ಹಲವು ಕಾಂಗ್ರೆಸ್ ನಾಯಕರು, ಅಭ್ಯರ್ಥಿಗಳನ್ನು ಬಿಜೆಪಿ ಸಂಪರ್ಕಿಸಿದೆ; ಅಸ್ಸಾಂನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ವೀಕ್ಷಕರ ಸಭೆಯ ನಂತರ ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, "ನಮ್ಮ ಕೈ ಕಮಲಕ್ಕಿಂತ ಬಲವಾಗಿದೆ. ನಮ್ಮ ಕೈ ಯಾವಾಗಲೂ ಮೇಲೆಯೇ ಇರುತ್ತದೆ. ಸ್ವಲ್ಪ ಸಮಯದ ನಂತರ ಕಮಲ ಕಣ್ಮರೆಯಾಗುತ್ತದೆ. ನಾವು ನಮ್ಮ ಅಭ್ಯರ್ಥಿಗಳನ್ನು ಸಿದ್ಧಪಡಿಸಿದ್ದೇವೆ. ಮೇ 4ನೇ ತಾರೀಖಿನ ನಂತರ ನಾವು ಮತ್ತೆ ಅಧಿಕಾರಕ್ಕೆ ಹಿಂತಿರುಗುತ್ತೇವೆ ಎಂಬ ವಿಶ್ವಾಸ ಅವರಲ್ಲಿದೆ. ನಾವು ಇಲ್ಲಿ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ನಮಗೂ ಇದೆ" ಎಂದಿದ್ದಾರೆ.

ಹಲವು ಕಾಂಗ್ರೆಸ್ ನಾಯಕರು, ಅಭ್ಯರ್ಥಿಗಳನ್ನು ಬಿಜೆಪಿ ಸಂಪರ್ಕಿಸಿದೆ; ಅಸ್ಸಾಂನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ
Dk Shivakumar In Assam
Image Credit source: PTI

Updated on: May 02, 2026 | 7:02 PM

ಗುವಾಹಟಿ, ಮೇ 2: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Assembly Elections) ಕಾಂಗ್ರೆಸ್ ಪಕ್ಷದ ಹಿರಿಯ ವೀಕ್ಷಕರಾದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್, ಭೂಪೇಶ್ ಬಘೇಲ್ ಮತ್ತು ಜಿತೇಂದ್ರ ಸಿಂಗ್ ಇಂದು ಅಸ್ಸಾಂನಲ್ಲಿ ಮೈತ್ರಿಕೂಟದ ಪಾಲುದಾರರೊಂದಿಗೆ ಸಭೆ ನಡೆಸಿದರು. ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಅಸ್ಸಾಂನ ಇತರ 5 ಪಕ್ಷಗಳಾದ ರೈಜೋರ್ ದಳ, ಅಸ್ಸಾಂ ರಾಷ್ಟ್ರೀಯ ಪರಿಷತ್ (AJP), ಸಿಪಿಐಎಂ (CPIM), ಎಪಿಎಚ್​ಎಲ್​ಸಿ (APHLC) ಮತ್ತು ಸಿಪಿಐಎಂಎಲ್ (CPIML) ಜೊತೆ ಮೈತ್ರಿ ಮಾಡಿಕೊಂಡಿದೆ.

ಈ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ತಳ್ಳಿಹಾಕಿದರು. “ಅಸ್ಸಾಂನಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ, ಒಗ್ಗಟ್ಟಾಗಿದೆ ಮತ್ತು ಆತ್ಮವಿಶ್ವಾಸದಿಂದ ಕೂಡಿದೆ. ನಾವು ಚುನಾವಣೆಯಲ್ಲಿ ಚೆನ್ನಾಗಿ ಹೋರಾಡಿದ್ದೇವೆ. ಮಾಧ್ಯಮಗಳು ಎಕ್ಸಿಟ್ ಪೋಲ್ ಬಗ್ಗೆ ಏನೇ ವರದಿ ಮಾಡಿದರೂ ವೈಯಕ್ತಿಕವಾಗಿ ನಾನು ಅದನ್ನು ನಂಬುವುದಿಲ್ಲ. ಅಸ್ಸಾಂನ ಮತದಾರರಲ್ಲಿ ದೊಡ್ಡ ಭಯವಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಳ್ಳದವರಿಗೆ ಉಚಿತ ಕೊಡುಗೆಗಳನ್ನು ಸಹ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ, ಯಾರು ಯಾರಿಗೆ ಮತ ಹಾಕಿದ್ದಾರೆಂದು ಹೇಳಲು ಯಾರು ಮುಂದೆ ಬರುತ್ತಾರೆ? ಈ ಮತದಾನೋತ್ತರ ಸಮೀಕ್ಷೆಗಳೆಲ್ಲ ಬರೀ ಸುಳ್ಳು” ಎಂದಿದ್ದಾರೆ.

ಇದನ್ನೂ ಓದಿ: ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯ

“ನಮ್ಮದೇ ಆದ ಆಂತರಿಕ ಸಮೀಕ್ಷೆಯಲ್ಲಿ ನಮಗೆ ವಿಶ್ವಾಸವಿದೆ. ಈ ಮಧ್ಯೆ ಬಿಜೆಪಿ ಕಡೆಯಿಂದಲೂ ನಾವು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಶಾಸಕರು ಮತ್ತು ಸಚಿವರು ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ನಾವು ಭೇಟಿ ಮಾಡಿದ್ದೇವೆ. ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ ಎಂಬ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ನಮ್ಮ ನಾಯಕರು, ಅಭ್ಯರ್ಥಿಗಳು ಮತ್ತು ಸಹಚರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: 5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಆಕ್ಸಿಸ್ ಮೈ ಇಂಡಿಯಾ 126 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 88ರಿಂದ 100 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 24ರಿಂದ 36 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಿದೆ. ಅಸ್ಸಾಂ ಚುನಾವಣೆಗೆ ಮತ ಎಣಿಕೆ ಮೇ 4ರಂದು ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Sat, 2 May 26

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us