ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ಬದಲಿಸುವ ಸುಗ್ರೀವಾಜ್ಞೆಗೆ ಕೇರಳ ಸಚಿವ ಸಂಪುಟ ನಿರ್ಧಾರ
ಇದೇ ವೇಳೆ ರಾಜ್ಯಪಾಲರನ್ನು ಕುಲಪತಿ ಸ್ಥಾನದಿಂದ ಬದಲಾಯಿಸುವ ಕ್ರಮವನ್ನು ವಿರೋಧಿಸುವುದಾಗಿ ಕೇರಳದ ಕಾಂಗ್ರೆಸ್ ಹೇಳಿದೆ. ವಿಧಾನಸಭೆಯಲ್ಲಿ ಸುಗ್ರೀವಾಜ್ಞೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಲಿದೆ ಎಂದು ಕೆಪಿಸಿಸಿ...
ಕೇರಳ (Kerala) ರಾಜ್ಯಪಾಲರು ಮತ್ತು ಎಲ್‌ಡಿಎಫ್ ಸರ್ಕಾರದ (LDF government) ನಡುವಿನ ಘರ್ಷಣೆಯ ನಡುವೆ, ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿ ( chancellor of universities)ಹುದ್ದೆಯಿಂದ ರಾಜ್ಯಪಾಲರನ್ನು ಬದಲಿಸಲು ಸುಗ್ರೀವಾಜ್ಞೆ ತರಲು ಸಂಪುಟ ಬುಧವಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan)ನೇತೃತ್ವದ ಸಚಿವ ಸಂಪುಟ ಸಭೆಯು ಕೇರಳದ 14 ವಿಶ್ವವಿದ್ಯಾನಿಲಯಗಳಲ್ಲಿ ಹಿರಿಯ ಶಿಕ್ಷಣ ತಜ್ಞರನ್ನು ಕುಲಪತಿಗಳನ್ನಾಗಿ ನೇಮಿಸಲು ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಶೈಕ್ಷಣಿಕವಾಗಿ ಅತ್ಯುತ್ತಮ ವ್ಯಕ್ತಿಗಳನ್ನು ಕುಲಪತಿಗಳ ಹುದ್ದೆಗೆ ನೇಮಿಸಲು ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಧರಿಸಿದೆ.ನಿರ್ಧಾರದ ಪ್ರಕಾರ, ರಾಜ್ಯಪಾಲರು 14 ವಿಶ್ವವಿದ್ಯಾಲಯಗಳ ವಾಸ್ತವಿಕ ಕುಲಪತಿಯಾಗುತ್ತಾರೆ ಎಂದು ಹೇಳುವ ವಿಶ್ವವಿದ್ಯಾಲಯಗಳಲ್ಲಿನ ವಿಭಾಗವನ್ನು ತೆಗೆದುಹಾಕಲಾಗುತ್ತದೆ. ಕರಡು ಸುಗ್ರೀವಾಜ್ಞೆಯಲ್ಲಿ ಹೊಸ ವಿಭಾಗವನ್ನು ಇದರ ಬದಲು ಸೇರಿಸಲಾಗುವುದು. ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಹೊಣೆ ಹೊತ್ತಿರುವ ರಾಜ್ಯಪಾಲರನ್ನು ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರನ್ನಾಗಿ ನೇಮಿಸುವುದು ಸೂಕ್ತವಲ್ಲ ಎಂಬ ಪುಂಛಿ ಆಯೋಗದ ವರದಿಯ ಶಿಫಾರಸನ್ನೂ ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ರಾಜ್ಯಪಾಲರನ್ನು ಕುಲಪತಿಯಾಗಿ ನೇಮಕ ಮಾಡುವುದನ್ನು ತಪ್ಪಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿತ್ತು.
ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಪರಿಗಣಿಸಿ ಉನ್ನತ ಶೈಕ್ಷಣಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಮುಖ ವ್ಯಕ್ತಿಗಳನ್ನು ಕುಲಪತಿಗಳಾಗಿ ತರಲು ನಾವು ಉದ್ದೇಶಿಸಿದ್ದೇವೆ. ಉನ್ನತ ಶಿಕ್ಷಣ ಕ್ಷೇತ್ರದ ತಜ್ಞರನ್ನು ಕುಲಪತಿಗಳಾಗಿ ನೇಮಕ ಮಾಡುವುದು ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವ ಸಂಪುಟವು ಹೇಳಿದೆ. ಉನ್ನತ ಶಿಕ್ಷಣ ಕೇಂದ್ರಗಳನ್ನು ಅಂತರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರಗಳನ್ನಾಗಿ ಪರಿವರ್ತಿಸುವ ಕೇರಳ ಸರ್ಕಾರದ ಯೋಜನೆಯಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇದೇ ವೇಳೆ ರಾಜ್ಯಪಾಲರನ್ನು ಕುಲಪತಿ ಸ್ಥಾನದಿಂದ ಬದಲಾಯಿಸುವ ಕ್ರಮವನ್ನು ವಿರೋಧಿಸುವುದಾಗಿ ಕೇರಳದ ಕಾಂಗ್ರೆಸ್ ಹೇಳಿದೆ. ವಿಧಾನಸಭೆಯಲ್ಲಿ ಸುಗ್ರೀವಾಜ್ಞೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಕೆ.ಸುಧಾಕರನ್ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ಬಿಂದು, ರಾಜ್ಯದಲ್ಲಿ ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಸುಧಾರಣೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸುಗ್ರೀವಾಜ್ಞೆಗೆ ಸಹಿ ಹಾಕುತ್ತಾರೆಯೇ ಎಂಬ ಪ್ರಶ್ನೆಗೆ, ಅವರು ತಮ್ಮ ಸಾಂವಿಧಾನಿಕ ಕರ್ತವ್ಯಗಳ ಪ್ರಕಾರ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