Vijay Rally Stampede: ಕರೂರಿನಲ್ಲಿ 39 ಜನರ ಸಾವಿಗೆ ವಿಜಯ್ ಮಾಡಿದ ಈ ತಪ್ಪೇ ಕಾರಣ!
ತಮಿಳುನಾಡಿನ ಕರೂರಿನಲ್ಲಿ ವಿಜಯ್ ಅವರ ಟಿವಿಕೆ ರ‍್ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 39 ಜನರು ಮೃತಪಟ್ಟಿದ್ದಾರೆ. ಈಗಾಗಲೇ ತಮಿಳುನಾಡು ಸರ್ಕಾರ ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಕೇಂದ್ರ ಗೃಹ ಸಚಿವಾಲಯ ಕೂಡ ಸಿಎಂ ಸ್ಟಾಲಿನ್ ಅವರಿಂದ ಈ ಘಟನೆಯ ವರದಿ ಕೇಳಿದೆ. ಆದರೆ ಶನಿವಾರ ನಡೆದ ಕಾಲ್ತುಳಿತಕ್ಕೆ ಅಸಲಿ ಕಾರಣವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕರೂರ್, ಸೆಪ್ಟೆಂಬರ್ 28: ಸಿನಿಮಾ ರಂಗ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿರುವ ನಟ ವಿಜಯ್ (Actor Vijay) ತಮ್ಮದೇ ಆದ ಟಿವಿಕೆ (TVK) ಪಕ್ಷ ಕಟ್ಟಿದರು. ನಿನ್ನೆ (ಶನಿವಾರ) ತಮಿಳುನಾಡಿನ ಕರೂರಿನಲ್ಲಿ (Karur Tragedy) ಟಿವಿಕೆಯ ಪ್ರಚಾರ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಆದರೆ, ವಿಜಯ್ ಅವರ ಭಾಷಣ ಆರಂಭವಾಗುತ್ತಿದ್ದಂತೆ ಕಾಲ್ತುಳಿತ ಉಂಟಾಗಿ 17 ಮಹಿಳೆಯರು, 9 ಮಕ್ಕಳು ಸೇರಿದಂತೆ ಒಟ್ಟು 39 ಜನರು ಮೃತಪಟ್ಟಿದ್ದಾರೆ. ಇನ್ನೂ 50ಕ್ಕೂ ಅಧಿಕ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾದರೆ, ಟಿವಿಕೆ ರ‍್ಯಾಲಿಯನ್ನು ಸರಿಯಾಗಿ ಆಯೋಜಿಸಿರಲಿಲ್ಲವೇ? ಅಷ್ಟಕ್ಕೂ ನಿನ್ನೆ ಅಲ್ಲಿ ನಡೆದಿದ್ದು ಏನು? ಎಂಬ ಬಗ್ಗೆ ಪೂರ್ತಿ ವಿವರ ಇಲ್ಲಿದೆ.
ವಿಜಯ್ 30 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಮಿಂಚಿದ್ದರಿಂದ ಸಹಜವಾಗಿಯೇ ಅವರಿಗೆ ಅಭಿಮಾನಿಗಳ ದಂಡೇ ಇದೆ. ಹೀಗಾಗಿ, ಅವರು ತಮ್ಮ ಹೊಸ ಪಕ್ಷವಾದ ಟಿವಿಕೆ ರ‍್ಯಾಲಿಯನ್ನು ಆಯೋಜಿಸಿದ ಕಡೆಯೆಲ್ಲ ತಮ್ಮ ನೆಚ್ಚಿನ ನಟನನ್ನು ನೋಡಲು ಜನಸಾಗರವೇ ಹರಿದುಬರುತ್ತದೆ. ನಿನ್ನೆ ಕರೂರಿನಲ್ಲಿ ನಡೆದಿದ್ದೂ ಅದೇ. ಶನಿವಾರ ಮಧ್ಯಾಹ್ನ 3 ಗಂಟೆಗೆ ಕರೂರಿನಲ್ಲಿ ವಿಜಯ್ ರ‍್ಯಾಲಿ ಆರಂಭವಾಗಬೇಕಿತ್ತು. ವಿಜಯ್ ಅವರನ್ನು ನೋಡುವ ಸಲುವಾಗಿ ನಿನ್ನೆ ಬೆಳಗ್ಗೆಯಿಂದಲೇ ಆ ಜಾಗಕ್ಕೆ ಸಾವಿರಾರು ಜನರು ಆಗಮಿಸತೊಡಗಿದ್ದರು. ಆದರೆ, ವಿಜಯ್ ಹೇಳಿದ ಸಮಯಕ್ಕೆ ಸರಿಯಾಗಿ ಬರಲೇ ಇಲ್ಲ.
