
ಕಾರವಾರ, ಅ.16: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, ವಿವಿಧ ಸಮುದ್ರ ಕಾರ್ಯಾಚರಣೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿರುವ ಬಹುಪಯೋಗಿ ಯುದ್ಧನೌಕೆ ‘INS ಸಮರ್ಥಕ್’ (INS Samarthak) ಇಂದು ಕಾರವಾರ ನೌಕಾ ನೆಲೆಯಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಸರ್ಕಾರದ ‘ಮೇಕ್ ಇನ್ ಇಂಡಿಯಾ’ (Make in India) ಉಪಕ್ರಮದಡಿ ಲಾರ್ಸನ್ ಅಂಡ್ ಟ್ಯೂಬ್ರೊ ಸಂಸ್ಥೆಯು ಈ ನೌಕೆಯನ್ನು ನಿರ್ಮಿಸಿದೆ. ‘ಸಮರ್ಥಕ್-ವರ್ಗ’ದ ಯೋಜನೆಯಡಿ ಸೇರ್ಪಡೆಯಾಗುತ್ತಿರುವ ಎರಡು ಹಡಗುಗಳಲ್ಲಿ ಇದು ಮೊದಲನೆಯದಾಗಿದೆ. ಕಣ್ಗಾವಲು, ಗಸ್ತು ತಿರುಗುವಿಕೆ, ಶಸ್ತ್ರಾಸ್ತ್ರ ಪರೀಕ್ಷೆ, ಮಾನವರಹಿತ ವ್ಯವಸ್ಥೆಗಳ ಕಾರ್ಯಾಚರಣೆ ಹಾಗೂ ಮಾನವೀಯ ನೆರವು ಮಿಷನ್ಗಳಿಗೆ ಇದು ಬೆಂಬಲ ನೀಡಲಿದೆ.
ವಿಶಿಷ್ಟ ವಿನ್ಯಾಸ: ಇದು ಒಂದು ಯುದ್ಧನೌಕೆಗಳಂತೆ ಕೆಲಸ ಮಾಡದೇ, ಇಂದಿನ ವೇಗಕ್ಕೆ ಅನುಗುಣವಾಗಿ, ಹಾಗೂ ನಿರ್ದಿಷ್ಟ ಯುದ್ಧ ಪಾತ್ರಗಳಿಗೆ ಮಾತ್ರ ಸೀಮಿತವಾಗದೆ, ಸಮುದ್ರದಲ್ಲಿ ವಿವಿಧ ರೀತಿಯ ಕಾರ್ಯಗಳನ್ನು ನಿರ್ವಹಿಸಲು ಈ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಶಸ್ತ್ರಾಸ್ತ್ರ ಹಾಗೂ ಸೆನ್ಸಾರ್ ಪರೀಕ್ಷೆ: ಇದು ನೌಕಾಪಡೆಯ ಶಸ್ತ್ರಾಸ್ತ್ರಗಳು ಮತ್ತು ಸೆನ್ಸಾರ್ಗಳ ಅಭಿವೃದ್ಧಿ ಹಾಗೂ ಮೌಲ್ಯಮಾಪನಕ್ಕೆ ಇದು ಬೆಂಬಲ ನೀಡುತ್ತದೆ. ಡಿಆರ್ಡಿಒ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ರಾಡಾರ್, ಸೋನಾರ್ ಹಾಗೂ ಕ್ಷಿಪಣಿ ವ್ಯವಸ್ಥೆಗಳ ತಂತ್ರಜ್ಞಾನ ಪರೀಕ್ಷಿಸಲು ಇದು ಸಾಗರ ಆಧಾರಿತ ಪ್ಲಾಟ್ಫಾರ್ಮ್ ಆಗಿ ಕಾರ್ಯನಿರ್ವಹಿಸುತ್ತದೆ.
ಮಾನವರಹಿತ ವ್ಯವಸ್ಥೆ: ಈ ನೌಕೆಯು ಮಾನವರಹಿತ ಮೇಲ್ಮೈ ವಾಹನಗಳು ಮತ್ತು ವೈಮಾನಿಕ ವಾಹನಗಳನ್ನು (UAVs) ಉಡಾಯಿಸಲು, ನಿರ್ವಹಿಸಲು ಮತ್ತು ಮರುಪಡೆದುಕೊಳ್ಳಲು ‘ಮತರ್ಶಿಪ್’ ಆಗಿ ಕಾರ್ಯನಿರ್ವಹಿಸಬಲ್ಲದು.
