AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷದ ಮಗು ಮೇಲೆ ಅತ್ಯಾಚಾರ ನಡೆಸಿದವನಿಗೆ ಗ್ರಾಮ ಪಂಚಾಯ್ತಿಯಿಂದ 1 ಲಕ್ಷ ರೂ. ದಂಡ; ಅದೇ ಹಣದಲ್ಲಿ ರಾತ್ರಿ ಎಣ್ಣೆ ಪಾರ್ಟಿ!

ಸಣ್ಣ ಮಗುವಿನ ಮೇಲೆ ಅತ್ಯಾಚಾರದಂತಹ ಭೀಕರ ಘಟನೆ ನಡೆದಾಗ ಕಾನೂನು ಕ್ರಮ ಕೈಗೊಳ್ಳಬೇಕಾದ ಜಾಗದಲ್ಲಿ, ಮಾನವೀಯತೆಯನ್ನೇ ಮರೆತು ಅತ್ಯಾಚಾರಿಯ ಹಣದಿಂದಲೇ ಎಣ್ಣೆ ಪಾರ್ಟಿ ಮಾಡಿದ ಅಮಾನವೀಯ ಘಟನೆಯೊಂದು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 3 ವರ್ಷದ ಪುಟ್ಟ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಗ್ರಾಮ ಪಂಚಾಯತ್ ಯತ್ನಿಸಿದ್ದರು. ವಿಷಯ ತಿಳಿದು ಪೊಲೀಸರು ಆ ಹಳ್ಳಿಗೆ ಹೋದಾಗ ಅತ್ಯಾಚಾರಿಯ ದಂಡದ ಹಣದಲ್ಲಿ ಆಯೋಜಿಸಲಾಗಿದ್ದ ಮದ್ಯದ ಪಾರ್ಟಿ ನಡೆಯುತ್ತಿತ್ತು. ಆಮೇಲೇನಾಯ್ತು? ಎಂಬ ಮಾಹಿತಿ ಇಲ್ಲಿದೆ.

3 ವರ್ಷದ ಮಗು ಮೇಲೆ ಅತ್ಯಾಚಾರ ನಡೆಸಿದವನಿಗೆ ಗ್ರಾಮ ಪಂಚಾಯ್ತಿಯಿಂದ 1 ಲಕ್ಷ ರೂ. ದಂಡ; ಅದೇ ಹಣದಲ್ಲಿ ರಾತ್ರಿ ಎಣ್ಣೆ ಪಾರ್ಟಿ!
Odisha Gram Panchayat MeetingImage Credit source: x
ಸುಷ್ಮಾ ಚಕ್ರೆ
|

Updated on: Jul 14, 2026 | 6:44 PM

Share

ರಾಂಚಿ, ಜುಲೈ 14: ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆಗೆ ಜಾರಿಗೆ ಬಂದು ಹಲವು ದಶಕಗಳೇ ಕಳೆದಿದ್ದರೂ ಕೆಲವು ಹಳ್ಳಿಗಳಲ್ಲಿ ಕೋರ್ಟ್ ಬದಲು ಗ್ರಾಮ ಪಂಚಾಯ್ತಿಯನ್ನೋ, ಊರ ಮುಖಂಡರನ್ನೋ ನಂಬಿಕೊಂಡು ಅವರಿಂದಲೇ ನ್ಯಾಯ ತೀರ್ಮಾನ ತೆಗೆದುಕೊಳ್ಳುವ ಜನರು ಇಂದಿಗೂ ಇದ್ದಾರೆ. ಜಮೀನಿನ ವ್ಯಾಜ್ಯ, ಅಣ್ಣ-ತಮ್ಮಂದಿರ ಕಲಹಗಳಂತಹ ಸಣ್ಣ ವಿಷಯಗಳನ್ನು ಊರೊಳಗೇ ಬಗೆಹರಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಜಾರ್ಖಂಡ್​​ನಲ್ಲಿ (Jharkhand) 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಆ ಮಗುವಿನ ತಂದೆ-ತಾಯಿ ಪಂಚಾಯ್ತಿ ಕಟ್ಟೆಯಲ್ಲಿ ನ್ಯಾಯ ಕೇಳಿದ್ದಾರೆ. ಈ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಪಂಚಾಯ್ತಿ ಸದಸ್ಯರು ಆರೋಪಿಗೆ ಕೇವಲ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಆ ಹಣವನ್ನು ಬಾಲಕಿಯ ಮನೆಯವರಿಗೂ ಕೊಡದೆ ಆ ಪಂಚಾಯ್ತಿಯ ಸದಸ್ಯರು ಆ ಹಣದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ್ದಾರೆ!

ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಗ್ರಾಮ ಪಂಚಾಯತ್ ಯತ್ನಿಸಿರುವ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಂಚಾಯತ್ ಸದಸ್ಯರು ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಅದರಲ್ಲಿ ಬಂದ ಮುಂಗಡ ಹಣದಲ್ಲಿ ಮದ್ಯ ಮತ್ತು ಮಾಂಸದ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಸರಳಾ ಭಟ್ ಅತ್ಯಾಚಾರ, ಕೊಲೆ ಪ್ರಕರಣ; 36 ವರ್ಷದ ಬಳಿಕ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ!

ಏನಿದು ಘಟನೆ?:

ಆರೋಪಿ ಸುನಿಲ್ ಲೋಹಾರ ಶನಿವಾರ ಸಂಜೆ ತಮ್ಮದೇ ಊರಿನವರೊಬ್ಬರ ಮನೆಗೆ ಹೋಗಿದ್ದನು. ಆ ಮನೆಯಲ್ಲಿ 3 ವರ್ಷದ ಹೆಣ್ಣುಮಗುವಿತ್ತು. ಆತ ಹೋದ ಸಮಯದಲ್ಲಿ ಮಗುವಿನ ತಾಯಿ ಮನೆಯಲ್ಲಿದ್ದರು. ತಾಯಿ ತನ್ನ ಕೆಲಸಗಳಲ್ಲಿ ನಿರತರಾಗಿದ್ದಾಗ ಆ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ ಆರೋಪಿ ಸುನಿಲ್ ತಾನು ಮಗುವನ್ನು ನೋಡಿಕೊಳ್ಳುತ್ತೇನೆ, ನೀವು ಕೆಲಸ ಮಾಡಿಕೊಳ್ಳಿ ಎಂದಿದ್ದಾನೆ. ಅದಕ್ಕೆ ಆ ತಾಯಿ ಒಪ್ಪಿದ ನಂತರ ಮಗುವನ್ನು ಮತ್ತೊಂದು ಕೋಣೆಗೆ ಕರೆದೊಯ್ದು ಅದೇ ಮನೆಯಲ್ಲಿ ಆತ ಅತ್ಯಾಚಾರ ಎಸಗಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ಮಗು ಜೋರಾಗಿ ಅಳಲು ಪ್ರಾರಂಭಿಸಿದಾಗ ತಾಯಿ ತಕ್ಷಣ ಓಡಿ ಬಂದಿದ್ದಾರೆ. ಆಗ ಮಗುವಿನ ಸ್ಥಿತಿಯನ್ನು ಕಂಡು ತಕ್ಷಣವೇ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.

ಪೊಲೀಸ್ ದೂರಿನ ಬದಲು ಪಂಚಾಯ್ತಿ:

ಈ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ದೂರು ನೀಡುವ ಬದಲು, ಗ್ರಾಮದ ಪಂಚಾಯತ್ ಸದಸ್ಯರು ಈ ವಿಷಯವನ್ನು ಗ್ರಾಮದ ಮಟ್ಟದಲ್ಲೇ ಮುಚ್ಚಿಹಾಕಲು ನಿರ್ಧರಿಸಿದರು. ಭಾನುವಾರ ಗ್ರಾಮದಲ್ಲಿ ತುರ್ತು ಸಭೆ ಕರೆದ ಪಂಚಾಯತ್, ಕಾನೂನು ಕ್ರಮದಿಂದ ಆರೋಪಿಯನ್ನು ಬಚಾವ್ ಮಾಡಲು ಆತನಿಗೆ 1 ಲಕ್ಷ ರೂ. ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನಿಸಿತು. ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಸಮಾಧಾನದಲ್ಲಿ ಆ ಅತ್ಯಾಚಾರ ಆರೋಪಿ ಸುನಿಲ್ ಲೋಹಾರ ದಂಡದ ಒಟ್ಟು ಮೊತ್ತದಲ್ಲಿ ತಕ್ಷಣವೇ 20,000 ರೂ.ಗಳನ್ನು ಪಂಚಾಯತ್‌ಗೆ ನೀಡಿದ. ಇನ್ನುಳಿದ 80,000 ರೂ.ಗಳನ್ನು ಒಂದು ವಾರದೊಳಗೆ ನೀಡಬೇಕೆಂದು ಆತನಿಗೆ ಸೂಚಿಸಲಾಯಿತು. ಅದಕ್ಕೆ ಆತನೂ ಒಪ್ಪಿದ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಗಲ್ಲು ಶಿಕ್ಷೆ!

