ಬ್ರಿಕ್ಸ್‌ ಶೃಂಗಸಭೆಯಲ್ಲಿ ಜಾಗತಿಕ ನಾಯಕರನ್ನು ಸೆಳೆದ ಕರ್ನಾಟಕದ ಬೇಳೆ ಸಾರು!

ಸಸ್ಯಾಹಾರಿಗಳಿರಲಿ, ಮಾಂಸಾಹಾರಿಗಳೇ ಇರಲಿ ಬೇಳೆ ಸಾರು ಎಂಬುದು ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪ್ರತಿಯೊಬ್ಬರ ಮನೆಯಲ್ಲೂ ಮಾಡುವ ಅಡುಗೆ. ಅದಕ್ಕೆ ಹೊಸ ಹೊಸ ರೂಪ ನೀಡಿ ಸೂಪ್, ರಸಂ ರೂಪಕ್ಕೆ ಬದಲಿಸಿದ್ದರೂ ಬೇಳೆ ಸಾರು ಎಂಬ ಸಾಂಪ್ರದಾಯಿಕ ಅಡುಗೆಯ ರುಚಿಯ ಮುಂದೆ ಬೇರಾವುದೂ ಸಮವಾಗಲಾರದು. ಈ ಬೇಳೆ ಸಾರು ಈ ಬಾರಿ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಜಾಗತಿಕ ನಾಯಕರ ಊಟದ ಮೆನುವಿನಲ್ಲೂ ಸ್ಥಾನ ಪಡೆದಿದ್ದು ವಿಶೇಷ.

ಬ್ರಿಕ್ಸ್‌ ಶೃಂಗಸಭೆಯಲ್ಲಿ ಜಾಗತಿಕ ನಾಯಕರನ್ನು ಸೆಳೆದ ಕರ್ನಾಟಕದ ಬೇಳೆ ಸಾರು!
ಬೇಳೆ ಸಾರು
Image Credit source: Getty Images

Updated on: Sep 21, 2026 | 4:27 PM

ಬೆಂಗಳೂರು, ಸೆಪ್ಟೆಂಬರ್ 21: ಹೊರಗೆಲ್ಲ ಎಷ್ಟೇ ಊಟ ಮಾಡಿದರೂ, ಮನೆಯಲ್ಲೇ ಏನೇನೋ ಹೊಸ ರೆಸಿಪಿ ಟ್ರೈ ಮಾಡಿದರೂ ಬೇಳೆ ಸಾರು ಅಥವಾ ಟೊಮ್ಯಾಟೋ ಸಾರು ನೀಡುವ ಕಂಫರ್ಟ್​ ಬೇರಾವುದೇ ನೀಡಲು ಸಾಧ್ಯವಿಲ್ಲ. ಕರ್ನಾಟಕದ ಮನೆ ಮನೆಗಳಲ್ಲಿ ‘ಬೇಳೆ ಸಾರು’ ದಿನನಿತ್ಯದ ಊಟದ ಪ್ರಮುಖ ಭಾಗ. ವಾರಕ್ಕೆ ಮೂರ್ನಾಲ್ಕು ದಿನವಾದರೂ ಬಹುತೇಕ ಮನೆಯಲ್ಲಿ ಈ ಸಾರು ಇದ್ದೇ ಇರುತ್ತದೆ. ಮದುವೆ ಇನ್ನಿತರೆ ಸಮಾರಂಭಗಳಲ್ಲಿ ಕೂಡ ಈ ಸಾರು ಇರಲೇಬೇಕು. ಕರ್ನಾಟಕದ ಜನರಿಗೆ ಬಹಳ ಪ್ರಿಯವಾದ ಈ ಸಾರು ಈ ಬಾರಿ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಮೆನುವಿನಲ್ಲೂ ಸ್ಥಾನ ಪಡೆದಿತ್ತು. ರಷ್ಯಾ, ಚೀನಾ, ಇರಾನ್, ದುಬೈ ಮುಂತಾದ ದೇಶಗಳ ನಾಯಕರು ಭಾಗವಹಿಸಿದ್ದ ಈ ಬ್ರಿಕ್ಸ್ ಶೃಂಗಸಭೆಯ ಮೆನುವಿನಲ್ಲಿ ಈ ಬೇಳೆ ಸಾರು ಸ್ಥಾನ ಪಡೆದಿದ್ದು ನಮ್ಮ ಈ ಮನೆ ಅಡುಗೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಮನ್ನಣೆ ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು.

