ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು; ವಿಶ್ವಸಂಸ್ಥೆಯಲ್ಲಿ ಪಾಕ್ ಮಾನ ಹರಾಜು ಹಾಕಿದ ಸಚಿವ ಜೈಶಂಕರ್
ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿ ಎಂದು ಬಹಿರಂಗವಾಗಿ ಘೋಷಿಸಿದೆ. ಅದು "ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು" ವಾಗಿ ಮುಂದುವರೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ವಾಗ್ದಾಳಿ ನಡೆಸಿದರು. 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, 26 ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸಹ ಪ್ರಸ್ತಾಪಿಸಿದರು.

ನ್ಯೂಯಾರ್ಕ್, ಸೆಪ್ಟೆಂಬರ್ 28: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar), ವಿಶ್ವಸಂಸ್ಥೆಯ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಯು ಕೇವಲ ಒಂದು ದೇಶದ ಪ್ರಜೆಗಳಿಂದ ತುಂಬಿದೆ. ಭಾರತದ ಪಕ್ಕದಲ್ಲೇ ಇರುವ ಆ ದೇಶ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಎನ್ನುವ ಮೂಲಕ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿ ಎಂದು ಬಹಿರಂಗವಾಗಿ ಘೋಷಿಸಿದೆ. ಅದು “ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು” ವಾಗಿ ಮುಂದುವರೆದಿದೆ ಎಂದ ಸಚಿವ ಜೈಶಂಕರ್, 26 ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸಹ ಪ್ರಸ್ತಾಪಿಸಿದರು. ಇದಕ್ಕಾಗಿ ಭಾರತವು ಭಯೋತ್ಪಾದನೆಯ ವಿರುದ್ಧ ತನ್ನ ಜನರನ್ನು ರಕ್ಷಿಸುವ ಸಲುವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಮೂಲಕ ನೆರೆಯ ದೇಶದೊಳಗೆ ಅಡಗಿದ್ದ ಉಗ್ರರನ್ನು ಮಟ್ಟ ಹಾಕಲಾಯಿತು. ಇದರಿಂದ ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿರುವುದು ಕೂಡ ಜಗತ್ತಿನ ಮುಂದೆ ಮತ್ತೊಮ್ಮೆ ಬಯಲಾಯಿತು ಎಂದಿದ್ದಾರೆ.
Our statement at the General Debate of the 80th session of the UNGA. #UNGA80 https://t.co/kqiiJo82Iz
— Dr. S. Jaishankar (@DrSJaishankar) September 27, 2025
“ಭಾರತವು ಸ್ವಾತಂತ್ರ್ಯದ ನಂತರದಿಂದಲೂ ಈ ಸವಾಲನ್ನು ಎದುರಿಸಿದೆ. ನಮ್ಮ ದೇಶ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ನೆರೆಯ ರಾಷ್ಟ್ರವನ್ನು ಹೊಂದಿದೆ. ದಶಕಗಳಿಂದ ಪ್ರಮುಖ ಅಂತರರಾಷ್ಟ್ರೀಯ ಭಯೋತ್ಪಾದಕ ದಾಳಿಗಳು ಆ ಒಂದು ದೇಶದಲ್ಲಿರುವ ಉಗ್ರರಿಂದ ನಡೆಯುತ್ತಿವೆ. ವಿಶ್ವಸಂಸ್ಥೆಯ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಗಳು ಆ ದೇಶದ ಪ್ರಜೆಗಳಿಂದ ತುಂಬಿವೆ. ಆ ದೇಶ ಪಾಕಿಸ್ತಾನ. ಪಾಕಿಸ್ತಾನದಂತಹ ಒಂದು ದೇಶ ಭಯೋತ್ಪಾದನೆಯನ್ನು ರಾಜ್ಯ ನೀತಿ ಎಂದು ಬಹಿರಂಗವಾಗಿ ಘೋಷಿಸಿದಾಗ, ಭಯೋತ್ಪಾದಕ ಕೇಂದ್ರಗಳು ಕೈಗಾರಿಕಾ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದಾಗ, ಭಯೋತ್ಪಾದಕರನ್ನು ಸಾರ್ವಜನಿಕವಾಗಿ ವೈಭವೀಕರಿಸಿದಾಗ, ಅಂತಹ ಕ್ರಮಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು. ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಹತ್ತಿಕ್ಕಬೇಕು ಎಂದು ಸಚಿವ ಜೈಶಂಕರ್ ಪಾಕಿಸ್ತಾನದ ಬೆವರಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