HADR ಮಿಷನ್ ಮತ್ತು ತುರ್ತು ಸೇವೆಗಳು: ಮಾನವೀಯ ನೆರವು ಮತ್ತು ವಿಪತ್ತು ನಿರ್ವಹಣೆ (HADR) ಕಾರ್ಯಾಚರಣೆಗಳಿಗಾಗಿ ಇದನ್ನು ಕಾನ್ಫಿಗರ್ ಮಾಡಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಸೀಮಿತ ಸಾಮರ್ಥ್ಯದ ಆಸ್ಪತ್ರೆ ನೌಕೆಯಾಗಿಯೂ (Hospital Vessel) ಇದು ಬದಲಾಗಬಲ್ಲದು. ಇದಲ್ಲದೆ ಭಾರೀ ಟೋವಿಂಗ್, ರಕ್ಷಣಾ ಕಾರ್ಯ ಹಾಗೂ ಸಮುದ್ರ ಮಾಲಿನ್ಯ ನಿಯಂತ್ರಣಕ್ಕೂ ಇದು ಬಳಕೆಯಾಗಲಿದೆ.
ಇದನ್ನೂ ಓದಿ: ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಮೆಟ್ರೋ ವಿಸ್ತರಣೆ: ಡಿಪಿಆರ್ಗೆ ರಾಜ್ಯ ಸರ್ಕಾರ ಸೂಚನೆ
ಈ ನೌಕೆಯಲ್ಲಿ ಒಟೊ ಮೆಲಾರಾ 76 ಎಂಎಂ ಮುಖ್ಯ ಫಿರಂಗಿ, CRN-91 30 ಎಂಎಂ ಸ್ವಯಂಚಾಲಿತ ಫಿರಂಗಿಗಳು ಹಾಗೂ ಸ್ಟೆಬಿಲೈಸ್ಡ್ ರಿಮೋಟ್ ಕಂಟ್ರೋಲ್ಡ್ ಗನ್ (SRCG) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಶತ್ರು ಜಲಾಂತರ್ಗಾಮಿಗಳನ್ನು ಮಟ್ಟಹಾಕಲು ವರುಣಾಸ್ತ್ರ ಮತ್ತು ಶ್ಯೇನಾ ಟಾರ್ಪಿಡೊ ಲಾಂಚರ್ಗಳು ಹಾಗೂ RBU-6000 ಜಲಾಂತರ್ಗಾಮಿ ನಿಗ್ರಹ ರಾಕೆಟ್ ಲಾಂಚರ್ಗಳನ್ನು ಹೊಂದಿದೆ. ದೇಶಿ ಸಂಕೇತ್ ಎಂಕೆ III ಎಲೆಕ್ಟ್ರಾನಿಕ್ ಸಪೋರ್ಟ್ ಮೆಷರ್ಸ್ (ESM) ವ್ಯವಸ್ಥೆ ಹಾಗೂ ಕವಚ್ ಚಾಫ್ ರಾಕೆಟ್ ಕೌಂಟರ್ಮೆಷರ್ಗಳನ್ನು ಇದು ಒಳಗೊಂಡಿದೆ. ಹೆಚ್ಎಎಲ್ ಧ್ರುವ್ ಸುಧಾರಿತ ಹಗುರವಾದ ಹೆಲಿಕಾಪ್ಟರ್ಗಳನ್ನು ಕಾರ್ಯಾಚರಣೆ ಮಾಡಲು ಫ್ಲೈಟ್ ಡೆಕ್ ಹೊಂದಿದೆ. ಅಲ್ಲದೆ, ಸಮುದ್ರದಲ್ಲಿ ನಿಖರವಾದ ಸ್ಥಳದಲ್ಲಿ ನೆಲೆ ನಿಲ್ಲಲು ‘ಡೈನಾಮಿಕ್ ಪೊಸಿಷನಿಂಗ್ ಸಿಸ್ಟಮ್’ ಅನ್ನು ಅಳವಡಿಸಲಾಗಿದೆ.
ರಕ್ಷಣಾ ಸಚಿವಾಲಯದೊಂದಿಗೆ ಮಾರ್ಚ್ 25, 2022 ರಂದು ಮಾಡಿಕೊಂಡ 887 ಕೋಟಿ ರೂ. ಮೌಲ್ಯದ ಒಪ್ಪಂದದ ಮೇರೆಗೆ L&T ಸಂಸ್ಥೆಯು INS ಸಮರ್ಥಕ್ ಮತ್ತು INS ಉತ್ಕರ್ಷ್ ಎಂಬ ಎರಡು ಬಹುಪಯೋಗಿ ನೌಕೆಗಳನ್ನು ನಿರ್ಮಿಸಿದೆ. ಇದರ ಎರಡನೇ ನೌಕೆಯಾದ INS ಉತ್ಕರ್ಷ್ ಜನವರಿ 14, 2025 ರಂದು ಲೋಕಾರ್ಪಣೆಗೊಂಡಿದ್ದು, ಪ್ರಸ್ತುತ ಅಂತಿಮ ಹಸ್ತಾಂತರಕ್ಕೂ ಮುನ್ನ ಸಮುದ್ರ ಪರೀಕ್ಷೆಗಳನ್ನು ಎದುರಿಸುತ್ತಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:37 am, Fri, 16 October 26