
ಜೈಪುರ, ಜುಲೈ 23: ಸಾಮಾನ್ಯವಾಗಿ ಜೈಲು(Jail) ಎಂದರೆ ಕಟ್ಟುನಿಟ್ಟಿನ ಶಿಸ್ತು, ಎತ್ತರದ ಕಲ್ಲಿನ ಗೋಡೆಗಳು ಹಾಗೂ ತಾವೆಸಗಿದ ಅಪರಾಧಗಳ ಕಹಿ ನೆನಪುಗಳನ್ನು ಬಿಟ್ಟು ಕೈದಿಗಳಿಗೆ ಮತ್ತೇನು ಸಿಗಲು ಸಾಧ್ಯ. ಆದರೆ ಜೋಧ್ಪುರದ ಮಂಡೋರ್ ಓಪನ್ ಜೈಲಿನಲ್ಲಿ ಜೈಲಾಧಿಕಾರಿಗಳ ಆಜ್ಞೆಯ ಬದಲು ಮದುವೆಯ ಮಂತ್ರಗಳು ಮೊಳಗಿವೆ, ಕೈಕೋಳ ಧರಿಸಿದ್ದ ಕೈಗಳಲ್ಲಿ ಕೈದಿಗಳು ಹೂಮಾಲೆ ವಿನಿಮಯ ಮಾಡಿಕೊಂಡಿದ್ದಾರೆ.
ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮುಲಾರಾಮ್ ಮತ್ತು ಸೀಮಾ ಎಂಬ ಇಬ್ಬರು ಕೈದಿಗಳು, ರಾಜಸ್ಥಾನ ಹೈಕೋರ್ಟ್‌ನ ವಿಶೇಷ ಅನುಮತಿ ಪಡೆದು ಜೈಲಿನ ಅಂಗಳದಲ್ಲೇ ದಂಪತಿಯಾಗಿ ಹೊಸ ಬಾಳಿಗೆ ಪಾದಾರ್ಪಣೆ ಮಾಡಿದ್ದಾರೆ.
ಮುಲಾರಾಮ್ ಮತ್ತು ಸೀಮಾ ಇಬ್ಬರೂ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರು. ಆದರೆ ಜೈಲಿನಲ್ಲಿ ಅವರ ಉತ್ತಮ ನಡವಳಿಕೆಯನ್ನು ಕಂಡು, ಅವರನ್ನು ಶಿಕ್ಷೆ ತಿದ್ದುಪಡಿಗಾಗಿ ನಿರ್ಮಿಸಲಾದ ‘ಮಂಡೋರ್ ಓಪನ್ ಜೈಲಿಗೆ’ ವರ್ಗಾಯಿಸಲಾಗಿತ್ತು. ಇದೇ ಓಪನ್ ಜೈಲಿನಲ್ಲಿ ಇಬ್ಬರ ನಡುವೆ ಪರಿಚಯವಾಗಿ, ಕಾಲಕ್ರಮೇಣ ಅದು ಪ್ರೇಮವಾಗಿ ಬದಲಾಯಿತು. ಜೈಲಿನ ಕತ್ತಲೆಯಿಂದ ಹೊರಬಂದು ತಮ್ಮ ಜೀವನವನ್ನು ಹೊಸದಾಗಿ ಪುನರ್ನಿರ್ಮಿಸಿಕೊಳ್ಳಲು ನಿರ್ಧರಿಸಿದ ಈ ಜೋಡಿ, ಒಟ್ಟಿಗೆ ಬಾಳುವ ನಿರ್ಧಾರಕ್ಕೆ ಬಂದರು.
