AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವಾಲಯದ ಬಾಡಿಗೆಗೆ ಸರ್ಕಾರ 1,500 ಕೋಟಿ ರೂ. ಖರ್ಚು ಮಾಡುತ್ತಿದೆ; ಕರ್ತವ್ಯ ಭವನದಲ್ಲಿ ಪ್ರಧಾನಿ ಮೋದಿ

ಸ್ವಾತಂತ್ರ್ಯದ ನಂತರ ದೇಶದ ಆಡಳಿತ ಯಂತ್ರವು ಬ್ರಿಟಿಷ್ ಯುಗದಲ್ಲಿ ನಿರ್ಮಿಸಲಾದ ಕಟ್ಟಡಗಳಿಂದ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸ ಕಟ್ಟಡಗಳಿಗೆ ಶಿಫ್ಟ್ ಆಗುವ ಸಮಯ ಬಂದಿದೆ. ಹೊಸದಾಗಿ ಉದ್ಘಾಟನೆಗೊಂಡ ಕರ್ತವ್ಯ ಭವನವು ಕೇವಲ ರಚನೆ ಅಥವಾ ಮೂಲಸೌಕರ್ಯದ ಒಂದು ಭಾಗವಲ್ಲ, ವಿಕಸಿತ ಭಾರತದ ಬೀಜವನ್ನು ಈ ಕಟ್ಟಡದಿಂದ ಬಿತ್ತಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಚಿವಾಲಯದ ಬಾಡಿಗೆಗೆ ಸರ್ಕಾರ 1,500 ಕೋಟಿ ರೂ. ಖರ್ಚು ಮಾಡುತ್ತಿದೆ; ಕರ್ತವ್ಯ ಭವನದಲ್ಲಿ ಪ್ರಧಾನಿ ಮೋದಿ
Pm Modi In Kartavya Bhavan
ಸುಷ್ಮಾ ಚಕ್ರೆ
|

Updated on:Aug 06, 2025 | 8:58 PM

Share

ನವದೆಹಲಿ, ಆಗಸ್ಟ್ 6: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನವನ್ನು (Kartavya Bhavan) ಉದ್ಘಾಟಿಸಿದರು. ಅನೇಕ ಕೇಂದ್ರ ಸಚಿವಾಲಯಗಳು ರಾಷ್ಟ್ರ ರಾಜಧಾನಿಯಾದ್ಯಂತ ವಿವಿಧ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಹಲವು ಬಾಡಿಗೆ ಕಟ್ಟಡಗಳಲ್ಲಿವೆ. ಕೇಂದ್ರ ಸರ್ಕಾರವು ಕೇವಲ ಸಚಿವಾಲಯಗಳ ಬಾಡಿಗೆಗೆ 1,500 ಕೋಟಿ ರೂ. ಖರ್ಚು ಮಾಡುತ್ತಿದೆ, ಇನ್ನುಮುಂದೆ ಈ ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

“ಇಷ್ಟು ದೊಡ್ಡ ಗಾತ್ರದ, ಇಷ್ಟು ವೆಚ್ಚದ ಕಟ್ಟಡ ನಿರ್ಮಾಣದ ಅಗತ್ಯವಿತ್ತಾ? ಎಂದು ಹಲವರು ಪ್ರಶ್ನಿಸಬಹುದು. ಆದರೆ, ಭಾರತ ಸರ್ಕಾರದ ಅನೇಕ ಸಚಿವಾಲಯಗಳನ್ನು ದೆಹಲಿಯ 50 ವಿಭಿನ್ನ ಸ್ಥಳಗಳಿಂದ ನಡೆಸಲಾಗುತ್ತಿದೆ. ಈ ಸಚಿವಾಲಯಗಳಲ್ಲಿ ಹೆಚ್ಚಿನವು ಬಾಡಿಗೆ ಕಟ್ಟಡಗಳಿಂದ ನಡೆಸಲ್ಪಡುತ್ತಿವೆ. ಅದಕ್ಕೆ ವಾರ್ಷಿಕ ಒಂದೂವರೆ ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು ಕೇಂದ್ರ ಸರ್ಕಾರವು ಕೇವಲ ಬಾಡಿಗೆ ಪಾವತಿಸಲು ಖರ್ಚು ಮಾಡುತ್ತಿದೆ” ಎಂದು ಮೋದಿ ಹೇಳಿದ್ದಾರೆ.

