ಸಿಸ್ಟರ್ ಅಭಯಾ ಕೊಲೆ ಪ್ರಕರಣ: ಕೇರಳ ಹೈಕೋರ್ಟ್ನಿಂದ ಘೋಷಿತ ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತು, ಜಾಮೀನು
ಅಭಯಾ ಕೊಲೆ ಪ್ರಕರಣದ ಆರೋಪಿಗಳಿಗೆ ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದೆ ಮತ್ತು ಷರತ್ತುಗಳೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಕೊಚ್ಚಿ: ಸಿಸ್ಟರ್ ಅಭಯಾ ಕೊಲೆ ಪ್ರಕರಣದ (Sister Abhaya Murder) ಅಪರಾಧಿಗಳಾದ ಫಾದರ್ ಥಾಮಸ್ ಕೊಟ್ಟೂರ್ (Fr Thomas Kottoor) ಮತ್ತು ಸಿಸ್ಟರ್ ಸೆಫಿ (Sister Sephy) ಅವರಿಗೆ ಅಧೀನ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆಯ ಅನುಷ್ಠಾನವನ್ನು ಕೇರಳ ಹೈಕೋರ್ಟ್ (Kerala High Court) ಗುರುವಾರ ಅಮಾನತುಪಡಿಸಿದ್ದು, ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಸಿ.ಜಯಚಂದ್ರನ್ ಅವರಿದ್ದ ನ್ಯಾಯಪೀಠವು ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನಂತರ ಶಿಕ್ಷೆ ಅಮಾನತು ಮಾಡುವ ಆದೇಶ ಹೊರಡಿಸಿತು.
ಅವರಿಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಸೂಚಿಸಿದ ನ್ಯಾಯಪೀಠವು ತಲಾ ₹ 5 ಲಕ್ಷದ ಬಾಂಡ್ ನೀಡಬೇಕು ಎಂದು ಸೂಚಿಸಿತು. ಅಪರಾಧಿಗಳು ಮುಂದಿನ 6 ತಿಂಗಳ ಅವಧಿಗೆ ಪ್ರತಿ ಶನಿವಾರವು ತನಿಖಾಧಿಕಾರಿಯ ಎದುರು ಹಾಜರಾಗಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯದಿಂದ ಹೊರಗೆ ಹೋಗಬಾರದು ಎಂದು ಸೂಚಿಸಿತು.
ಕೊಟ್ಟಾಯಂ ಸೇಂಟ್ ಪಯಾಸ್ ಎಕ್ಸ್ ಕಾನ್ವೆಂಟ್ನ ಬಾವಿಯಲ್ಲಿ ಮಾರ್ಚ್ 27, 1992ರಂದು ಕ್ಯಾಥೋಲಿಕ್ ಕ್ರಿಶ್ಚಿಯನ್ ಪಂಥದ ಧರ್ಮ ಪ್ರಚಾರಕಿ, ಸಿಸ್ಟರ್ ಅಭಯಾ ಅವರ ಮೃತದೇಹ ಪತ್ತೆಯಾಗಿತ್ತು.
ಸಿಸ್ಟರ್ ಸೆಫಿ ಪರವಾಗಿ ವಾದ ಮಂಡಿಸಿದ ವಕೀಲ ಪಿ.ವಿಜಯ್ಬಾನು, ತನಿಖೆ ಮತ್ತು ವಿಚಾರಣೆ ಅವಧಿಯಲ್ಲಿ ಸೆಫಿ ಅವರಿಗೆ ಜಾಮೀನು ನೀಡಿದದ ವಿಷಯವನ್ನು ಪ್ರಸ್ತಾಪಿಸಿದರು. ಕಳೆದ ಡಿಸೆಂಬರ್ 22, 2020ರಿಂದಲೂ ಸೆಫಿ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ನವೆಂಬರ್ 2008ರಲ್ಲಿ ಬಂಧಿತರಾಗಿದ್ದ ಸೆಫಿ ಅವರನ್ನು ಜನವರಿ 1, 2009ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಜಾಮೀನಿನ ಮೇಲಿದ್ದಾಗ ಸೆಫಿ ಅವರು ಯಾವುದೇ ಸಾಕ್ಷ್ಯಾಧಾರ ತಿರುಚಿರಲಿಲ್ಲ. ನ್ಯಾಯಾಲಯದ ಯಾವುದೇ ಷರತ್ತು ಉಲ್ಲಂಘಿಸಿರಲಿಲ್ಲ ಎಂದು ವಿಜಯ್ಬಾನು ನ್ಯಾಯಾಲಯಕ್ಕೆ ವಿವರಿಸಿದರು. ಶಿಕ್ಷೆಯನ್ನು ರದ್ದುಪಡಿಸಬೇಕೆಂಬ ಸೆಫಿ ಅವರ ಮೇಲ್ಮನವಿಯನ್ನು ತೀರ್ಮಾನಿಸುವ ಮೊದಲೇ ಶಿಕ್ಷೆ ಅನುಭವಿಸುವಂತೆ ಮಾಡುವುದು ಸರಿಯಾಗಲಾರದು ಎಂದು ವಾದಿಸಿದರು.
ಫಾದರ್ ಥಾಮಸ್ ಕೊಟ್ಟೂರ್ ಅವರ ಪರವಾಗಿ ವಾದ ಮಂಡಿಸಿದ್ದ ಥಾಮಸ್ ಕೊಟ್ಟೂರ್, ಸರಿಯಾದ ಆಧಾರಗಳು ಇಲ್ಲದಿದ್ದರೂ ಫಾದರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದು ಕೊಲೆಯೋ ಅಲ್ಲವೋ ಎನ್ನುವುದನ್ನು ದೃಢಪಡಿಸಿಕೊಳ್ಳದೇ ಶಿಕ್ಷೆ ವಿಧಿಸಿದ್ದು ಸಿಬಿಐ ನ್ಯಾಯಾಲಯ ಮಾಡಿದ ತಪ್ಪು. ಅಭಯಾ ಅವರ ಮೃತದೇಹದ ಮೇಲಿದ್ದ ಗಾಯಗಳನ್ನು ಗಮನಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದರೆ ಈ ಗಾಯಗಳು ಹೇಗಾದವು ಎಂಬ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ ಎಂದು ಹೇಳಿದರು.
ತಿರುವನಂತಪುರದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ರದ್ದುಪಡಿಸಬೇಕೆಂಬ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಬಾಕಿ ಇರಿಸಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಿದೆ.
Sister Abhaya murder case | In response to the accused's petition, Kerala High Court suspends their life imprisonement sentence and releases them on bail with conditions
— ANI (@ANI) June 23, 2022
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Thu, 23 June 22