Bhargavastra: ಭಾರತದಿಂದ ಭಾರ್ಗವಾಸ್ತ್ರ ಪರೀಕ್ಷೆ; ಡ್ರೋನ್​​ಗಳನ್ನು ಚಿಂದಿ ಉಡಾಯಿಸಲು ಭಾರತಕ್ಕೆ ಹೊಸ ಶಕ್ತಿ

Bhargavastra, an anti-drone system developed by Solar Defence: ಡ್ರೋನ್ ಸಮೂಹವನ್ನು ನಾಶ ಮಾಡಲು ಭಾರತವು ಮತ್ತೊಂದು ಪ್ರಬಲ ಆ್ಯಂಟಿ ಡ್ರೋನ್ ಸಿಸ್ಟಂ ಅಭಿವೃದ್ಧಿಪಡಿಸಿದೆ. ಸೋಲಾರ್ ಡಿಫೆನ್ಸ್ ಎನ್ನುವ ಕಂಪನಿ ಇದನ್ನು ನಿರ್ಮಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಆ್ಯಂಟಿ ಡ್ರೋನ್ ಸಿಸ್ಟಂಗಳ ಸಾಲಿಗೆ ಭಾರ್ಗವಾಸ್ತ್ರ ಹೊಸ ಸೇರ್ಪಡೆ. ಡಿಆರ್​​ಡಿಒ, ಝೆನ್ ಟೆಕ್ನಾಲಜಿ ಇತ್ಯಾದಿ ಹಲವು ಸಂಸ್ಥೆಗಳು ಆ್ಯಂಟಿ-ಡ್ರೋನ್ ಸಿಸ್ಟಂ ನಿರ್ಮಿಸಬಲ್ಲುವಾಗಿವೆ.

Bhargavastra: ಭಾರತದಿಂದ ಭಾರ್ಗವಾಸ್ತ್ರ ಪರೀಕ್ಷೆ; ಡ್ರೋನ್​​ಗಳನ್ನು ಚಿಂದಿ ಉಡಾಯಿಸಲು ಭಾರತಕ್ಕೆ ಹೊಸ ಶಕ್ತಿ
ಭಾರ್ಗವಾಸ್ತ್ರ

Updated on: May 14, 2025 | 5:21 PM

ನವದೆಹಲಿ, ಮೇ 14: ಭಾರತವು ಕಡಿಮೆ ವೆಚ್ಚದಲ್ಲಿ ದೇಶೀಯವಾಗಿ ಡ್ರೋನ್ ನಿಗ್ರಹ ಅಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಭಾರ್ಗವಾಸ್ತ್ರ (Bhargavastra) ಎಂದು ಕರೆಯಲಾಗುವ ಈ ಸಿಸ್ಟಂ ಅನ್ನು ಒಡಿಶಾದ ಗೋಪಾಲಪುರ್ ಬಳಿ ಭಾರತ ಇಂದು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಲಿಮಿಟೆಡ್ (Solar Defense and Aerospace Ltd) ಎನ್ನುವ ಖಾಸಗಿ ಕಂಪನಿ ಈ ಆ್ಯಂಟಿ-ಡ್ರೋನ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದ್ದು, ಡ್ರೋನ್​​ಗಳ ಗುಂಪನ್ನು (drone swarms) ನಿಗ್ರಹಿಸಲು ಪರಿಣಾಮಕಾರಿ ಎನಿಸುವ ನಿರೀಕ್ಷೆ ಇದೆ.

ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನದಿಂದ ನೂರಾರು ಡ್ರೋನ್​​ಗಳನ್ನು ಭಾರತಕ್ಕೆ ನುಗ್ಗಿಸಲಾಗಿತ್ತು. ಭಾರತದ ಪ್ರಬಲ ರಕ್ಷಣಾ ಕೋಟೆಯನ್ನು ಪರೀಕ್ಷಿಸಲು ಈ ಡ್ರೋನ್​​ಗಳನ್ನು ಬಳಸಲಾಗಿತ್ತು. ರಷ್ಯಾ-ಉಕ್ರೇನ್ ಯುದ್ಧದಲ್ಲೂ ಡ್ರೋನ್​​ಗಳನ್ನು ಯಥೇಚ್ಛವಾಗಿ ಬಳಸಲಾಗಿದೆ. ಉಕ್ರೇನ್​​ನ ಡ್ರೋನ್​​ಗಳು ರಷ್ಯನ್ ಮಿಲಿಟರಿಗೆ ದೊಡ್ಡ ತಲೆನೋವೇ ಆಗಿದೆ. ರಷ್ಯಾದ ಮಿಲಿಟರಿ ನೌಕೆಯನ್ನು ಇವೇ ಡ್ರೋನ್​​ಗಳು ಮುಳುಗಿಸಿದ್ದುವು.