ಇದನ್ನೂ ಓದಿ: ದಳಪತಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 39ಕ್ಕೆ ಏರಿಕೆ
3 ಗಂಟೆಗೆ ಬರಬೇಕಾಗಿದ್ದ ವಿಜಯ್ ಕರೂರಿಗೆ ಬರುವಾಗ ಸಂಜೆ ಏಳೂವರೆಯಾಗಿತ್ತು. ಬೆಳಗ್ಗೆಯಿಂದ ವಿಜಯ್ಗಾಗಿ ಕಾದು ಕುಳಿತಿದ್ದ ಜನರಿಗೆ ಟಿವಿಕೆಯಿಂದ ಊಟದ ವ್ಯವಸ್ಥೆ ಹಾಗಿರಲಿ ಕುಡಿಯಲು ನೀರಿನ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಊಟ, ನೀರು ಇಲ್ಲದೆ ಉರಿ ಬಿಸಿಲಿನಲ್ಲಿ ನಿಂತು ಕಾದಿದ್ದರಿಂದ ಅವರಲ್ಲಿ ಬಹುತೇಕ ಜನರು ಸುಸ್ತಾಗಿದ್ದರು. ಆದರೂ ತಮ್ಮ ನೆಚ್ಚಿನ ನಟನನ್ನು ನೋಡಲೆಂದು ಜನರು ಹೆಂಡತಿ, ಮಕ್ಕಳ ಸಮೇತ ಕರೂರಿಗೆ ಬಂದಿದ್ದರು. ವಿಜಯ್ ರಾತ್ರಿ ತೆರೆದ ವಾಹನವನ್ನೇರಿ ಭಾಷಣ ಶುರು ಮಾಡುತ್ತಿದ್ದಂತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ನೂಕುನುಗ್ಗಲು ಉಂಟಾಯಿತು. ಈ ವೇಳೆ ಕೆಲವು ಮಕ್ಕಳು ಅಪ್ಪ-ಅಮ್ಮನ ಕೈತಪ್ಪಿ ಹೋದರು. ಇದರಿಂದ ಆ ಸ್ಥಳದಲ್ಲಿ ಗೊಂದಲ ಉಂಟಾಯಿತು. ಇನ್ನು ಕೆಲವರು ತಳ್ಳಾಟದಿಂದ ಉಸಿರಾಡಲು ಸಾಧ್ಯವಾಗದೆ ಮೂರ್ಛೆ ತಪ್ಪಿ ಬಿದ್ದರು.
ವಿಷಯ ಗೊತ್ತಾಗುತ್ತಿದ್ದಂತೆ ವಿಜಯ್ ವೇದಿಕೆಯ ಮೇಲಿಂದ ಸಭಿಕರತ್ತ ನೀರಿನ ಬಾಟಲಿ ಎಸೆದು ನೀರು ಕುಡಿಸಲು ಹೇಳಿದರು. ತಕ್ಷಣ ಆ್ಯಂಬುಲೆನ್ಸ್ಗೆ ಫೋನ್ ಮಾಡಲಾಯಿತು. ಆದರೆ, ಬೆಳಗ್ಗೆಯಿಂದ ವಿಪರೀತ ನಿತ್ರಾಣವಾಗಿದ್ದ ಕಾರಣದಿಂದ ಹಾಗೂ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡಿದ್ದರಿಂದ ಮಗು, ಮಹಿಳೆಯರು ಸೇರಿದಂತೆ 39 ಜನರು ಪ್ರಾಣ ಕಳೆದುಕೊಂಡರು.