ಈ ಬಗ್ಗೆ ‘ಇಂಡಿಯನ್ ಎಕ್ಸ್​ಪ್ರೆಸ್’ ವಿಶೇಷ ವರದಿ ಮಾಡಿದ್ದು,  ‘ಕಾರ್ನಿವೋರ್ ಕಿಚನ್’ ಸಂಸ್ಥಾಪಕ, ಶೆಫ್ ಕಲ್ಯಾಣ್ ಗೋಪಾಲಕೃಷ್ಣ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಕರ್ನಾಟಕ ತನ್ನ ಆಹಾರ ಸಂಸ್ಕೃತಿಗೆ ಹೆಚ್ಚಿನ ಮನ್ನಣೆ ಬಯಸುತ್ತಿರುವ ಈ ಸಮಯದಲ್ಲಿ ಬೇಳೆ ಸಾರಿನ ಆಯ್ಕೆಯು ಅತ್ಯಂತ ಮಹತ್ವದ ಕ್ಷಣವಾಗಿದೆ. “ಶೃಂಗಸಭೆಯ ಮೆನುವಿನಲ್ಲಿ ಕರ್ನಾಟಕದ ಬೇಳೆ ಸಾರನ್ನು ಕಂಡು ಆಶ್ಚರ್ಯವಾಯಿತು. ಆಯೋಜಕರು ದಕ್ಷಿಣ ಭಾರತದ ಆಹಾರದ ಬಗ್ಗೆ ಉತ್ತಮ ಸಂಶೋಧನೆ ನಡೆಸಿ ಇದನ್ನು ಆಯ್ಕೆ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ದೇಶದ ವಿವಿಧ ಪ್ರದೇಶಗಳ ‘ದಾಲ್-ಚಾವಲ್’ ತಳಿಗಳನ್ನು ನೋಡಿದರೆ, ನಮ್ಮ ‘ಬೇಳೆ ಸಾರು-ಅನ್ನ’ದ ಕಾಂಬಿನೇಷನ್ ಅತ್ಯಂತ ವಿಶಿಷ್ಟವಾಗಿ ಎದ್ದು ಕಾಣುತ್ತದೆ. ಇದು ವೈವಿಧ್ಯಮಯ ಖಾದ್ಯವಾದ್ದರಿಂದ, ನಮ್ಮಂತೆಯೇ ಸ್ಥಳೀಯ ತರಕಾರಿಗಳು ಮತ್ತು ಸರಿಯಾದ ಸೈಡ್ಸ್ ಜೊತೆ ಇದನ್ನು ಬಡಿಸಿರುತ್ತಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿರಿಧಾನ್ಯಗಳಿಂದ ಸಿಹಿ ತಿಂಡಿಗಳವರೆಗೆ; ಬ್ರಿಕ್ಸ್ ಶೃಂಗಸಭೆಯ ಅತಿಥಿಗಳ ಮೆನುವಿನಲ್ಲಿ ಏನಿರಲಿದೆ?

ಸಾರು ಎಂಬ ಪದ ಒಂದೇ ಆದರೂ ಪ್ರತಿಯೊಂದು ಮನೆಯಲ್ಲೂ ಅದನ್ನು ಮಾಡುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಸಾಕಷ್ಟು ವಿಧದಲ್ಲಿ ಬೇಳೆ ಸಾರು ತಯಾರಿಸಬಹುದು. ಸಾರಿನ ಪುಡಿ, ಆ ಸಾರಿಗೆ ಹಾಕುವ ಪದಾರ್ಥಗಳು, ಒಗ್ಗರಣೆ ಹೀಗೆ ಪ್ರತಿಯೊಂದು ಅಂಶವೂ ಆ ಸಾರಿನ ರುಚಿಯನ್ನು ಬೇರೆ-ಬೇರೆಯಾಗಿಸುತ್ತದೆ. ಈ ವೈವಿಧ್ಯತೆಯು ದಕ್ಷಿಣ ಭಾರತದ ವಿಶಾಲ ಆಹಾರ ಸಂಸ್ಕೃತಿಯ ಪ್ರತೀಕವಾಗಿದೆ.

‘ದಿ ದಕ್ಷಿಣ್ ಸೊಸೈಟಿ’ ಸಂಸ್ಥಾಪಕ ಡಾ. ದರ್ಶನ್ ಗೌಡ ಅವರು ಬ್ರಿಕ್ಸ್ ಮೆನುವಿನಲ್ಲಿದ್ದ ‘ತಕ್ಕಾಳಿ ಬೇಳೆ ಸಾರು’ (ಹೆಸರನ್ನು ಉದಾಹರಿಸುತ್ತಾ ‘ತಕ್ಕಾಳಿ’ ಎಂಬುದು ತಮಿಳು ಪದವಾದರೆ, ‘ಬೇಳೆ’ ಮತ್ತು ‘ಸಾರು’ ಕನ್ನಡ ಪದಗಳಾಗಿವೆ. ಇದು ದಕ್ಷಿಣ ಭಾರತದ ಭಾಷೆ ಹಾಗೂ ಆಹಾರ ಸಂಸ್ಕೃತಿಗಳು ಒಂದಕ್ಕೊಂದು ಬೆರೆತು ಬೆಳೆದಿರುವುದಕ್ಕೆ ನಿದರ್ಶನ ಎಂದಿದ್ದಾರೆ.

ಇದನ್ನೂ ಓದಿ: ಬ್ರಿಕ್ಸ್ ಭೋಜನಕೂಟದಲ್ಲಿ ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ

ಬ್ರಿಕ್ಸ್ ಮೆನುವಿನ ಈ ಸೇರ್ಪಡೆಯು ಕರ್ನಾಟಕ ಸಂಸ್ಕೃತಿಯಲ್ಲಿ ಯಾವುದಕ್ಕೆ ಸರಿಯಾದ ಮನ್ನಣೆ ಸಿಗಬೇಕು ಎಂಬ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಶೆಫ್ ಗೋಪಾಲಕೃಷ್ಣ ಅವರು ರವೆ ಇಡ್ಲಿ, ಬಿಸಿಬೇಳೆ ಭಾತ್, ಬೆಂಗಳೂರು ಮತ್ತು ಮೈಸೂರು ಶೈಲಿಯ ಮಸಾಲೆ ದೋಸೆಗಳಿಂದ ಹಿಡಿದು ವಿವಿಧ ಮಾದರಿಯ ಕಡುಬುಗಳ ಪಟ್ಟಿಯನ್ನೇ ನೀಡುತ್ತಾರೆ ಎಂದು ‘ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 21 September 26

Loading...
Unable to load recommendations.
Follow Us