Vijay Rally Stampede: ಕರೂರಿನಲ್ಲಿ ರ‍್ಯಾಲಿ ನಡೆಸಿ 39 ಜನರ ಸಾವಿಗೆ ಕಾರಣರಾದ ವಿಜಯ್ ದಳಪತಿ ಯಾರು?
ತಮಿಳುನಾಡಿನ ಕರೂರಿನಲ್ಲಿ ನಡೆದ ವಿಜಯ್ ಅವರ ರ‍್ಯಾಲಿಯಲ್ಲಿ ಸಂಭವಿಸಿದ ಭಾರಿ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದ್ದಾರೆ ಮತ್ತು 51 ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳು ಜನದಟ್ಟಣೆ, ಬಳಲಿಕೆ ಮತ್ತು ವಿಜಯ್ ಅವರ ವಿಳಂಬವಾದ ಆಗಮನವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಹಾಗಾದರೆ, ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ ಯಾರು? ಅವರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೆನ್ನೈ, ಸೆಪ್ಟೆಂಬರ್ 28: ತಮಿಳುನಾಡಿನ ಕರೂರಿನಲ್ಲಿ (Karur Stampede) ನಟ-ರಾಜಕಾರಣಿ ದಳಪತಿ ವಿಜಯ್ (Vijay Rally) ನಡೆಸಿದ ರ‍್ಯಾಲಿಯಲ್ಲಿ 39 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ವಿಜಯ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಜನಸಂದಣಿಯಿಂದ ತುಂಬಿದ್ದ ರಸ್ತೆಯಲ್ಲಿ ಭೀತಿ ಹರಡಿತು. ಅವರನ್ನು ನೋಡಲು ಮಧ್ಯಾಹ್ನದಿಂದ ಸಾವಿರಾರು ಜನರು ಕಾಯುತ್ತಿದ್ದರು, ಆಯಾಸ ಮತ್ತು ನೀರಿನ ಕೊರತೆಯಿಂದಾಗಿ ಅನೇಕರು ಮೂರ್ಛೆ ಹೋದರು. ಹಲವಾರು ಮಹಿಳೆಯರು ಮತ್ತು ಮಕ್ಕಳು ದಣಿದ ಸ್ಥಿತಿಯಲ್ಲಿ ಕುಸಿದು ಬಿದ್ದರು.
ಈ ವೇಳೆ ವಿಜಯ್ ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ, ಜನಸಮೂಹಕ್ಕೆ ನೀರಿನ ಬಾಟಲಿಗಳನ್ನು ಎಸೆದು, ಪೊಲೀಸರ ಸಹಾಯಕ್ಕಾಗಿ ಮನವಿ ಮಾಡಿದರು. ತಕ್ಷಣ ಅಸ್ವಸ್ಥಗೊಂಡ ಜನರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತು. ಆದರೂ 39 ಜನರು ಪ್ರಾಣ ಕಳೆದುಕೊಂಡರು. ಇದರಲ್ಲಿ ತನ್ನ ಇಷ್ಟದ ನಟ ವಿಜಯ್ನನ್ನು ನೋಡಲು ಅಪ್ಪ-ಅಮ್ಮನ ಜೊತೆ ಬಂದಿದ್ದ ಮಗು ಕೂಡ ಸೇರಿದೆ.
ಇದನ್ನೂ ಓದಿ: ದಳಪತಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 39ಕ್ಕೆ ಏರಿಕೆ
ದಳಪತಿ ವಿಜಯ್ ಯಾರು?:
ದಳಪತಿ ವಿಜಯ್ ಕಾಲಿವುಡ್ ಚಿತ್ರರಂಗದ ಜನಪ್ರಿಯ ನಟ. ಜೂನ್ 22, 1974ರಂದು ಜೋಸೆಫ್ ವಿಜಯ್ ಚಂದ್ರಶೇಖರ್ ಆಗಿ ಜನಿಸಿದ ದಳಪತಿ ವಿಜಯ್, ಚಲನಚಿತ್ರ ನಿರ್ಮಾಪಕ ಎಸ್.ಎ. ಚಂದ್ರಶೇಖರ್ ಮತ್ತು ಹಿನ್ನೆಲೆ ಗಾಯಕಿ ಶೋಭಾ ಚಂದ್ರಶೇಖರ್ ಅವರ ಪುತ್ರ. ಅವರು 1984ರಲ್ಲಿ ವೆಟ್ರಿ ಸಿನಿಮಾದ ಮೂಲಕ ಬಾಲನಟರಾಗಿ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ನಂತರ ರಜನಿಕಾಂತ್ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ವಿಜಯ್ 1992ರಲ್ಲಿ ನಲೈಯ ತೀರ್ಪು ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದರು.
