
ಮಧುರೈ, ನವೆಂಬರ್ 28: ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದ ಮೇರೆಗೆ, ತಮಿಳುನಾಡಿನ ಮಧುರೈನ ತಿರುಪ್ಪರಣಕುಂಡ್ರಮ್ ಬೆಟ್ಟದ ಮೇಲಿರುವ ಪ್ರಾಚೀನ ‘ದೀಪತೂನ್’ ಕಲ್ಲಿನ ಸ್ತಂಭದಲ್ಲಿ ಇಂದು ಸಂಜೆ 5 ಗಂಟೆಗೆ ಕಾರ್ತಿಕ ದೀಪವನ್ನು ಶಾಸ್ತ್ರೋಕ್ತವಾಗಿ ಬೆಳಗಿಸಲಾಯಿತು. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರ ಬಿಗಿ ಭದ್ರತೆ ಮತ್ತು ಸುಪ್ರೀಂ ಕೋರ್ಟ್ ನೇಮಿಸಿರುವ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ನೇರ ಮೇಲ್ವಿಚಾರಣೆಯಲ್ಲಿ ಈ ಐತಿಹಾಸಿಕ ಧಾರ್ಮಿಕ ವಿಧಿವಿಧಾನ ಶಾಂತಿಯುತವಾಗಿ ನೆರವೇರಿತು.
ನವೆಂಬರ್ 24ರ ಕಾರ್ತಿಕ ದೀಪದ ದಿನದಂದು ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿ ಪಿಳ್ಳೈಯಾರ್ ಮಂಟಪದಲ್ಲಿ ಬೆಳಗಿಸಲಾದ ಪವಿತ್ರ ಜ್ಯೋತಿಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಬೆಟ್ಟದ ತುದಿಗೆ ತರಲಾಯಿತು. ಬಳಿಕ ದೇವಸ್ಥಾನದ ವಂಶಪಾರಂಪರ್ಯ ಅರ್ಚಕರು ಸುಪ್ರೀಂ ಕೋರ್ಟ್ ನೇಮಿಸಿದ ರಿಸೀವರ್‌ಗಳಾದ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರ ಸಮ್ಮುಖದಲ್ಲಿ ದೀಪತೂನ್ ಸ್ತಂಭದ ಮೇಲಿನ ಬಾಣಲೆಯಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಿದರು.
ಭಕ್ತರ ಸಂಭ್ರಮ:
ಬೆಟ್ಟದ ತುದಿಯಲ್ಲಿ ಮಹಾದೀಪ ಬೆಳಗುತ್ತಿದ್ದಂತೆಯೇ, ಬೆಟ್ಟದ ಕೆಳಭಾಗ ಮತ್ತು ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರು “ವೆಟ್ರಿವೇಲ್ ಮುರುಗನುಕ್ಕು ಅರೋಗರಾ!” ಎಂಬ ಜಯಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಬೆಟ್ಟದ ಮೇಲಿನ ದೀಪತೂನ್ ಸ್ಥಳಕ್ಕೆ ಕೇವಲ 50 ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಇದನ್ನೂ ಓದಿ: ನಾಳೆಯೇ ‘ದೀಪತೂನ್’ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಆದೇಶ; ತಮಿಳುನಾಡು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
ದೀಪ ಬೆಳಗುವ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಎಫ್ ಯೋಧರು ಬೆಟ್ಟದ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸಮೀಪದ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ದರ್ಗಾದಿಂದ ಎಲ್ಲಾ ಕಡೆಗಳಿಂದ ಕನಿಷ್ಠ 50 ಮೀಟರ್ ಬಫರ್ ವಲಯವನ್ನು ಕಾಯ್ದುಕೊಂಡು ದೀಪ ಬೆಳಗುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.
ಭಾರೀ ಪೊಲೀಸ್ ಭದ್ರತೆಯ ಹೊರತಾಗಿಯೂ, ತಿರುಪರಣಕುಂದ್ರಂ ಪರ್ವತ ಸ್ತಂಭದ ಮೇಲೆ ದೀಪ ಬೆಳಗುವುದನ್ನು ವೀಕ್ಷಿಸಲು ಬೆಟ್ಟದ ತುದಿಗೆ ಹೋಗಿದ್ದ ಭಕ್ತರಿಗೆ ಸಿಆರ್‌ಪಿಎಫ್ ಸಿಬ್ಬಂದಿ ಕೆಳಗೆ ಬರುವಂತೆ ಸೂಚಿಸಿದರು. ಬೆಟ್ಟದ ಮೇಲೆ ಹೋಗಲು ಕೇವಲ 50 ಜನರಿಗೆ ಮಾತ್ರ ಅವಕಾಶವಿದ್ದರೂ, ಎಲ್ಲಾ ಭಕ್ತರು ಕೆಳಗೆ ಬರಬೇಕೆಂದು ಅವರು ಒತ್ತಾಯಿಸಿದರು. ಹೀಗಾಗಿ, ಬೆಟ್ಟದ ಕೆಳಗಿನಿಂದಲೇ ಭಕ್ತರು ಕಾರ್ತಿಕ ದೀಪ ಬೆಳಗಿದ್ದನ್ನು ನೋಡಿ ಜೈಕಾರ ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ: ಮಧುರೈ ಕಾರ್ತಿಕ ದೀಪಕ್ಕೆ ಸಿದ್ಧತೆ; ದರ್ಗಾದತ್ತ ಮುಸ್ಲಿಮರ ದಂಡು, ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಹಿಂದೂಗಳಿಂದ ಪುಷ್ಪವೃಷ್ಟಿ
ಏನಿದು ವಿವಾದ?:
ಮಧುರೈನ ತಿರುಪ್ಪರಣಕುಂಡ್ರಮ್ ಬೆಟ್ಟದ ಮೇಲಿನ ದೀಪತೂನ್ ಸ್ತಂಭದಲ್ಲಿ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡುವಂತೆ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್, ನವೆಂಬರ್ 20ರಂದು ಆದೇಶ ನೀಡಿತ್ತು. ಆದರೆ ನವೆಂಬರ್ 24ರಂದು ದೇವಸ್ಥಾನ ಮಂಡಳಿ ಮತ್ತು ತಮಿಳುನಾಡು ಸರ್ಕಾರ ದೀಪ ಬೆಳಗಲು ಅವಕಾಶ ನೀಡದ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಶುಕ್ರವಾರ ತಮಿಳುನಾಡು ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿ ಇಂದು ದೀಪತೂನ್ನಲ್ಲಿ ದೀಪ ಬೆಳಗುವಂತೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Sat, 28 November 26