ಇದನ್ನೂ ಓದಿ: Vijay Rally Stampede: ಕರೂರಿನಲ್ಲಿ ರ‍್ಯಾಲಿ ನಡೆಸಿ 39 ಜನರ ಸಾವಿಗೆ ಕಾರಣರಾದ ವಿಜಯ್ ದಳಪತಿ ಯಾರು?
ವಿಜಯ್ ತಡವಾಗಿ ಬಂದಿದ್ದು, ಸಭೆ ನಡೆಯುವ ಸ್ಥಳದಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸದೆ ಇದ್ದಿದ್ದು ಒಂದುಕಡೆಯಾದರೆ, ಈ ರ‍್ಯಾಲಿಗೆ ವಿಜಯ್ ವ್ಯವಸ್ಥೆ ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಜನರು ಆಗಮಿಸಿದ್ದರು. ಅದಕ್ಕೆ ಸರಿಯಾದ ಕುರ್ಚಿಯ ವ್ಯವಸ್ಥೆಯಾಗಲಿ, ಜಾಗವಾಗಲಿ ಅಲ್ಲಿ ಇರಲಿಲ್ಲ. ವಿಜಯ್ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದು 10 ಸಾವಿರ ಜನರಿಗೆ ಮಾತ್ರ. ನಿನ್ನೆ ರ‍್ಯಾಲಿ ನಡೆದ ಜಾಗದಲ್ಲಿ ಹೆಚ್ಚೆಂದರೆ 10 ಸಾವಿರ ಜನರು ಸೇರಬಹುದಿತ್ತು. ಆದರೆ, ನಿನ್ನೆ ವಿಜಯ್ ರ‍್ಯಾಲಿಗೆ ಆಗಮಿಸಿದ್ದು ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಜನರು. ಇದರಿಂದಾಗಿ ಜನರಿಗೆ ಆಚೀಚೆ ಹೋಗಲೂ ಸಾಧ್ಯವಾಗಷ್ಟು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು.
ರ‍್ಯಾಲಿಗೆ ಅನುಮತಿ ಕೋರಿ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಆ ಸ್ಥಳದಲ್ಲಿ ಸರಿಯಾದ ನಿರ್ವಹಣೆಯ ಕೊರತೆಯೇ ಈ ದುರಂತಕ್ಕೆ ಕಾರಣ ಎಂಬುದನ್ನು ಸಾಬೀತುಪಡಿಸಿದೆ. ಸೆಪ್ಟೆಂಬರ್ 25ರ ದಿನಾಂಕವಿರುವ ಈ ಪತ್ರವನ್ನು ಟಿವಿಕೆಯ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದಾರೆ. ವಿಜಯ್ ಅವರ ರೋಡ್ ಶೋಗೆ 10,000 ಜನರು ಹಾಜರಾಗುತ್ತಾರೆ ಎಂದು ಪಕ್ಷ ನಿರೀಕ್ಷಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬ್ಯಾನರ್‌ಗಳು, ಅಲಂಕಾರ ಫಲಕಗಳು, ಫ್ಲೆಕ್ಸ್ ಬೋರ್ಡ್‌ಗಳು ಮತ್ತು ಸಾರ್ವಜನಿಕ ಭಾಷಣ ವ್ಯವಸ್ಥೆಗೆ ಅನುಮೋದನೆಯನ್ನೂ ಕೋರಲಾಗಿದೆ. ಟಿವಿಕೆ, ಎಂಜಿನಿಯರ್ ಸಹಾಯದಿಂದ, ಲೈಟ್‌ಹೌಸ್ ರೌಂಡ್‌ಟಾನಾ ಬಳಿಯ ರ‍್ಯಾಲಿಯ ಸ್ಥಳವನ್ನು ಅಧ್ಯಯನ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸರಿಯಾಗಿ ಪೊಲೀಸರು ಕೂಡ ಭದ್ರತೆಯನ್ನು ನಿಯೋಜನೆ ಮಾಡಿದ್ದರು. ಆದರೆ, 30ಕ್ಕೂ ಹೆಚ್ಚು ಸಾವಿರ ಜನರು ಸೇರಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರಿಗೂ ಕಷ್ಟವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