ಅದಾದ ನಂತರ ಅವರು ಸತತ 9 ಹಿಟ್ ಸಿನಿಮಾಗಳನ್ನು ನೀಡಿದರು. ಆ ಸಿನಿಮಾಗಳು 200 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಗಳಿಸಿದವು. ತಮಿಳು ಸಿನಿಮಾ ರಂಗದಲ್ಲಿ ಸೂಪರ್‌ಸ್ಟಾರ್ ದಳಪತಿ ವಿಜಯ್ ಈಗ ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಸುಮಾರು 30 ವರ್ಷಗಳ ಅದ್ಭುತ ಚಲನಚಿತ್ರ ವೃತ್ತಿಜೀವನ ನಡೆಸಿರುವ ವಿಜಯ್ ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ವಿಜಯ್ ಅವರ ಬ್ರ್ಯಾಂಡ್ ಮೌಲ್ಯವು ರಿಯಲ್ ಎಸ್ಟೇಟ್, ಅನುಮೋದನೆಗಳು ಮತ್ತು ನಿರ್ಮಾಣದಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತದೆ.
ಇದನ್ನೂ ಓದಿ: Karur Tragedy: ಮಧ್ಯರಾತ್ರಿಯೇ ಕರೂರ್ಗೆ ಸಿಎಂ ಭೇಟಿ; ಯಾವ ರ‍್ಯಾಲಿಯಲ್ಲೂ ಇಷ್ಟು ಜನ ಬಲಿಯಾಗಿರಲಿಲ್ಲ ಎಂದ ಸ್ಟಾಲಿನ್
ಟಾಮ್ ಕ್ರೂಸ್ ಅವರ ಮನೆಯಿಂದ ಸ್ಫೂರ್ತಿ ಪಡೆದ ವಿಜಯ್, ಚೆನ್ನೈನ ನೀಲಂಕರೈನಲ್ಲಿರುವ ಕ್ಯಾಸುವಾರಿನಾ ಡ್ರೈವ್‌ನಲ್ಲಿ ಅದ್ಭುತವಾದ ಕಡಲತೀರದ ಬಂಗಲೆಯನ್ನು ನಿರ್ಮಿಸಿದ್ದಾರೆ. ಆಧುನಿಕ ವಿನ್ಯಾಸ ಮತ್ತು ಬಂಗಾಳ ಕೊಲ್ಲಿಯ ಅದ್ಭುತ ನೋಟವನ್ನು ಹೊಂದಿರುವ ಇದು ಅವರ ಐಷಾರಾಮಿ ಜೀವನವನ್ನು ಪ್ರತಿಬಿಂಬಿಸುತ್ತದೆ.
ರಾಜಕೀಯ ಪ್ರವೇಶ:
ಜನ ನಾಯಗನ್ ವಿಜಯ್ ಅವರ ಕೊನೆಯ ಸಿನಿಮಾ. ಅದಾದ ನಂತರ ವಿಜಯ್ ರಾಜಕೀಯದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ನಟನೆಯಿಂದ ನಿವೃತ್ತಿ ಘೋಷಿಸಿದರು.
ಫೆಬ್ರವರಿ 2, 2024ರಂದು ವಿಜಯ್ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಪ್ರಾರಂಭಿಸಿದರು. ಚಿತ್ರರಂಗವನ್ನು ತ್ಯಜಿಸುವ ನಿರ್ಧಾರವನ್ನು ಘೋಷಿಸಿದರು. ರಾಜಕೀಯದ ಮೂಲಕ ತಮಿಳುನಾಡಿನ ಜನರಿಗೆ ತಮ್ಮ ಋಣವನ್ನು ತೀರಿಸಲು ಬಯಸುತ್ತೇನೆ ಎಂದು ವಿಜಯ್ ಹೇಳಿದರು. ಅಂದಿನಿಂದ, ಅವರ ರ‍್ಯಾಲಿಗಳು ಭಾರಿ ಜನಸಮೂಹವನ್ನು ಸೆಳೆದಿವೆ, ಇದು ರಾಜ್ಯದಲ್ಲಿ ಅವರ ದೊಡ್ಡ ಅಭಿಮಾನಿ ಬಳಗವನ್ನು ಪ್ರತಿಬಿಂಬಿಸುತ್ತದೆ. ಕರೂರ್ ದುರಂತವು ಅಂತಹ ದೊಡ್ಡ ರಾಜಕೀಯ ಸಭೆಗಳನ್ನು ನಿರ್ವಹಿಸುವ ಸವಾಲುಗಳನ್ನು ಎತ್ತಿ ತೋರಿಸಿದೆ. ಕರೂರಿನಲ್ಲಿ ಕೂಡ ವಿಜಯ್ ಅವರ ರ‍್ಯಾಲಿಗಾಗಿ ಟಿವಿಕೆಯಿಂದ ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೂ ದುರದೃಷ್ಟವಶಾತ್ ನಿರೀಕ್ಷೆಗೂ ಮೀರಿದ ಜನರು ಸೇರಿ ಕಾಲ್ತುಳಿತ ಉಂಟಾಯಿತು. ವಿಜಯ್ ಹಾಗೂ ಅವರ ಪಕ್ಷವಾದ ಟಿವಿಕೆ ಪಾಲಿಗೆ ಇದು ಅತ್ಯಂತ ಕರಾಳ ದಿನವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




