
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಮತ್ತು ಜನರಲಿಸ್ಟ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ಒಟ್ಟು 291 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶಾಖಾ ನಿರ್ವಹಣಾ ಮ್ಯಾನೇಜರ್ (100), ಐಟಿ ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ (75), ಕ್ರೆಡಿಟ್ ಮ್ಯಾನೇಜರ್ (50) ಹಾಗೂ ಸೆಕ್ಯುರಿಟಿ ಅಸಿಸ್ಟೆಂಟ್ ಮ್ಯಾನೇಜರ್ (25) ಪ್ರಮುಖವಾಗಿವೆ. ಇವುಗಳ ಜೊತೆಗೆ ಡೇಟಾಬೇಸ್/ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್ (15), ಮಾಹಿತಿ ಭದ್ರತೆ (8), ಐಎಸ್ ಆಡಿಟ್ (7), ರಿಸ್ಕ್ ಸೀನಿಯರ್ ಮ್ಯಾನೇಜರ್ (6) ಮತ್ತು ಸೈಬರ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ (5) ಹುದ್ದೆಗಳನ್ನು ಕೂಡ ಭರ್ತಿ ಮಾಡಲಾಗುತ್ತಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಬಿ.ಇ, ಬಿ.ಟೆಕ್, ಎಂ.ಇ, ಎಂ.ಟೆಕ್ ಅಥವಾ ಎಂಬಿಎ (ಹಣಕಾಸು) ಅರ್ಹತೆಯನ್ನು ಹೊಂದಿರಬೇಕು. ಇದರೊಂದಿಗೆ ಸಂಬಂಧಿತ ಕ್ಷೇತ್ರದಲ್ಲಿ ಅಗತ್ಯ ಕೆಲಸದ ಅನುಭವ ಇರುವುದು ಕಡ್ಡಾಯ. ಅಭ್ಯರ್ಥಿಗಳ ವಯೋಮಿತಿ 25 ರಿಂದ 45 ವರ್ಷಗಳ ನಡುವೆ ಇರಬೇಕಾಗಿದ್ದು, ಸರ್ಕಾರಿ ನಿಯಮಾವಳಿ ಪ್ರಕಾರ ಅರ್ಹ ಮೀಸಲಾತಿ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ (General/OBC/EWS) ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ. 1000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ, ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ. 175 ಶುಲ್ಕ ಇರಲಿದೆ.
ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ
ಅಭ್ಯರ್ಥಿಗಳ ಆಯ್ಕೆಯನ್ನು ಸ್ಕ್ರೀನಿಂಗ್, ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ನೆರವೇರಿಸುವ ಸಂದರ್ಶನದ ಮೂಲಕ ಮಾಡಲಾಗುತ್ತದೆ. ಅಂತಿಮ ಮೆರಿಟ್ ಪಟ್ಟಿಯಲ್ಲಿ ಆನ್‌ಲೈನ್ ಪರೀಕ್ಷೆಗೆ ಶೇಕಡಾ 80 ರಷ್ಟು ಹಾಗೂ ಸಂದರ್ಶನಕ್ಕೆ ಶೇಕಡಾ 20 ರಷ್ಟು ತೂಕವನ್ನು (Weightage) ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಪ್ರತಿಯೊಂದು ತಪ್ಪು ಉತ್ತರಕ್ಕೂ 1/4 (0.25) ರಷ್ಟು ಋಣಾತ್ಮಕ (Negative) ಅಂಕಗಳನ್ನು ಕಳೆಯಲಾಗುತ್ತದೆ.
ಐಒಬಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಹಂತಕ್ಕೆ ಅನುಗುಣವಾಗಿ ರೂ. 48,480 ರಿಂದ ರೂ. 1,05,280 ರವರೆಗೆ ಆರಂಭಿಕ ಮೂಲ ವೇತನ ಲಭ್ಯವಿರುತ್ತದೆ. ಇದರ ಜೊತೆಗೆ ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರ ಭತ್ಯೆಗಳು ದೊರೆಯಲಿವೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