ಇದನ್ನೂ ಓದಿ: ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?

ಪರಿಣಿತರ ಪ್ರಕಾರ, ಮುಂಬರುವ ಯಾವುದೇ ಯುದ್ಧದಲ್ಲೂ ಡ್ರೋನ್​​ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಭಾರತ ಪಾಕಿಸ್ತಾನ ಸಂಘರ್ಷದಲ್ಲೂ ಇದರ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭಾರತದ ಭಾರ್ಗವಾಸ್ತ್ರದ ಆವಿಷ್ಕಾರವು ಗಮನಾರ್ಹ ಎನಿಸುತ್ತದೆ.

ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ವೇಳೆ ಡ್ರೋನ್​​ಗಳ ಗುಂಪನ್ನು ತಡೆಯಲು ಮತ್ತು ನಾಶ ಮಾಡಲು ಭಾರತವು ಡಿ4 ಸಿಸ್ಟಂ ಅನ್ನು ಬಳಸಿತ್ತು. ಅದರಲ್ಲಿ ಹೆಚ್ಚುಕಡಿಮೆ ಪೂರ್ಣ ಯಶಸ್ವಿಯಾಗಿದೆ. ಡಿಆರ್​​ಡಿಒ ಸಂಸ್ಥೆ ಸ್ವಂತವಾಗಿ ಈ ಆ್ಯಂಟಿ ಡ್ರೋನ್ ಸಿಸ್ಟಂ ಅನ್ನು ಅಭಿವೃದ್ದಿಪಡಿಸಿತ್ತು. ಹಮಾಸ್ ರಾಕೆಟ್​​​ಗಳನ್ನು ಇಸ್ರೇಲ್​​ನ ಐರನ್ ಡೋಮ್ ಡಿಫೆನ್ಸ್ ಸಿಸ್ಟಂ ಹೇಗೆ ಹೊಡೆದುರುಳಿಸಿತ್ತೋ, ಡಿಆರ್​​​ಡಿಒನ ಡ್ರೋನ್ ಡಿಫೆನ್ಸ್ ಸಿಸ್ಟಂ ಕೂಡ ಅಪಾಯಕಾರಿ ಡ್ರೋನ್​​ಗಳನ್ನು ಹೊಡೆದೊಡೆದು ಹಾಕಿತ್ತು.

ಭಾರತದಲ್ಲಿ ಡ್ರೋನ್​​ಗಳನ್ನು ತಯಾರಿಸುವ 300ಕ್ಕೂ ಹೆಚ್ಚು ಕಂಪನಿಗಳಿವೆ. ಹಾಗೆಯೇ, ಆ್ಯಂಟಿ-ಡ್ರೋನ್ ಸಿಸ್ಟಮ್​​ಸ್ ಅಭಿವೃದ್ಧಿಸುವ ಹಲವು ಕಂಪನಿಗಳಿವೆ. ಝೆನ್ ಟೆಕ್ನಾಲಜಿ ಕಂಪನಿಯ ಆ್ಯಂಟಿ ಡ್ರೋನ್ ಸಿಸ್ಟಂಗಳು ಭಾರತೀಯ ವಾಯುಪಡೆಯಲ್ಲಿ ಮಾತ್ರವಲ್ಲ, ಆರ್ಮೇನಿಯಾಗೂ ಸರಬರಾಜಾಗಿವೆ. ಅಮೆರಿಕದ ಅಪ್ಲೈಡ್ ವಿಷುವಲ್ ಟೆಕ್ನಾಲಜಿ ಜೊತೆ ಸಹಭಾಗಿತ್ವ ಹೊಂದಿದ್ದು ಅಮೆರಿಕದ ಮಾರುಕಟ್ಟೆಗೂ ಆ್ಯಂಟಿ ಡ್ರೋನ್ ಸಿಸ್ಟಮ್ಸ್ ಸರಬರಾಜು ಮಾಡುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?

ಡ್ರೋನ್ ಮತ್ತು ಆ್ಯಂಟಿ ಡ್ರೋನ್ ಸಿಸ್ಟಂ ಅಭಿವೃದ್ಧಿಯಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಫ್ರಾನ್ಸ್, ಟರ್ಕಿ ಇತ್ಯಾದಿ ಹಲವು ಐರೋಪ್ಯ ದೇಶಗಳು ಡ್ರೋನ್ ಮ್ಯಾನುಫ್ಯಾಕ್ಚರಿಂಗ್​​ನಲ್ಲಿವೆ. ಲಾಕ್​​ಹೀಡ್ ಮಾರ್ಟಿನ್, ರಫೇಲ್ ಇತ್ಯಾದಿ ಜೆಟ್ ಕಂಪನಿಗಳೂ ಕೂಡ ಪ್ರಬಲ ಆ್ಯಂಟಿ ಡ್ರೋನ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