“ಸ್ವಾತಂತ್ರ್ಯದ ನಂತರ ಬ್ರಿಟಿಷ್ ಯುಗದಲ್ಲಿ ನಿರ್ಮಿಸಲಾದ ಕಟ್ಟಡಗಳಿಂದ ದೇಶದ ಆಡಳಿತ ಯಂತ್ರವು ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಈಗಿರುವ ಕಟ್ಟಡಗಳಲ್ಲಿ ಸರಿಯಾದ ಬೆಳಕು, ಸ್ಥಳ ಮತ್ತು ಗಾಳಿಯ ಕೊರತೆಯಿದೆ. ಗೃಹ ವ್ಯವಹಾರಗಳಂತಹ ಪ್ರಮುಖ ಸಚಿವಾಲಯವು ಸುಮಾರು 100 ವರ್ಷಗಳಿಂದ ಸಾಕಷ್ಟು ಸಂಪನ್ಮೂಲಗಳಿಲ್ಲದೆ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನೀವು ಊಹಿಸಬಲ್ಲಿರಾ?” ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 2020ರ ಗಲ್ವಾನ್ ಘರ್ಷಣೆ ನಂತರ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

ಹೊಸದಾಗಿ ಉದ್ಘಾಟನೆಗೊಂಡ ಕರ್ತವ್ಯ ಭವನವು ಕೇವಲ ರಚನೆ ಅಥವಾ ಮೂಲಸೌಕರ್ಯದ ಒಂದು ಭಾಗವಲ್ಲ. ವಿಕಸಿತ ಭಾರತದ ಬೀಜವನ್ನು ಈ ಕಟ್ಟಡದಿಂದ ಬಿತ್ತಲಾಗುತ್ತದೆ. ಮುಂಬರುವ ದಶಕಗಳಲ್ಲಿ ದೇಶದ ದಿಕ್ಕನ್ನು ಈ ಕಟ್ಟಡದಿಂದ ನಿರ್ಧರಿಸಲಾಗುತ್ತದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದಕ್ಷತೆಗಾಗಿ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಗುರಿಯನ್ನು ಹೊಂದಿದೆ ಎಂದು ಮೋದಿ ಹೇಳಿದ್ದಾರೆ.

1950 ಮತ್ತು 1970ರ ನಡುವೆ ನಿರ್ಮಿಸಲಾದ ಶಾಸ್ತ್ರಿ ಭವನ, ಕೃಷಿ ಭವನ, ಉದ್ಯೋಗ ಭವನ ಮತ್ತು ನಿರ್ಮಾಣ ಭವನದಂತಹ ಹಳೆಯ ಕಟ್ಟಡಗಳಿಂದ ಪ್ರಸ್ತುತ ಅನೇಕ ಪ್ರಮುಖ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವು ಈಗ ರಚನಾತ್ಮಕವಾಗಿ ಹಳೆಯದು ಮತ್ತು ಅಸಮರ್ಥವಾಗಿವೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ನಿಜವಾಯ್ತು ಟ್ರಂಪ್ ಬೆದರಿಕೆ; ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕಾ!

ಇಂದು ಉದ್ಘಾಟನೆಯಾದ ಕರ್ತವ್ಯ ಭವನ-3ರ ತಳಹದಿಯ ಪ್ರದೇಶವು 1.5 ಲಕ್ಷ ಚದರ ಮೀಟರ್ ಆಗಿದ್ದು, 40,000 ಚದರ ಮೀಟರ್‌ಗಳ ನೆಲಮಾಳಿಗೆಯ ವಿಸ್ತೀರ್ಣವನ್ನು ಹೊಂದಿದೆ. ಇದರ ಪಾರ್ಕಿಂಗ್ ಸ್ಥಳವು 600 ಕಾರುಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಕರ್ತವ್ಯ ಭವನ ಶಿಶುವಿಹಾರ, ಯೋಗ ಕೊಠಡಿ, ವೈದ್ಯಕೀಯ ಕೊಠಡಿ, ಕೆಫೆ, ಅಡುಗೆಮನೆ ಮತ್ತು ಬಹುಪಯೋಗಿ ಸಭಾಂಗಣವನ್ನು ಹೊಂದಿದೆ. ಇದು 45 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ 24 ಮುಖ್ಯ ಸಮ್ಮೇಳನ ಕೊಠಡಿಗಳು, 26 ಸಣ್ಣ ಸಮ್ಮೇಳನ ಕೊಠಡಿಗಳು, 25 ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ 67 ಸಭೆ ಕೊಠಡಿಗಳು ಮತ್ತು 27 ಲಿಫ್ಟ್‌ಗಳನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:57 pm, Wed, 6 August 25