ಪಂಚಾಯತ್ ಸದಸ್ಯರು ಆತ ಕೊಟ್ಟ 20,000 ರೂ.ಗಳನ್ನು ಸಂತ್ರಸ್ತರ ಕುಟುಂಬಕ್ಕೂ ಕೊಡದೆ ತಾವೇ ರಾತ್ರಿ ಮಾಂಸ ಮತ್ತು ಮದ್ಯದ ಭರ್ಜರಿ ಪಾರ್ಟಿ ಆಯೋಜಿಸಿ ಖರ್ಚು ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಷಯ ತಿಳಿದ ಊರಿನವರು ಯಾರೋ ಘಾಘ್ರಾ ಪೊಲೀಸ್ ಠಾಣೆಯ ಪ್ರಭಾರಿ ಮೋಹನ್ ಕುಮಾರ್ ಅವರಿಗೆ ಫೋನ್ ಮಾಡಿದ್ದರು. ಈ ಅತ್ಯಾಚಾರ ಪ್ರಕರಣವನ್ನು ಹಳ್ಳಿಯಲ್ಲೇ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ, ಮಗುವಿನ ಕುಟುಂಬದ ಮೇಲೆ ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹೇರಲಾಗುತ್ತಿದೆ ಎಂಬ ವಿಷಯವನ್ನು ಅವರು ಹೇಳಿದರು.

ಪೊಲೀಸರ ದಾಳಿಯಿಂದ ಬಯಲಾಯ್ತು ಕೃತ್ಯ:

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ತಕ್ಷಣವೇ ಆ ಗ್ರಾಮಕ್ಕೆ ಧಾವಿಸಿದರು. ಅವರು ಹೋದಾಗ ಪಂಚಾಯ್ತಿಯವರ ಎಣ್ಣೆ ಪಾರ್ಟಿ ಜೋರಾಗಿ ನಡೆಯುತ್ತಿತ್ತು. ಪೊಲೀಸರು ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲೇ ಆರೋಪಿ ಸುನಿಲ್ ಲೋಹಾರನನ್ನು ಬಂಧಿಸಿದರು. ನಂತರ ಸಂತ್ರಸ್ತ ಮಗುವಿನ ತಾಯಿಯಿಂದ ಹೇಳಿಕೆ ಪಡೆದು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡರು.

ಪಂಚಾಯತ್ ಅಧ್ಯಕ್ಷ ಹೇಳಿದ್ದೇನು?:

ಈ ಘಟನೆಯ ಕುರಿತು ಅರಂಗಿ ಪಂಚಾಯತ್ ಮುಖ್ಯಸ್ಥ ಲೋಡೋ ಎಕ್ಕಾ ಪ್ರತಿಕ್ರಿಯೆ ನೀಡಿದ್ದಾರೆ. 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಬಗ್ಗೆ ಪಾಲ್ಮಾ ಗ್ರಾಮದಲ್ಲಿ ಸಭೆ ನಡೆದಿರುವುದು ನಿಜ, ಆದರೆ ಆ ಸಭೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ತಮ್ಮ ಗ್ರಾಮಕ್ಕೆ ಬಂದು ದಾಳಿ ನಡೆಸಿದ ಮೇಲೆಯೇ ತನಗೆ ಈ ವಿಷಯ ತಿಳಿಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us