ್ಮ ಸರಾಸರಿ ಸುಂಕಗಳು ಶೇ.17ರಷ್ಟಿದ್ದು, ಟ್ರಂಪ್ ತನ್ನ ಸುಂಕಗಳನ್ನು ಹಿಂತೆಗೆದುಕೊಳ್ಳದಿದ್ದರೆ ಅದನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.

ಅಮೆರಿಕದ ಸರಕುಗಳ ಮೇಲೆ ಭಾರತವೂ ಶೇ.50ರಷ್ಟು ಸುಂಕ ವಿಧಿಸಬೇಕು; ಟ್ರಂಪ್ ವಿರುದ್ಧ ಶಶಿ ತರೂರ್ ಕಿಡಿ
Shashi Tharoor

Updated on: Aug 07, 2025 | 4:44 PM

ನವದೆಹಲಿ, ಆಗಸ್ಟ್ 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಟೀಕಿಸಿದ್ದಾರೆ. ಟ್ರಂಪ್ ಅವರನ್ನು ಟೀಕಿಸಿದ ಶಶಿ ತರೂರ್, “ಯಾವುದೇ ದೇಶವು ಭಾರತವನ್ನು ಹೀಗೆ ಬೆದರಿಸಲು ಸಾಧ್ಯವಿಲ್ಲ. ನಾವು ಅಮೆರಿಕದ ಆಮದುಗಳ ಮೇಲೆ ಹೆಚ್ಚುವರಿಯಾಗಿ ಶೇ.50ರಷ್ಟು ಸುಂಕ ವಿಧಿಸಬೇಕು. ಇದು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ” ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಆಡಳಿತದ ಶೇ.25ರಷ್ಟು ಸುಂಕಗಳ ನಿಯಮ ಜಾರಿಗೆ ಬಂದ ನಂತರ ಭಾರತವೂ ಅಮೆರಿಕ ನಿರ್ಮಿತ ಸರಕುಗಳ ಮೇಲಿನ ಸುಂಕವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುವ ಕಾರಣದಿಂದಾಗಿ ಟ್ರಂಪ್ ವಿಧಿಸಿದ ಹೆಚ್ಚುವರಿ ಶೇ.25ರಷ್ಟು ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಶಶಿ ತರೂರ್ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತಿರುವನಂತಪುರಂ ಸಂಸದ ಶಶಿ ತರೂರ್ ಭಾರತ ಅಮೆರಿಕದ ಬೆದರಿಕೆಗಳಿಗೆ ಹೆದರಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಜವಾಯ್ತು ಟ್ರಂಪ್ ಬೆದರಿಕೆ; ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕಾ!

“ನಾವು ಅಮೆರಿಕದ ಮೇಲಿನ ಸುಂಕ ಹೆಚ್ಚಿಸಿದರೆ ಅದು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಏಕೆಂದರೆ ನಾವು ಅವರೊಂದಿಗೆ 90 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರವನ್ನು ಹೊಂದಿದ್ದೇವೆ. ಎಲ್ಲವೂ 50% ಹೆಚ್ಚು ದುಬಾರಿಯಾದರೆ ಖರೀದಿದಾರರು ಭಾರತೀಯ ವಸ್ತುಗಳನ್ನು ಏಕೆ ಖರೀದಿಸಬೇಕು ಎಂದು ಯೋಚಿಸುತ್ತಾರೆ. ಅವರು ಹೀಗೆ ಮಾಡಿದರೆ ನಾವು ಅಮೆರಿಕದ ರಫ್ತಿನ ಮೇಲೆ 50% ಸುಂಕವನ್ನು ವಿಧಿಸಬೇಕು. ಯಾವುದೇ ದೇಶವು ನಮ್ಮನ್ನು ಈ ರೀತಿ ಬೆದರಿಸುವುದು ಸರಿಯಲ್ಲ” ಎಂದು ಶಶಿ ತರೂರ್ ಹೇಳಿದ್ದಾರೆ.


ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹಸಿಸುಳ್ಳುಗಳು; ಅಮೆರಿಕಕ್ಕೆ ಭಾರತ ದೊಡ್ಡ ಸುಂಕ ವಿಧಿಸುತ್ತಿದೆಯಾ? ಇಲ್ಲಿದೆ ಸತ್ಯಾಂಶ

“ಅಮೆರಿಕನ್ ಸರಕುಗಳ ಮೇಲಿನ ನಮ್ಮ ಸರಾಸರಿ ಸುಂಕ ಶೇ. 17. ಅಮೆರಿಕ ಸುಂಕವನ್ನು ಹೆಚ್ಚಿಸಿರುವಾಗ ನಾವು ಶೇ. 17ಕ್ಕೆ ಏಕೆ ನಿಲ್ಲಿಸಬೇಕು? ನಾವು ಅದನ್ನು ಶೇ. 50ಕ್ಕೆ ಹೆಚ್ಚಿಸಬೇಕು. ಅಮೆರಿಕ ನಮ್ಮ ಸಂಬಂಧವನ್ನು ಗೌರವಿಸುವುದಿಲ್ಲವೇ? ಭಾರತ ಅವರಿಗೆ ಮುಖ್ಯವಲ್ಲದಿದ್ದರೆ, ಅವರು ನಮಗೂ ಮುಖ್ಯವಲ್ಲ ಎಂಬುದನ್ನು ನಾವು ಕೇಳಬೇಕಾಗಿದೆ” ಎಂದು ಶಶಿ ತರೂರ್ ಹೇಳಿದ್ದಾರೆ.

ಟ್ರಂಪ್ ಅವರ ಆದೇಶವು ಭಾರತೀಯ ಸರಕುಗಳ ಆಮದಿನ ಮೇಲಿನ ಒಟ್ಟು ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದೆ. ಇದು ಚೀನಾದ ಮೇಲಿನ ಸುಂಕಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಪಾಕಿಸ್ತಾನದ ಮೇಲಿನ ಸುಂಕಕ್ಕಿಂತ ಶೇ. 21ರಷ್ಟು ಹೆಚ್ಚು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Thu, 7 August 25