ಮತ್ತಷ್ಟು ಓದಿ: ಫೇಸ್ಬುಕ್ನಲ್ಲಿ ಸಿಕ್ಕ ಪ್ರೀತಿಗಾಗಿ ವೀಸಾ ಇಲ್ಲದೆ ಪಾಕ್ಗೆ ಹಾರಿದ್ದ ಯುಪಿ ಯುವಕ, ಹೋದ್ಮೇಲೆ ನೀನ್ಯಾರು ಅಂದ್ಲು, ಆತ ಜೈಲು ಪಾಲು
ಕೈದಿಗಳಾಗಿದ್ದರಿಂದ ಇವರ ಮದುವೆಗೆ ನ್ಯಾಯಾಲಯದ ಅನುಮೋದನೆ ಕಡ್ಡಾಯವಾಗಿತ್ತು. ಮಾನವೀಯ ಹಕ್ಕುಗಳು ಹಾಗೂ ಪುನರ್ವಸತಿ ಕಲ್ಪನೆಯನ್ನು ಎತ್ತಿಹಿಡಿದ ರಾಜಸ್ಥಾನ ಹೈಕೋರ್ಟ್, ಅಗತ್ಯ ಪೆರೋಲ್ ನೀಡುವ ಮೂಲಕ ಮದುವೆಗೆ ಅನುಮತಿ ನೀಡಿತು. ಸಪ್ತಪದಿ (ಸಾತ್ ಫೇರೆ) ತುಳಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸಾಮಾನ್ಯ ಮದುವೆಗಳಂತೆ ಭಾರಿ ಜನಸ್ತೋಮವಿರಲಿಲ್ಲ. ಜೈಲಾಧಿಕಾರಿಗಳು, ಪೋಲಿಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 21 ಜನರಷ್ಟೇ ಈ ಅಪರೂಪದ ಮದುವೆಗೆ ಸಾಕ್ಷಿಯಾದರು. ವಿವಾಹದ ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಜೈಲು ಸಿಬ್ಬಂದಿಯೇ ಬಂಧುಗಳಂತೆ ದಂಪತಿಯನ್ನು ಆಶೀರ್ವದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಾಮಾನ್ಯ ಜೈಲುಗಳಂತೆ ಓಪನ್ ಜೈಲುಗಳಲ್ಲಿ ಬಂದಿಖಾನೆಗಳಿರುವುದಿಲ್ಲ. ಉತ್ತಮ ನಡವಳಿಕೆ ತೋರುವ ಕೈದಿಗಳಿಗೆ ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಮತ್ತು ಜೀವನೋಪಾಯದ ತರಬೇತಿ ನೀಡಿ, ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಸಹಾಯ ಮಾಡಲಾಗುತ್ತದೆ. ಕೈದಿಗಳನ್ನು ಕೇವಲ ಅವರು ಮಾಡಿದ ಅಪರಾಧದಿಂದಷ್ಟೇ ನೋಡದೆ, ಅವರಿಗೆ ತಿದ್ದಿಕೊಳ್ಳಲು ಎರಡನೇ ಅವಕಾಶ ನೀಡುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.
ಮದುವೆಯ ಸಂಭ್ರಮ ಮುಗಿದ ನಂತರ, ದಂಪತಿ ತಮ್ಮ ಜೀವಾವಧಿ ಶಿಕ್ಷೆಯನ್ನು ತೆರೆದ ಜೈಲಿನ ನಿಯಮಗಳಡಿಯಲ್ಲೇ ಮುಂದುವರರೆಸಲಿದ್ದಾರೆ. ಆದರೆ ಈಗ ಅವರು ಪ್ರತ್ಯೇಕ ಕೈದಿಗಳಲ್ಲ, ಬದಲಿಗೆ ಪರಸ್ಪರ ಜೋಡಿಯಾಗಿ ಶಿಕ್ಷೆ ಅನುಭವಿಸಲಿದ್ದಾರೆ. ಜೈಲಿನ ಗೋಡೆಗಳ ಮಧ್ಯೆ ಶಪಥ ಸ್ವೀಕರಿಸಿದ ಈ ಜೋಡಿಗೆ ಇದು ಕೇವಲ ಮದುವೆಯಲ್ಲ, ಬದಲಾಗಿ ಭರವಸೆ, ಘನತೆ ಮತ್ತು ಜೀವನವನ್ನು ಮರುರೂಪಿಸಿಕೊಳ್ಳುವ ಅಪರೂಪದ ಎರಡನೇ ಅವಕಾಶವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